ಬೇಸರಿಸಬೇಡ ಸಹೋದರ, ನೀನು ಇತಿಹಾಸ ಸೃಷ್ಟಿಸಿದೆ: ಮೊರೊಕ್ಕೊ ಸ್ಟಾರ್ ಅಶ್ರಫ್ ಹಕೀಮಿಗೆ ಫ್ರಾನ್ಸ್ ನ ಎಂಬಾಪೆ ಪ್ರಶಂಸೆ

ದೋಹಾ, ಡಿ.15: ಮೊರೊಕ್ಕೊ ವಿರುದ್ಧ ಬುಧವಾರ ತಡರಾತ್ರಿ ನಡೆದ FIFA ವಿಶ್ವಕಪ್ ಸೆಮಿಫೈನಲ್ ನಲ್ಲಿ ತನ್ನ ತಂಡ ಜಯ ಸಾಧಿಸಿರುವುದಕ್ಕೆ ಫ್ರಾನ್ಸ್ ನ ಸ್ಟಾರ್ ಆಟಗಾರ ಕೈಲಿಯನ್ ಎಂಬಾಪೆ (Kylian Mbappe) ಸಂಭ್ರಮಪಟ್ಟರು. ಆದರೆ ಅವರು ತಮ್ಮ ಸ್ನೇಹಿತ ಹಾಗೂ ಪ್ಯಾರಿಸ್ ಸೇಂಟ್-ಜರ್ಮೈನ್ ಫುಟ್ಬಾಲ್ ಕ್ಲಬ್ ನ ಸಹ ಆಟಗಾರ, ಮೊರೊಕ್ಕೊ ತಂಡದ ಸ್ಟಾರ್ ಆಟಗಾರ ಅಶ್ರಫ್ ಹಕೀಮಿ (Achraf Hakimi) ಅವರನ್ನು ಸಮಾಧಾನಪಡಿಸಲು ಮರೆಯಲಿಲ್ಲ.
ಹಾಲಿ ಚಾಂಪಿಯನ್ ಫ್ರಾನ್ಸ್ ಅಟ್ಲಾಸ್ ಲಯನ್ಸ್ ತಂಡವನ್ನು 2-0 ಗೋಲುಗಳಿಂದ ಸೋಲಿಸಿ ಅರ್ಜೆಂಟೀನ ವಿರುದ್ಧ ಫೈನಲ್ ಪಂದ್ಯಕ್ಕೆ ಸಜ್ಜಾಯಿತು. ಫ್ರಾನ್ಸ್ ತಂಡ ಏಳು ಪಂದ್ಯಾವಳಿಗಳಲ್ಲಿ ನಾಲ್ಕನೇ ಬಾರಿ ವಿಶ್ವಕಪ್ ಫೈನಲ್ಗೆ ತಲುಪಿತು ಹಾಗೂ ಮೊರೊಕ್ಕೊದ ಕನಸಿನ ಓಟವನ್ನು ಕೊನೆಗೊಳಿಸಿತು.
ಎಂಬಾಪೆ ಎರಡನೇ ಸೆಮಿಫೈನಲ್ ಮುಗಿದ ತಕ್ಷಣವೇ ತನ್ನ ಕ್ಲಬ್ ತಂಡದ ಸಹ ಆಟಗಾರ ಹಾಗೂ ಆಫ್ರಿಕಾದ ತಂಡ ವಿಶ್ವಕಪ್ ನಲ್ಲಿ ಅಮೋಘ ಪ್ರದರ್ಶನ ನೀಡಲು ಪ್ರಮುಖ ಪಾತ್ರವನ್ನು ವಹಿಸಿದ್ದ ಮೊರೊಕ್ಕೊದ ಸ್ಟಾರ್ ಆಟಗಾರ ಹಕೀಮಿಯವರನ್ನು ಸಮಾಧಾನಪಡಿಸಲು ಹೋದರು.
ಎಂಬಾಪೆ ಹಾಗೂ ಹಕೀಮಿ ಪರಸ್ಪರ ಆಲಿಂಗಿಸಿಕೊಂಡರು ಹಾಗೂ ಇಬ್ಬರೂ ಆಟಗಾರರು ತಮ್ಮ ಜೆರ್ಸಿಗಳನ್ನು ವಿನಿಮಯ ಮಾಡಿಕೊಂಡರು.
ಹಕೀಮಿಯನ್ನು ಟ್ವಿಟರ್ ನಲ್ಲಿ ಶ್ಲಾಘಿಸಿದ ಎಂಬಾಪೆ "ದುಃಖಪಡಬೇಡಿ ಸಹೋದರ, ನೀನು ಮಾಡಿರುವ ಸಾಧನೆಗೆ ಎಲ್ಲರೂ ಹೆಮ್ಮೆಪಡುತ್ತಾರೆ, ನೀನು ಇತಿಹಾಸ ಸೃಷ್ಟಿಸಿದೆ" ಎಂದು ಟ್ವೀಟ್ ಮಾಡಿದ್ದಾರೆ.
Don’t be sad bro, everybody is proud of what you did, you made history. @AchrafHakimi pic.twitter.com/hvjQvQ84c6
— Kylian Mbappé (@KMbappe) December 14, 2022