ದಿಲ್ಲಿ ಆ್ಯಸಿಡ್ ದಾಳಿ ಪ್ರಕರಣ: ಇ-ಕಾಮರ್ಸ್ ಸಂಸ್ಥೆಯಿಂದ ಆ್ಯಸಿಡ್ ಖರೀದಿಸಿದ್ದ ಆರೋಪಿ

ಹೊಸದಿಲ್ಲಿ: ದಿಲ್ಲಿಯ ದ್ವಾರಕಾ ಪ್ರದೇಶದಲ್ಲಿ ಬುಧವಾರ 17 ವರ್ಷದ ಬಾಲಕಿಯ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದ ಆರೋಪಿಗಳ ಪೈಕಿ ಪ್ರಮುಖ ಆರೋಪಿಯು ದಾಳಿಗೆ ಬಳಸಿದ್ದ ಆ್ಯಸಿಡ್ ಅನ್ನು ಇ-ಕಾಮರ್ಸ್ ಸಂಸ್ಥೆ ಫ್ಲಿಪ್‌ಕಾರ್ಟ್‌ನಿಂದ ಖರೀದಿಸಿದ್ದ ಎಂದು ಪೊಲೀಸ್ ಮೂಲಗಳನ್ನಾಧರಿಸಿ ಮಾಧ್ಯಮವೊಂದು ವರದಿ ಮಾಡಿದೆ.
ಪ್ರಮುಖವಾಗಿ ಮಹಿಳೆಯರ ಮೇಲೆಯೇ ನಡೆಯುವ ಇಂತಹ ದಾಳಿಗಳನ್ನು ತಡೆಯಲು ಆಸಿಡ್ ಮಾರಾಟವನ್ನು ನಿಯಂತ್ರಿಸಬೇಕು ಎಂದು 2013 ರಲ್ಲಿಯೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ಆ್ಯಸಿಡ್ ಖರೀದಿಸುವವರು ಖರೀದಿಯ ಉದ್ದೇಶವನ್ನು ತಿಳಿಸಬೇಕು ಹಾಗೂ ಈ ಕುರಿತ ಮಾಹಿತಿಯನ್ನು ಪೊಲೀಸರಿಗೂ ನೀಡಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿತ್ತು,
ಬುಧವಾರ ಬೆಳಿಗ್ಗೆ 7.30ರ ಸುಮಾರಿಗೆ ದ್ವಾರಕಾದ ಮೋಹನ್ ಗಾರ್ಡನ್ ಪ್ರದೇಶದಲ್ಲಿ ಈ ದಾಳಿ ನಡೆದಿತ್ತು. ಹುಡುಗಿಯ ಮುಖಕ್ಕೆ ಶೇ 7 ರಿಂದ ಶೇ 8ರಷ್ಟು ಸುಟ್ಟ ಗಾಯಗಳಾಗಿದ್ದು ಆಕೆಯ ಕಣ್ಣುಗಳೂ ಹಾನಿಗೊಂಡಿವೆ. ಆಕೆಯ ಸ್ಥಿತಿ ಸದ್ಯ ಸ್ಥಿರವಾಗಿದೆಯೆಂದು ತಿಳಿದು ಬಂದಿದೆ.
ಈ ಪ್ರಕರಣದ ಪ್ರಮುಖ ಆರೋಪಿ, 20 ವರ್ಷದ ಸಚಿನ್ ಅರೋರಾ, ಆತನ ಸ್ನೇಹಿತರಾದ 19 ವರ್ಷದ ಹರ್ಷಿತ್ ಅಗರ್ವಾಲ್ ಮತ್ತು 22 ವರ್ಷದ ವಿರೇಂದರ್ ಸಿಂಗ್ ಎಂಬವರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.
ಹುಡುಗಿಗೂ ಆರೋಪಿ ಅರೋರಾಗೆ ಪರಿಚಯವಿತ್ತಾದರೂ ಸೆಪ್ಟೆಂಬರ್ ತಿಂಗಳಿಂದೀಚೆಗೆ ಆಕೆ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದಳು. ಇದರಿಂದ ಕುಪಿತಗೊಂಡು ಈ ಕೃತ್ಯ ನಡೆಸಿದ್ದಾನೆಂದು ಹೇಳಲಾಗಿದೆ.
ತಮ್ಮ ವೆಬ್ಸೈಟ್ಗಳಲ್ಲಿ ಆ್ಯಸಿಡ್ ಮಾರಾಟದ ಕುರಿತು ಅಮೆಝಾನ್ ಹಾಗೂ ಫ್ಲಿಪ್ ಕಾರ್ಟ್ಗೆ ದಿಲ್ಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು)ದ ವರಿಷ್ಠೆ ಸ್ವಾತಿ ಮಲಿವಾಲ್ ಗುರುವಾರ ನೋಟಿಸು ಜಾರಿ ಮಾಡಿದ್ದಾರೆ.
ತಮ್ಮ ಶಾಪಿಂಗ್ ವೇದಿಕೆಯಲ್ಲಿ ಆ್ಯಸಿಡ್ ಯಾಕೆ ಲಭ್ಯವಾಗುತ್ತಿದೆ. ವೆಬ್ಸೈಟ್ನಲ್ಲಿ ಉತ್ಪನ್ನವನ್ನು ಪೋಸ್ಟ್ ಮಾಡುವ ಮುನ್ನ ಮಾರಾಟಗಾರರಿಗೆ ಪರವಾನಿಗೆ ಇದೆಯೇ ಎಂದು ಪರಿಶೀಲಿಸಿದ್ದೀರಾ? ಎಂದು ಸ್ವಾತಿ ಮಲಿವಾಲ್ ನೋಟಿಸಿನಲ್ಲಿ ಪ್ರಶ್ನಿಸಿದ್ದಾರೆ. ತಮ್ಮ ವೆಬ್ಸೈಟ್ಗಳಲಿ ಆ್ಯಸಿಡ್ ಮಾರಾಟ ಮಾಡಲು ಪಡೆದುಕೊಂಡ ಪರವಾನಿಗೆಯ ಪ್ರತಿಯನ್ನು ಒದಗಿಸಿ ಎಂದು ಅವರು ವೆಬ್ಸೈಟ್ಗಳಿಗೆ ಸೂಚಿಸಿದ್ದಾರೆ.







