ಮೂಡುಬಿದಿರೆ: ಬಸ್ ಪ್ರಯಾಣಿಕನಿಗೆ ಸಂಘಪರಿವಾರ ಕಾರ್ಯಕರ್ತರಿಂದ ಮಾರಣಾಂತಿಕ ಹಲ್ಲೆ
►ಮರಕ್ಕೆ ಕಟ್ಟಿ ಹಾಕಿ ಥಳಿಸಿದ ದುಷ್ಕರ್ಮಿಗಳು ►ಪ್ರಕರಣ ದಾಖಲಿಸಲು ಪೊಲೀಸರ ನಿರಾಕರಣೆ: ಆರೋಪ

ಬಂಟ್ವಾಳ, ಡಿ.15: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ ಬಸ್ ಕಂಡೆಕ್ಟರ್ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ತಂಡ ಮಾರಣಾಂತಿಕವಾಗಿ ಹಲ್ಲೆ ನಡೆಸಿರುವ ಘಟನೆ ಮೂಡುಬಿದಿರೆ ತಾಲೂಕಿನ ರಾಯಿ ಎಂಬಲ್ಲಿ ನಡೆದಿದೆ.
ಮೂಲತಃ ಮುಲ್ಲರಪಟ್ನ ನಿವಾಸಿ, ಪ್ರಸಕ್ತ ಬಿ.ಸಿ.ರೋಡ್ ನಲ್ಲಿ ವಾಸ್ತವ್ಯವಿರುವ ಇಸ್ಹಾಕ್ (45) ಹಲ್ಲೆಗೊಳಗಾದವರು.
ಮೇಸ್ತ್ರಿ ಕೆಲಸ ಮಾಡುತ್ತಿರುವ ಇಸ್ಹಾಕ್ ಬುಧವಾರ ಬೆಳಗ್ಗೆ ಬಿ.ಸಿ.ರೋಡ್ ನಿಂದ ಮೂಡುಬಿದಿರೆಗೆ ತೆರಳಲೆಂದು ‘ಮಹಾ ಗಣೇಶ’ ಎಂಬ ಖಾಸಗಿ ಬಸ್ ಹತ್ತಿದ್ದಾರೆ. ಬಸ್ಸಿನಲ್ಲಿ ವಿಪರೀತ ಪ್ರಯಾಣಿಕರ ದಟ್ಟಣೆಯಿದ್ದುರಿಂದ ಇಸ್ಹಾಕ್ ಕುಳಿತಿದ್ದ ಸೀಟಿನ ಬಳಿ ನಿಂತಿದ್ದ ಮಹಿಳೆಯೊಬ್ಬರು ಬ್ಯಾಗ್ ಹಿಡಿದುಕೊಳ್ಳುವಂತೆ ಇಸ್ಹಾಕ್ ಅವರಿಗೆ ನೀಡಿದ್ದಾರೆ ಎನ್ನಲಾಗಿದೆ. ಮಹಿಳೆ ತಾನು ಇಳಿಯುವ ಜಾಗ ತಲುಪಿದಾಗ ಇಸ್ಹಾಕ್ ಅವರಿಂದ ಬ್ಯಾಗ್ ಪಡೆದು ಬಸ್ಸಿನಿಂದ ಇಳಿದು ಹೋದರೆನ್ನಲಾಗಿದೆ. ಬಳಿಕ ಕಂಡೆಕ್ಟರ್ ಇಸ್ಹಾಕ್ ಅವರನ್ನು ಬಸ್ಸಿನಿಂದ ಕೆಳಗಿಳಿಸಿದ ಅವರಿಗೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಮೊಬೈಲ್ ಕರೆ ಮಾಡಿ ಕೆಲವು ಸಂಘ ಪರಿವಾರದ ಕಾರ್ಯಕರ್ತರೆನ್ನಲಾದ ಕೆಲವು ಯುವಕರನ್ನು ಅಲ್ಲಿಗೆ ಕರೆಸಿ ಇಸ್ಹಾಕ್ ರನ್ನು ಅವರಿಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ.
ದುಷ್ಕರ್ಮಿಗಳ ಗುಂಪು ಇಸ್ಹಾಕ್ ಅವರನ್ನು ಆಟೋದಲ್ಲಿ ಕರೆದುಕೊಂಡು ಹೋಗಿ ರಾಯಿ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಮರಕ್ಕೆ ಕಟ್ಟಿ ಹಾಕಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ. ಹಲ್ಲೆಯಿಂದ ಇಸ್ಹಾಕ್ ಅವರ ಬೆನ್ನು, ಕೈ ಕಾಲುಗಳಿಗೆ ತೀವ್ರ ಗಾಯಗಳಾಗಿವೆ. ಬಳಿಕ ಗುಂಪು ಇಸ್ಹಾಕ್ ಅವರನ್ನು ಗುಂಪು ಪೊಲೀಸರಿಗೆ ಹಸ್ತಾಂತರಿಸಿದೆ ಎನ್ನಲಾಗಿದೆ.
ಪೊಲೀಸರು ಇಸ್ಹಾಕ್ ಅವರನ್ನು ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಬಳಿಕ ಪೊಲೀಸರು ಬಂಟ್ವಾಳ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಇಸ್ಹಾಕ್ ಅವರ ಕುಟುಂಬದವರು ಠಾಣೆಗೆ ಬಂದಿದ್ದು, ಸಂಜೆ 5:30ರವರೆಗೆ ಇಸ್ಹಾಕ್ ಅವರನ್ನು ಠಾಣೆಯಲ್ಲೇ ಕೂರಿಸಲಾಗಿತ್ತು. ಬಳಿಕ ಇಸ್ಹಾಕ್ ಅವರಿಂದ ಹೇಳಿಕೆ ಪಡೆದು ಕುಟುಂಬದೊಂದಿಗೆ ಕಳುಹಿಸಿಕೊಟ್ಟಿದ್ದಾರೆ ಎನ್ನಲಾಗಿದೆ.
ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ಕುಟುಂಬ ಮನವಿ ಮಾಡಿದಾಗ, ಹಾಗೆ ಮಾಡಲು ಸಾಧ್ಯವಿಲ್ಲ ಎಂದು ಬಂಟ್ವಾಳ ಠಾಣೆ ಪೊಲೀಸರು ಹೇಳಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ. ಇದೀಗ ಇಸ್ಹಾಕ್ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.