ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ, ಮೌಲಾನಾ ಆಝಾದ್ ರಾಷ್ಟ್ರೀಯ ಶಿಷ್ಯ ವೇತನ ಮರು ಆರಂಭಕ್ಕೆ ಎಸ್ಐಒ ಆಗ್ರಹ

ಮಂಗಳೂರು, ಡಿ.15: ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಮತ್ತು ಮೌಲಾನಾ ಆಝಾದ್ ರಾಷ್ಟ್ರೀಯ ಶಿಷ್ಯವೇತನವನ್ನು ಮತ್ತೆ ಆರಂಭಿಸಬೇಕು ಎಂದು ಎಸ್‌ಐಒ ದಕ್ಷಿಣ ಕನ್ನಡ ಘಟಕ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್‌ಐಒ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಪೀರ್ ಲಟಗೇರಿ, ವಿದ್ಯಾರ್ಥಿ ವೇತನ ಮತ್ತು ಶಿಷ್ಯ ವೇತನ ಸ್ಥಗಿತವಾದರೆ ಸಾವಿರಾರು ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗಲಿದೆ ಎಂದರು.
ಅಲ್ಪಸಂಖ್ಯಾತರ ಮತ್ತು ಬುಡಕಟ್ಟು ವ್ಯವಹಾರಗಳ ಹಾಗೂ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದಿಂದ ರಾಷ್ಟ್ರೀಯ ವಿದ್ಯಾರ್ಥಿವೇತನ ಪೋರ್ಟಲ್ ನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನ ಯೋಜನೆಯಡಿ 1ರಿಂದ 8ನೇ ತರಗತಿಯ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ವಿದ್ಯಾರ್ಥಿ ವೇತನವನ್ನು ಮತ್ತು ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ಉನ್ನತ ಶಿಕ್ಷಣಕ್ಕೆ ನೀಡುತ್ತಿದ್ದ ಮೌಲಾನಾ ಆಝಾದ್ ರಾಷ್ಟ್ರೀಯ ಶಿಷ್ಯವೇತನವನ್ನು 2022-23ರ ಶೈಕ್ಷಣಿಕ ವರ್ಷದಿಂದ ರದ್ದುಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಎಸ್.ಐ.ಒ ಖಂಡಿಸುತ್ತದೆ ಎಂದವರು ಹೇಳಿದರು.
ಸುತ್ತೋಲೆಯಲ್ಲಿ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನಕ್ಕೆ ಈ ಬಾರಿ ಸಲ್ಲಿಕೆಯಾದ ಅರ್ಜಿಗಳ ಪೈಕಿ 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳನ್ನು ಮಾತ್ರ ಸ್ಕಾಲರ್ ಶಿಪ್‌ಗೆ ಪರಿಗಣಿಸಲಾಗುವುದು ಹಾಗೂ ರಾಜ್ಯ ಜಿಲ್ಲಾ ಮತ್ತು ಶಿಕ್ಷಣ ಸಂಸ್ಥೆಯ ನೋಡಲ್ ಅಧಿಕಾರಿಗಳು ಪರಿಶೀಲನಾ ಹಂತದಲ್ಲಿ ಕೇವಲ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳ ಅರ್ಜಿಗಳನ್ನು ಮಾತ್ರ ಪರಿಶೀಲಿಸಬೇಕೆಂದು ನಿರ್ದೇಶಿಸಿರುವುದು ಅಘಾತಕಾರಿಯಾಗಿವೆ ಎಂದವರು ಹೇಳಿದರು.
1ರಿಂದ 8ನೇ ತರಗತಿಯ ವಿದ್ಯಾರ್ಥಿಗಳು ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ 2009 ಕಾಯ್ದೆ) ಅಡಿಯಲ್ಲಿ ಬರುವ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಪಡೆಯುತ್ತಿದ್ದು, ಅವರಿಗೆ ಸ್ಕಾಲ್ಶಿಪ್‌ನ ಅಗತ್ಯತೆ ಬೀಳುವುದಿಲ್ಲ. ಹಾಗಾಗಿ ಈ ನಿರ್ಧಾರವನ್ನು ಕೈಗೊಂಡಿರುವುದಾಗಿ ಕೇಂದ್ರ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ. ಇದು ಆರ್‌ಟಿಇ ಕಾಯ್ದೆಯ ತಪ್ಪು ವ್ಯಾಖ್ಯಾನವಾಗಿದೆ. ಆರ್‌ಟಿಇಯಂತಹ ಮೂಲಭೂತ ಹಕ್ಕಿನ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಹಕಾರಿಯಾಗುವ ಸ್ಕಾಲರ್ ಶಿಪ್ ನಂತಹ ಉತ್ತೇಜನವನ್ನು ಹೆಚ್ಚುವರಿ ಸವಲತ್ತು ಎಂಬಂತೆ ಬಿಂಬಿಸುವುದು ತಪ್ಪಾಗುತ್ತದೆ. ಮಕ್ಕಳ ಶಾಲಾ ದಾಖಲಾತಿಯನ್ನು ಖಚಿತಪಡಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ಅದರ ಭಾಗವಾಗಿ ಸ್ಕಾಲರ್ ಶಿಪ್ ಅನ್ನು ಜಾರಿಗೆ ತರಲಾಗಿದೆ ಎಂಬುದನ್ನು ಕೇಂದ್ರ ಸರ್ಕಾರ ಮನವರಿಕೆ ಮಾಡಿಕೊಳ್ಳಬೇಕಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಲಕ್ಷಾಂತರ ಅಭ್ಯರ್ಥಿಗಳಿಗೆ ಕೇಂದ್ರ ಸರಕಾರ ಸುತ್ತೋಲೆಯಂತೆ ಅನುದಾನ ಬಿಡುಗಡೆ ಮಾಡದಿದ್ದರೆ ರಾಜ್ಯ ಸರಕಾರ ಜವಾಬ್ದಾರಿ ವಹಿಸಿ ಸ್ಕಾಲರ್‌ಶಿಪ್ ಬಿಡುಗಡೆ ಮಾಡಬೇಕು. ಅಂದಾಜು 115 ಕೋಟಿ ರೂ. ಅನುದಾನ ಶೀಘ್ರ ಬಿಡುಗಡೆ ಮಾಡಿ ಕ್ರಮ ವಹಿಸಬೇಕು ಎಂದು ಮುಹಮ್ಮದ್ ಪೀರ್ ಒತ್ತಾಯಿಸಿದರು.
ಇದೇ ವೇಳೆ ಮೌಲಾನಾ ಆಝಾದ್ ರಾಷ್ಟ್ರೀಯ ಶಿಷ್ಯವೇತನ ನಿಲ್ಲಿಸಲು ಸರಕಾರ ನೀಡಿದ ಕಾರಣ ಒಪ್ಪುವಂತದ್ದಲ್ಲ. ಒಂದು ವೇಳೆ ಸಂಶೋಧನಾ ವಿದ್ಯಾರ್ಥಿಗಳಿಗೆ ನೀಡುವ ಫೆಲೋಶಿಪ್ ನಡುವ ಅತಿಕ್ರಮಣವಾದರೆ ಅದನ್ನು ಬಗೆಹರಿಸಿ ಅರ್ಹ ಅಭ್ಯರ್ಥಿಯು ಫೆಲೋಶಿಪ್‌ನಿಂದ ವಂಚಿತನಾಗದಂತೆ ನೋಡಿಕೊಳ್ಳುವುದು ಸರಕಾರದ ಕೆಲಸ. ಆರ್ಥಿಕವಾಗಿ ಹಿಂದುಳಿದ ಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣಕ್ಕಾಗಿ ಎಂಎಎನ್‌ಎಫ್‌ನಂತಹ ಶಿಷ್ಯ ವೇತನವನ್ನು ಅವಲಂಬಿಸಿರುತ್ತಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ಕೇಂದ್ರ ಸರಕಾರದ ಮೇಲೆ ಒತ್ತಡ ತರಬೇಕು ಎಂದು ಅವರು ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್ ಐ ಒ ಪ್ರಮುಖರಾದ ಮುಜಾಹಿದ್, ರಾಝಿಕ್, ಫರಾಝ್, ಮುಹಮ್ಮದ್ ಹಯಾನ್ ಉಪಸ್ಥಿತರಿದ್ದರು.