ಡಿ.17-18: ಮಹಿಳಾ ಉದ್ಯಮಿಗಳಿಗೆ ಕಾರ್ಯಾಗಾರ- ಉತ್ಪನ್ನಗಳ ಪ್ರದರ್ಶನ
ಮಂಗಳೂರು, ಡಿ.15: ಮಹಿಳಾ ಉದ್ಯಮಿಗಳಿಗೆ ಕಾನೂನು ಮತ್ತು ಅನುಸರಣೆಗಳ ಬಗ್ಗೆ ಮಾಹಿತಿ ಮತ್ತು ಕಾರ್ಯಾಗಾರ, ಮಹಿಳಾ ಉದ್ಯಮಿಗಳು ಉತ್ಪಾದಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಹಿಳಾ ಉದ್ಯಮಿಗಳಿಗೆ ಸನ್ಮಾನ ಇತ್ಯಾದಿ ಕಾರ್ಯಕ್ರಮ ಡಿ.17 ಮತ್ತು 18 ರಂದು ಸುರತ್ಕಲ್ ನ ಅಭಿಷ್ ಮಾಲ್ ನ ಎರಡನೇ ಮಹಡಿಯಲ್ಲಿ ಆಯೋಜಿಸಲಾಗಿದೆ.
ಡಿ.17ರಂದು ಬೆಳಗ್ಗೆ 9:30ಕ್ಕೆ ಉದ್ಘಾಟನೆ ನೆರವೇರಲಿದೆ. ಶಾಸಕ ಡಾ.ವೈ.ಭರತ್ ಶೆಟ್ಟಿ, ಕಾರ್ಪೊರೇಟರ್ ವರುಣ್ ಚೌಟ, ನಯನಾ ಆರ್. ಕೋಟ್ಯಾನ್ ಪಾಲ್ಗೊಳ್ಳಲಿದ್ದಾರೆ ಎಂದು ಆಯೋಜಕಿ ಜಯಶ್ರೀ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಈ ಕಾರ್ಯಾಗಾರದಲ್ಲಿ ವಿವಿಧ ಸರ್ಕಾರಿ ಹಾಗೂ ಸರಕಾರೇತರ ಸಂಸ್ಥೆಗಳಿಂದ ಮಹಿಳಾ ಉದ್ಯಮಿಗಳಿಗಿರುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸೂಕ್ಷ್ಮ, ಸಣ್ಣ, ಮಧ್ಯಮ ಉದ್ಯಮಗಳ ಇಲಾಖೆ ಮಂಗಳೂರಿನ ಸಹಾಯಕ ನಿರ್ದೇಶಕರಾದ ಶ್ರುತಿ ಜಿ.ಕೆ. ಮಹಿಳಾ ಉದ್ಯಮಿಗಳಿಗೆ ಲಭ್ಯ ಇರುವ ಸವಲತುತಿಗಳ ಬಗ್ಗೆ ಮಾಹಿತಿ ನೀಡುವರು. ಬೆಂಗಳೂರಿನ ಸೈಬರ್ ಕ್ರೈಂ ಎಕ್ಸ್‌ಪರ್ಟ್ ಶ್ರೀನಿಧಿ ಅವರು ಸೈಬರ್ ಕ್ರೈಂ, ಡಿಜಿಟಲ್ ಮಿಸ್ ರೆಪ್ರೆಸೆಂಟೇಶನ್ ಮತ್ತು ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ನೀಡುವರು. ಅಲ್ಲದೆ ಇನ್ಕ್ಯುಬೇಶನ್ ಸೆಂಟರ್ ಎನ್‌ಐಟಿಕೆ ಸುರತ್ಕಲ್ ನ ಮುಖ್ಯಸ್ಥ ಅರುಣ್ ಎಂ. ಇಸ್ಲೂರ್ ಅವರು ಸೈನ್ಸ್ ಟೆಕ್ನಾಲಜಿ ಎಂಟರ್ ಪ್ರೆನರ್ ಪಾರ್ಕ್‌ನ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದವರು ತಿಳಿಸಿದರು.
ಕಾರ್ಯಕ್ರಮದಲ್ಲಿ ನಾಲ್ವರು ಸಾಧಕ ಮಹಿಳಾ ಉದ್ಯಮಿಗಳನ್ನು ಸನ್ಮಾನಿಸಲಾಗುವುದು. ಪ್ರದರ್ಶನದಲ್ಲಿ ಗೃಹೋಪಯೋಗಿ ವಸುತಿಗಳು, ಮಹಿಳೆಯರ ಉಡುಪುಗಳು, ಕರಕುಶಲ ಅಲಂಕಾರಿಕಾ ಆಭರಣಗಳು, ಬೆಳ್ಳಿಯ ಆಭರಣಗಳು, ಜೇನಿನ ಉತ್ಪನ್ನಗಳು, ಭದ್ರತಾ ಉಪಕರಣಗಳು ಇತ್ಯಾದಿ ವಸ್ತುಗಳು ಇರಲಿವೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ವಿನೋದ್, ಸವಿತಾ ಉಪಸ್ಥಿತರಿದ್ದರು.