ಪೊಲೀಸರ ಕಸ್ಟಡಿಯಲ್ಲಿದ್ದ ಉದ್ಯಮಿ ಸಾವು: ಐವರು ಪೊಲೀಸರು, ಓರ್ವ ವೈದ್ಯನ ವಿರುದ್ಧ ಕೊಲೆ ಪ್ರಕರಣ

ಕಾನ್ಪುರ: ಪೊಲೀಸ್ ಕಸ್ಟಡಿಯಲ್ಲಿದ್ದ ಉದ್ಯಮಿಯೊಬ್ಬರು ಸಾವಿಗೀಡಾಗಿದ್ದು, ಈ ಸಂಬಂಧ ಐವರು ಪೊಲೀಸರು ಹಾಗೂ ಓರ್ವ ವೈದ್ಯನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರ್ ದೇಹತ್ ಜಿಲ್ಲೆಯಿಂದ ವರದಿಯಾಗಿದೆ ಎಂದು indianexpress.com ವರದಿ ಮಾಡಿದೆ.
ಘಟನೆಯ ಸಂಬಂಧ ಇಬ್ಬರು ಠಾಣಾಧಿಕಾರಿಗಳನ್ನು ಒಳಗೊಂಡಂತೆ ಹನ್ನೊಂದು ಮಂದಿ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದ್ದು, ಪ್ರಾಥಮಿಕ ಮಾಹಿತಿ ವರದಿಯಲ್ಲಿ ಹೆಸರಿಸಲಾಗಿರುವ ಐವರು ಪೊಲೀಸರ ಪೈಕಿ ಠಾಣಾಧಿಕಾರಿಗಳೂ ಸೇರಿದ್ದಾರೆ.
ಬಲ್ವಂತ್ ಸಿಂಗ್ (27) ಎಂಬುವವರ ವಿರುದ್ಧ ಆತನ ಸಂಬಂಧಿ ಚಂದ್ರ ಭಾನ್ ಸಿಂಗ್ ಸುಲಿಗೆ ಪ್ರಕರಣ ದಾಖಲಿಸಿದ್ದರು. ಈ ಕುರಿತು ವಿಚಾರಣೆಗೊಳಪಡಿಸಲು ಬಲ್ವಂತ್ ಸಿಂಗ್ ಅವರನ್ನು ಪೊಲೀಸರು ಸೋಮವಾರ ವಶಕ್ಕೆ ಪಡೆದಿದ್ದರು. ಇದಾದ ನಂತರ ಮಂಗಳವಾರದಂದು ಬಲ್ವಂತ್ ಸಿಂಗ್‌ಗೆ ಎದೆ ನೋವು ಕಾಣಿಸಿಕೊಂಡಿದ್ದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಮೃತಪಟ್ಟರು ಎಂದು ಬಲ್ವಂತ್ ಸಿಂಗ್ ಕುಟುಂಬದ ಸದಸ್ಯರಿಗೆ ಪೊಲೀಸರು ತಿಳಿಸಿದ್ದರು. ಆದರೆ, ಪೊಲೀಸರ ಕ್ರೌರ್ಯಕ್ಕೆ ಆತ ಬಲಿಯಾಗಿದ್ದಾನೆ ಎಂದು ಕುಟುಂಬದ ಸದಸ್ಯರು ದೂರಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಬಲ್ವಂತ್ ಸಿಂಗ್ ಅವರ ಭಾವ ಅಂಗಡ್ ಸಿಂಗ್, ಪೊಲೀಸರು ಆತನನ್ನು ಬಂಧಿಸಿರುವ ವಿಷಯ ತಿಳಿದು ನಾನು ಠಾಣೆಗೆ ತೆರಳಿದ ಸಂದರ್ಭದಲ್ಲಿ ಓರ್ವ ಪೊಲೀಸ್ ನನ್ನ ಮೈದುನನ್ನು ಥಳಿಸುತ್ತಿರುವುದನ್ನು ಕಂಡೆ ಎಂದು ಆರೋಪಿಸಿದ್ದಾರೆ.
ಬಲ್ವಂತ್ ಸಿಂಗ್ ಪೊಲೀಸ್ ಠಾಣೆಯಲ್ಲಿ ಮೃತಪಟ್ಟ ನಂತರ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಓರ್ವ ವೈದ್ಯ ಚಿಕಿತ್ಸೆ ನೀಡುವಾಗ ಆತ ಮೃತಪಟ್ಟಿರುವಂತೆ ತೋರಿಸಲು ಯತ್ನಿಸಿದರು ಎಂದು ಬಲ್ವಂತ್ ಸಿಂಗ್ ಸಂಬಂಧಿಯೊಬ್ಬರು ದೂರಿದರು ಎಂದು indianexpress.com ವರದಿ ಮಾಡಿದೆ.
ಈ ನಡುವೆ, ಬಲ್ವಂತ್ ಸಿಂಗ್ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಲ್ವಂತ್ ಸಿಂಗ್ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಆತನ ದೇಹದ ಮೇಲೆ 26 ಗಾಯದ ಗುರುತುಗಳಿವೆ ಎಂದು ಹೇಳಲಾಗಿದೆ ಎಂದು Hindustan Times ವರದಿ ಮಾಡಿದೆ. ಹೀಗಿದ್ದೂ ಮರಣೋತ್ತರ ಪರೀಕ್ಷೆ ವರದಿಯ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.
ಅಮಾನತುಗೊಂಡಿರುವ ಎಲ್ಲ 11 ಪೊಲೀಸ್ ಅಧಿಕಾರಿಗಳು ತಲೆ ಮರೆಸಿಕೊಂಡಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಲಾಗಿದೆ ಎಂದು ಕಾನ್ಪುರ್ ದೇಹತ್ ಪೊಲೀಸ್ ವರಿಷ್ಠಾಧಿಕಾರಿ ಸುನಿತಿ ತಿಳಿಸಿದ್ದಾರೆ.
ಮೃತನ ಕುಟುಂಬಕ್ಕೆ ರೂ. ನಾಲ್ಕು ಲಕ್ಷ ಪರಿಹಾರ ಹಾಗೂ ಜಮೀನು ನೀಡುವುದಾಗಿ ಜಿಲ್ಲಾಡಳಿತ ಘೋಷಿಸಿದೆ. ಮೃತನ ಪತ್ನಿಗೆ ವಿಧವಾ ವೇತನ ನೀಡುವುದಾಗಿಯೂ ರಾಜ್ಯ ಸರ್ಕಾರ ಭರವಸೆ ನೀಡಿದೆ.







