ಡಿ.17ರಂದು ಕೋಡಿ ಬ್ಯಾರೀಸ್ ಶಿಕ್ಷಣ ಸಂಸ್ಥೆಯ ವಾರ್ಷಿಕೋತ್ಸವ ‘ವಿಕಾಸ-22’

ಕುಂದಾಪುರ, ಡಿ.15: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ 116ನೇ ವರ್ಷದ ಸಂಸ್ಥಾಪಕರ ದಿನಾಚರಣೆ ಮತ್ತು ವಾರ್ಷಿಕೋತ್ಸವ ಸಮಾರಂಭ ‘ವಿಕಾಸ -22’ನ್ನು ಡಿ.17ರಂದು ಬೆಳಗ್ಗೆ 10ಗಂಟೆಗೆ ಕುಂದಾಪುರ ಕೋಡಿ ಬೀಚ್ ರಸ್ತೆಯಲ್ಲಿರುವ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಆಯೋಜಿಸಲಾಗಿದೆ.
ಕುಂದಾಪುರ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಾಧ್ಯಾಪಕ ಹಯವದನ ಉಪಾಧ್ಯಾಯ ಈ ಕುರಿತು ಮಾಹಿತಿ ನೀಡಿದರು. 1906ರಲ್ಲಿ ಶಿಕ್ಷಣದ ಮೊಳಕೆಯೆಂಬತೆ ಕೋಡಿಯಲ್ಲಿ ಸಣ್ಣ ಶಾಲೆಯೊಂದು ಹುಲ್ಲಿನ ಹೊದಿಕೆಯಿಂದ ಕೂಡಿದ ಚಪ್ಪರದಡಿಯಲ್ಲಿ ಅಕ್ಷರ ಪ್ರಪಂಚವನ್ನು ಪರಿಚಯಿಸಿ ಇದೀಗ ಬ್ಯಾರೀಸ್ ಸಮೂಹ ಶಿಕ್ಷಣಸಂಸ್ಥೆಗಳಾಗಿ ಹೆಮ್ಮರವಾಗಿ ಬೆಳೆದಿದೆ. ಈ ಸಂಸ್ಥೆ ಸಮಾಜದಲ್ಲಿ ಸೌಹಾರ್ದತೆ ಮೆರೆಯುತ್ತ ಅತ್ಯುತ್ತಮ ಸಾಧನೆಗಳನ್ನು ಮಾಡುತ್ತಿದೆ ಎಂದರು.
ದಿವಂಗತ ಹಾಜಿ ಮಾಸ್ಟರ್ ಮಹಮೂದ್ ಅಧ್ಯಕ್ಷತೆಯಲ್ಲಿ ವಿವಿಧ ಅಂಗ ಸಂಸ್ಥೆಗಳು ಜಾತಿ, ಧರ್ಮದ ಎಲ್ಲೆ ಮೀರಿ ಊರ ಪರವೂರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ದಾರಿಯಾಗಿದ್ದು, ಇದೀಗ ಈ ಸಂಸ್ಥೆಯಲ್ಲಿ ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡುತ್ತಿದ್ದಾರೆ. ಪ್ರಸ್ತುತ ಅಧ್ಯಕ್ಷರಾಗಿ ಹಾಜಿ ಕೆ.ಎಂ.ಅಬ್ದುಲ್ ರಹಿಮಾನ್ ನೇತೃತ್ವದಲ್ಲಿ ಸಯ್ಯದ್ ಮೊಹಮ್ಮದ್ ಬ್ಯಾರಿ ಅವರ ಮಾರ್ದರ್ಶನದಲ್ಲಿ ಸಂಸ್ಥೆ ಶೈಕ್ಷಣಿಕವಾಗಿ, ಕ್ರೀಡಾ ಹಾಗೂ ಸಮಾಜಿಕ ಕಳಕಳಿ ವಿಚಾರದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಅವರು ಹೇಳಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರೆಹಮನ್ ಬ್ಯಾರಿ ಮಾತನಾಡಿ, ವಿಕಾಸ ಕಾರ್ಯಕ್ರಮದಲ್ಲಿ ಮಾಜಿ ಲೋಕಾಯುಕ್ತ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಕರಾವಳಿ ಕಾವಲು ಪಡೆ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ ಅಹದ್ ಮತ್ತು ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಾರುತಿ ಗೌರವ ಅತಿಥಿಗಳಾಗಿರುವರು.
ಹಾಜಿ ಕೆ.ಮೊಯ್ದಿನ್ ಬ್ಯಾರಿ ಎಜ್ಯುಕೇಶನ್ ಟ್ರಸ್ಟ್ ಮುಖ್ಯಸ್ಥ ಸಯ್ಯದ್ ಮಹಮ್ಮದ್ ಬ್ಯಾರಿ ಭಾಗವಹಿಸಲಿರುವರು. ಇದೇ ಸಂದರ್ಭದಲ್ಲಿ ಗಣಕ ಯಂತ್ರದಲ್ಲಿ ಭಾರತೀಯ ಭಾಷೆಗಳ ತಂತ್ರಾಂಶವನ್ನು ಪರಿಚಯಿಸಿದ ನಿವೃತ್ತ ಪ್ರಾಧ್ಯಾಪಕ ವಿಾನಿ ನಾಡೋಜ ಕೆ.ಪಿ ರಾವ್ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಪಟು ಪೃಥ್ವಿರಾಜ್ ಶೆಟ್ಟಿ ಅವರನ್ನು ಸನ್ಮಾನಿಸಲಾಗುವುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾರೀಸ್ ಕಾಲೇಜಿನ ಪ್ರಾಂಶುಪಾಲ ಡಾ.ಶಮೀರ್, ಡಿ.ಎಡ್ ವಿಭಾಗದ ಪ್ರಾಂಶುಪಾಲೆ ಡಾ.ಫಿರ್ದೋಸ್, ಬಿ.ಎಡ್ ವಿಭಾಗದ ಪ್ರಾಂಶುಪಾಲ ಸಿದ್ದಪ್ಪ, ಸೀ ಸೈಡ್ ಪಬ್ಲಿಕ್ ಶಾಲೆಯ ಮುಖ್ಯೋಪಾಧ್ಯಾಯಿನಿ ಅಶ್ವಿನಿ ಶೆಟ್ಟಿ ಉಪಸ್ಥಿತರಿದ್ದರು.







