ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಮನಪಾ ಕ್ರಮ: ಅಕ್ಷಯ್ ಶ್ರೀಧರ್

ಮಂಗಳೂರು, ಡಿ.15: ಸಾಂಕ್ರಾಮಿಕ ರೋಗ ತಡೆಯುವ ನಿಟ್ಟಿನಲ್ಲಿ ಪಾಲಿಕೆ ವತಿಯಿಂದ ಈಗಾಗಲೇ ಸಾಕಷ್ಟು ಕ್ರಮಗಳನ್ನು ವಹಿಸಲಾಗಿದೆ. ಮಲೇರಿಯಾ ಹಾಗೂ ಡೆಂಗಿ ಕಳೆದ ಸಾಲಿಗೆ ಹೋಲಿಸಿದರೆ ನಿಯಂತ್ರಣದಲ್ಲಿದೆ. ಹಾಗಿದ್ದರೂ ರಾಜ್ಯಕ್ಕೆ ಹೋಲಿಕೆ ಮಾಡಿದರೆ, ಮಲೇರಿಯಾ ಪ್ರಕರಣಗಳು ನಗರದಲ್ಲಿ ಹೆಚ್ಚಾಗಿ ಕಂಡು ಬಂದಿರುವುದರಿಂದ ಈ ಹಿಂದೆ ಕೋವಿಡ್ ಅನ್ನು ನಿಯಂತ್ರಣ ಮಾಡಿದ ಅನುಭವದಲ್ಲಿ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಪಾಲಿಕೆ ಸಿದ್ಧತೆ ನಡೆಸಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಪತ್ರಿಕಾಭವನದಲ್ಲಿ ಗುರುವಾರ ಆಯೋಜಿಸಿದ್ದ ಪಾಲಿಕೆ ಆಯುಕ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಮಂದಾರದಲ್ಲಿ ಶೇಖರಣೆಗೊಂಡ ಪಚ್ಚನಾಡಿ ತ್ಯಾಜ್ಯ ವಿಲೇವಾರಿಗೆ ಸಂಬಂಧಪಟ್ಟಂತೆ ಬಯೋಮೈನಿಂಗ್ ವ್ಯವಸ್ಥೆಯ ಪ್ರಾಥಮಿಕ ಕೆಲಸಗಳು ಆರಂಭಗೊಂಡಿದೆ. ಪೂರ್ಣವಾಗಿ ಮಳೆ ಬಿಟ್ಟ ಬಳಿಕ ಕೆಲಸ ಆರಂಭಿವಾಗಲಿದೆ. ಬಳಿಕ ನಾಲ್ಕು ವರ್ಷಗಳ ಕಾಲ ಟೆಂಡರ್ ಅವಧಿ ಇರಲಿದೆ. ಹಾಗಿದ್ದರೂ ಎರಡು ವರ್ಷಗಳಲ್ಲಿ ಕಾರ್ಯ ಪೂರ್ಣಗೊಳಿಸಲು ಟೆಂಡರುದಾರರಿಗೆ ಸೂಚನೆ ನೀಡಲಾಗಿದೆ ಎಂದರು.
ಕದ್ರಿ ಪಾರ್ಕ್, ಠಾಗೂರ್ ಪಾರ್ಕ್ ಸೇರಿದಂತೆ ನಗರದ ಪಾರ್ಕ್‌ಗಳ ಅಭಿವೃದ್ಧಿಯಾಗುತ್ತಿದೆ. ನಗರದ ಯು.ಜಿ.ಡಿ. ಹಂತ ಹಂತವಾಗಿ ಅಭಿವೃದ್ಧಿಗೊಳಿಸಲಾಗುತ್ತಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ 8 ವಾರ್ಡ್ ಅಭಿವೃದ್ಧಿಯಾಗುತ್ತಿದ್ದು, ಬಂದರು, ದಕ್ಕೆ ಪ್ರದೇಶದ ಅಭಿವೃದ್ಧಿಗೂ ಆದ್ಯತೆ ನೀಡಲಾಗುವುದು ಎಂದರು.
ಸಾರ್ವಜನಿಕರಿಗೆ ಪಾಲಿಕೆಯ ಸೇವೆ ಸರಳೀಕರಣಕ್ಕೆ ಹಲವಾರು ಉಪಕ್ರಮ ಜಾರಿಗೆ ತರಲಾಗಿದೆ. ಈಗಾಗಲೇ ಕಾಗದ ರಹಿತ ಕಚೇರಿ ಜಾರಿಯಲ್ಲಿದ್ದು, ಹಲವು ಸೇವೆಗಳನ್ನು ಆನ್‌ಲೈನ್ ವ್ಯವಸ್ಥೆಯೊಡನೆ ಕಾರ್ಯಗತಗೊಳಿಸಲಾಗಿದೆ. ಟಿಡಿಆರ್ ನಿಯಮ ಸರಳ ಮಾಡಲಾಗಿದೆ. ಸ್ಪಾಟ್‌ಲೈನ್ ಕಲೆಕ್ಷನ್ ಸಾಫ್ಟ್ ವೇರ್ ಕೆಲಸ ಅಂತಿಮ ಹಂತದಲ್ಲಿದೆ. ಕಾರ್ಪೊರೇಷನ್ ವ್ಯಾಪ್ತಿಯ ಅಂಗಡಿಗಳ ಬಾಡಿಗೆಯನ್ನು ಆನ್‌ಲೈನ್ ವ್ಯವಸ್ಥೆಯೊಳಗೆ ತರಲಾಗುವುದು ಎಂದರು.
ಕೆರೆಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಗುಜ್ಜರಕೆರೆ ಮಾದರಿಯಾಗಿ ನಿರ್ಮಾಣಗೊಂಡಿದೆ. ಕಾವೂರು ಕೆರೆ ಕಾಮಗಾರಿ ನಗರದ ಫುಟ್‌ಪಾತ್, ರಸ್ತೆ ಬದಿಗಳನ್ನು ಬೀದಿ ಬದಿ ವ್ಯಾಪಾರ ನಡೆಸುತ್ತಿರುವುದು ಪಾಲಿಕೆ ಗಮನದಲ್ಲಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಬೀದಿಬದಿ ಮಾರಾಟ ವಲಯವನ್ನು ಗುರುತಿಸಲಾಗುವುದು. ಸ್ಟೇಟ್‌ಬ್ಯಾಂಕ್ ವಲಯಕ್ಕೆ ಇಲ್ಲಿನ ಇಂದಿರ ಕ್ಯಾಂಟೀನ್ ಬಳಿ, ಸರ್ವೀಸ್ ಬಸ್ ನಿಲ್ದಾಣ ಬಳಿ ಸೇರಿದಂತೆ ಕೆಲವೊಂದು ಕಡೆ ವಲಯವನ್ನಾಗಿ ಗುರುತಿಸಲಾಗಿದೆ ಇನ್ನೂ ಅಂತಿಮಗೊಂಡಿಲ್ಲ. ಸದ್ಯದಲ್ಲೇ ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದರು.
ಮಂಗಳೂರು ಪಾಲಿಕೆ ವ್ಯಾಪ್ತಿಯ ಬಹುತೇಕ ರಸ್ತೆಗಳನ್ನು ಅಭಿವೃದ್ಧಿಗೊಳಿಸಲಾಗುತ್ತಿದೆ. ಸುಮಾರು 61 ಕೋಟಿ ರೂ. ವೆಚ್ಚದಲ್ಲಿ ನಗರದ ರಸ್ತೆಗಳ ಅಗಲಗೊಳಿಸುವ ಕೆಲಸ ನಡೆಯುತ್ತಿದೆ. 54 ಕೋಟಿ ರೂ. ವೆಚ್ಚದಲ್ಲಿ ಮತ್ತಷ್ಟು ಕಾಮಗಾರಿಗಳು ಆರಂಭಗೊಳ್ಳಲಿದೆ. ಸುಮಾರು 30 ಕೋಟಿ ರೂ. ವೆಚ್ಚದಲ್ಲಿ ವಿವಿಧ ಜಂಕ್ಷನ್‌ಗಳ, ವೃತ್ತಗಳ ಅಭಿವೃದ್ಧಿ ನಗರದಲ್ಲಿ ಸಾಗುತ್ತಿದೆ ಎಂದು ಆಯುಕ್ತರು ವಿವರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜೀತೇಂದ್ರ ಕುಂದೇಶ್ವರ ಉಪಸ್ಥಿತರಿದ್ದರು.
ಇದೇ ವೇಳೆ ಮನಪಾ ಆಯುಕ್ತರನ್ನು ಸಂಘದ ವತಿಯಿಂದ ಗೌರವಿಸಲಾಯಿತು.
ಮಂಗಳೂರು ಪಾಲಿಕೆಯ 60 ವಾರ್ಡ್‌ಗಳಲ್ಲಿ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿ ತಿಂಗಳೊಳಗೆ ಟೆಂಡರ್ ಕರೆದು, ನಾಲ್ಕು ತಿಂಗಳೊಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸಲಾಗುವುದು. ತ್ಯಾಜ್ಯ ನಿರ್ವಹಣೆಗೆ ಸಂಬಂಧಪಟ್ಟಂತೆ ಈಗಾಗಲೇ ಎರಡು ಡಿಪಿಆರ್ ಅನ್ನು ಸರಕಾರಕ್ಕೆ ಸಲ್ಲಿಸಲಾಗಿತ್ತು. ಪರಿಶೀಲಿಸಿದ ಸರಕಾರ ಎರಡು ಡಿಪಿಆರ್‌ನಲ್ಲಿರುವ ಅಂಶಗಳನ್ನು ಆಯ್ದುಕೊಂಡು ಹೊಸ ಡಿಪಿಆರ್ ಸಿದ್ಧಮಾಡಿ ಕಳುಹಿಸುವಂತೆ ತಿಳಿಸಿತ್ತು. ಅದರಂತೆ, ಡಿಪಿಆರ್ ಸಲ್ಲಿಕೆ ಮಾಡಲಾಗಿದೆ. ತಿಂಗಳೊಳಗೆ ಟೆಂಡರ್ ಪ್ರಕ್ರಿಯೆ ನಡೆಯಲಿದೆ. ಹೊಸ ಡಿಪಿಆರ್‌ನಂತೆ ನಗರದಲ್ಲಿ ತ್ಯಾಜ್ಯ ವಿಲೇವಾರಿಗೆ ಪ್ರಾಯೋಗಿಕ ನೆಲೆಯಲ್ಲಿ ಕೆಲವೊಂದು ಎಲೆಕ್ಟ್ರಿಕ್ ವಾಹನಗಳನ್ನು ಬಳಸುವ ಪ್ರಸ್ತಾಪವಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರು.
ಅನಧಿಕೃತ ಫ್ಲೆಕ್ಸ್‌ಗಳ ತೆರವಿಗೆ ಕಾರ್ಯಪಡೆ
ನಗರದಲ್ಲಿ ಅನಧಿಕೃತ ಫ್ಲೆಕ್ಸ್‌ಗಳ ತೆರವಿಗೆ ಸಂಬಂಧಿಸಿ ಕಾರ್ಯಪಡೆಯನ್ನು ರಚಿಸಿ ಸರ್ವೇ ಕಾರ್ಯ ನಡೆಸಲಾಗುವುದು. ಪರವಾನಿಗೆ ಪಡೆಯದೆ, ಹಾಕಲಾಗುವ ಫ್ಲೆಕ್ಸ್‌ಗಳನ್ನು ತೆರವುಗೊಳಿಸುವುದು, ಪರವಾನಿಗೆ ಪಡೆದು ಹಾಕಲಾದ ಫ್ಲೆಕ್ಸ್‌ಗಳು ನಿಗದಿತ ಗಾತ್ರದಲ್ಲಿಯೇ ಇದೆಯೇ ಎಂಬುದನ್ನು ಕೂಡಾ ಈ ಕಾರ್ಯಪಡೆ ಪರಿಶೀಲಿಸಿ ಅಗತ್ಯ ಕ್ರಮ ವಹಿಸಲಿದೆ. ಒಂದು ತಿಂಗಳಲ್ಲಿ ಈ ನಿಟ್ಟಿನಲ್ಲಿ ಕ್ರಮವಾಗಲಿದೆ ಎಂದು ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದ್ದಾರೆ.
