ಮಂಗಳೂರು | ಪರವಾನಿಗೆ ಪಡೆಯದೆ ಡ್ರೋನ್ ಬಳಸಿದರೆ ಕಾನೂನು ಕ್ರಮ: ಡಿಸಿಪಿ ಎಚ್ಚರಿಕೆ

ಮಂಗಳೂರು, ಡಿ.15: ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಪರವಾನಿಗೆ ಪಡೆಯದೆ ಡ್ರೋನ್ ಹಾರಾಟ ನಡೆಸಿದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.
ಕಮಿಷನರೇಟ್ ವ್ಯಾಪ್ತಿಯಲ್ಲಿ ಡ್ರೋನ್ ಹಾರಾಟಕ್ಕೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ(DGCA)ದ ಪರವಾನಿಗೆ ಪಡೆಯಬೇಕಿದೆ. ಆದರೆ ನಗರದಲ್ಲಿ DGCA DIGITAL SKY PLATFORM ನಲ್ಲಿ ರಿಜಿಸ್ಟ್ರಾರ್ ಆಗದೇ ಅನಧಿಕೃತವಾಗಿ ಡ್ರೋನ್ ಬಳಸುತ್ತಿರುವುದು ಗಮನಕ್ಕೆ ಬಂದಿದೆ. ಆದ್ದರಿಂದ ಭದ್ರತೆ ಮತ್ತು ಸಾರ್ವಜನಿಕರ ಸುರಕ್ಷತೆಯನ್ನು ಕಾಪಾಡುವ ದೃಷ್ಟಿಯಿಂದ DGCAಯಿಂದ ಪರವಾನಿಗೆ ಪಡೆದ NANO DRONE ಗಳನ್ನು ಹೊರತುಪಡಿಸಿ ಇನ್ನುಳಿದಂತೆ ಡ್ರೋನ್ ಬಳಸಲು ಕಮಿಷನರೇಟ್ ಕಚೇರಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ಅವರು ತಿಳಿಸಿದ್ದಾರೆ.
ಸೂಕ್ತ ದಾಖಲೆಗಳನ್ನು ನೀಡಿದಲ್ಲಿ ಒಂದು ತಿಂಗಳು ಡ್ರೋನ್ ಬಳಸಲು ಅನುಮತಿ ನೀಡಲಾಗುತ್ತದೆ. ಆದರೂ ಡ್ರೋನ್ ಹಾರಿಸುವ ಮುಂಚೆ ಈ ರೀತಿ ಪಡೆದ ಅನುಮತಿ ಪತ್ರವನ್ನು ತೋರಿಸಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಡಿಸಿಪಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.