ಪ್ರಾಣ ಹೋದರೂ ಹಿಂದೆ ಸರಿಯಲ್ಲ...: ಸಚಿವ ಗೋಪಾಲಯ್ಯ ಎದುರೇ ಸಿಎಂಗೆ ಕಪ್ಪುಬಾವುಟ ಪ್ರದರ್ಶನದ ಎಚ್ಚರಿಕೆ ನೀಡಿದ ರೈತರು
ಮಂಡ್ಯದಲ್ಲಿ ಕಬ್ಬು ದರ ನಿಗದಿಗೆ ಆಗ್ರಹಿಸಿ ಮುಂದುವರಿದ ಅಹೋರಾತ್ರಿ ಧರಣಿ

ಮಂಡ್ಯ, ಡಿ.14: ಕಬ್ಬು ಮತ್ತು ಹಾಲು ದರ ನಿಗದಿ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವ ರೈತರು ಈಗಾಗಲೇ ಡಿ.19ರಂದು ಮಂಡ್ಯ ಬಂದ್‍ಗೆ ಕರೆ ನೀಡಿದ್ದು, ಇದೀಗ ಜಿಲ್ಲೆಗೆ ಆಗಮಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕಪ್ಪು ಬಾವುಟ ತೋರುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಬುಧವಾರ ರೈತರನ್ನು ಭೇಟಿ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ, ಸರಕಾರ ತಮ್ಮ ಬೇಡಿಕೆ ಈಡೇರಿಸಲಿದೆ. ಧರಣಿ ಹಿಂಪಡೆದು ಬಂದ್ ಪ್ರಸ್ತಾವ ಕೈಬಿಡಬೇಕು ಎಂದು ಮಾಡಿದ ಮನವಿಯನ್ನು ರೈತರು ಸಾರಾಸಗಟಾಗಿ ತಿರಸ್ಕರಿಸಿದರು. ಸಿಎಂ, ಸಚಿವರಿಗೆ ಕಪ್ಪು ಬಾವುಟ ತೋರುವುದಾಗಿ ಎಚ್ಚರಿಸಿದರು.
ನಿಮ್ಮ ಭರವಸೆಗಳ ಕೇಳಿ ಸಾಕಾಗಿ ಹೋಗಿದೆ. ಪ್ರಾಣ ಹೋದರೂ ಸರಿಯೇ ಇನ್ನು ಮುಂದೆ ಜಿಲ್ಲೆಗೆ ಭೇಟಿ ನೀಡುವ ಮುಖ್ಯಮಂತ್ರಿಯಾದಿಯಾಗಿ ಯಾವುದೇ ಸಚಿವರಿಗೆ ಕಪ್ಪು ಬಾವುಟ ತೋರಿಯೇ ತೀರುತ್ತೇವೆ ಎಂದು ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಖಡಾತುಂಡಾಗಿ ಎಚ್ಚರಿಕೆ ನೀಡಿದರು.
ಹಲವಾರು ವರ್ಷದಿಂದ ಪ್ರಾಮಾಣಿಕವಾಗಿ ರೈತ ಚಳವಳಿಯಲ್ಲಿ ಬಂದಿದ್ದೇನೆ. ರೈತರಿಗೋಸ್ಕರ ಚಳವಳಿ ವೇಳೆ ರಸ್ತೆಯಲ್ಲೇ ಪ್ರಾಣ ಬಿಡಬೇಕು ಎಂದುಕೊಂಡಿರುವವನು. ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ. ಡಿ.16ರಂದು ಬಿಜೆಪಿ ಸಂಕಲ್ಪ ಯಾತ್ರೆಗೆ ಪಾಂಡವಪುರಕ್ಕೆ ಮುಖ್ಯಮಂತ್ರಿಗಳು ಬರುತ್ತಿದ್ದು, ಅಷ್ಟೊರಳಗೆ ನಮ್ಮ ಬೇಡಿಕೆ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲೇಬೇಕು ಎಂದು ಅವರು ತಾಕೀತು ಮಾಡಿದರು.
ಸಿಎಂ ಆಗಲಿ, ಸಚಿವರಿಗಾಗಲೀ ರೈತರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಮ್ಮ ಸ್ಥಾನ ಶಾಶ್ವತ ಎಂದುಕೊಂಡಿದ್ದಾರೆ. ಆದರೆ, ಅದು ತಪ್ಪು. ಇದು ಪ್ರಜಾಪ್ರಭುತ್ವ, ಅಧಿಕಾರ ಶಾಶ್ವತವಲ್ಲ ಎಂಬುದನ್ನು ತಿಳಿಯಬೇಕು. ರೈತರ ಜತೆ ಹೇಗೆ ನಡೆದುಕೊಳ್ಳಬೇಕು ಎನ್ನುವ ಕನಿಷ್ಠ ಗುಣ ಮುಖ್ಯಮಂತ್ರಿಗಳಿಗೆ ಇಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಬಹುತೇಕ ಎಲ್ಲಾ ಸಕ್ಕರೆ ಕಾರ್ಖಾನೆಗಳ ಮಾಲಕರು ನಿಮ್ಮ ಸರಕಾರದ ಸಚಿವರೇ ಆಗಿದ್ದು, ಟನ್ ಕಬ್ಬಿಗೆ 8 ರಿಂದ 9 ಸಾವಿರ ಲಾಭ ಬರುತ್ತಿದೆ. ಆದರೆ, ರೈತರಿಗೆ ಕನಿಷ್ಠ 4,500 ರೂ. ನೀಡಲು ಸಾಧ್ಯವಾಗುತ್ತಿಲ್ಲ ಏಕೆ? ಎಂದು ಅವರು ಸಚಿವ ಗೋಪಾಲಯ್ಯ ಅವರನ್ನು ಪ್ರಶ್ನಿಸಿದರು.
ಕಬ್ಬು ದರ ನಿಗದಿ, ಹಾಲಿನ ದರ ಹೆಚ್ಚಳ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಬಿಲ್ ಮನ್ನಾ ಮಾಡುವುದಾಗಿ ಸಿಎಂ ಭರವಸೆ ನೀಡಿದ್ದರು. ಚಳವಳಿ ಹಿಂಪಡೆದು ಕಾದೆವು. ಆದರೆ, ಮುಖ್ಯಮಂತ್ರಿಗಳು ಭರವಸೆಯಂತೆ ನಡೆದುಕೊಳ್ಳುತ್ತಿಲ್ಲ ಎಂದು ಪಾಂಡವಪುರ ತಾಲೂಕು ಕಾರ್ಯದರ್ಶಿ ವಿಜಯಕುಮಾರ್ ರೈತರು ಕಿಡಿಕಾರಿದರು.
ನ್ಯಾಯಕ್ಕಾಗಿ ನಾವು ರಸ್ತೆಯಲ್ಲಿ ಬಿದ್ದು ಚಳವಳಿ ಮಾಡುತ್ತಿದ್ದರೆ, ಅತ್ತ ನೀವು, ಕೋಟಿ ಕೋಟಿ ಖರ್ಚುಮಾಡಿ ವಿಜಯದಶಮಿ(ಮೈಸೂರು ದಸರಾ) ಆಚರಿಸಿದಿರಿ, ಲಕ್ಷಾಂತರ ಸುರಿದು ಕುಂಭಮೇಳ ಮಾಡಿದಿರಿ. ನಿಮಗೆ ರೈತರ ಬಗ್ಗೆ ಕನಿಷ್ಠ ಕಾಳಜಿ ಇಲ್ಲ ಎಂದು ಅವರು ಮುಖ್ಯಮಂತ್ರಿ ವಿರುದ್ಧ ಆಕ್ರೋಶ ಹೊರಹಾಕಿದರು.
ಟನ್ ಕಬ್ಬಿಗೆ 4,500 ರೂ., ಹಾಲಿಟಿ 40 ರೂ.ಗೆ ಹೆಚ್ಚಳ, ಭಾಗ್ಯಜ್ಯೋತಿ, ಕುಟೀರ ಜ್ಯೋತಿ ವಿದ್ಯುತ್ ಬಾಕಿ ಮನ್ನಾ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತಸಂಘದ ನೇತೃತ್ವದಲ್ಲಿ ನಗರದ ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತರು ನಡೆಸುತ್ತಿರುವ ಧರಣಿ ಬುಧವಾರ 38ನೇ ದಿನದಲ್ಲಿ ಮುಂದುವರಿಯಿತು.







