ರಾಹುಲ್ ಗಾಂಧಿ ಜೊತೆಗಿನ ಸಂದರ್ಶನದಲ್ಲಿ RBI ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿದ್ದೇನು?

ಹೊಸದಿಲ್ಲಿ: ಬುಧವಾರ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi) ನೇತೃತ್ವದ ಭಾರತ ಜೋಡೋ ಯಾತ್ರಾ (Bharat Jodo Yatra) ರಾಜಸ್ಥಾನದಲ್ಲಿ ಸಾಗುತ್ತಿದ್ದಾಗ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಮಾಜಿ ಗವರ್ನರ್ ರಘುರಾಮ್ ರಾಜನ್ (Raghuram Rajan) ಕೂಡ ರಾಹುಲ್ ಜೊತೆ ಯಾತ್ರೆಯಲ್ಲಿ ಕೆಲ ಕಾಲ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ನಂತರ ರಾಹುಲ್ ಗಾಂದಿ ತಮ್ಮ ಯುಟ್ಯೂಬ್ ಚಾನಲ್‌ನಲ್ಲಿ ತಾವು ರಘುರಾಮ್ ರಾಜನ್ ಅವರ ಜೊತೆಗೆ ನಡೆಸಿದ ಮಾತುಕತೆಯ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.
ಈ ಮಾತುಕತೆಯಲ್ಲಿ ಇಬ್ಬರೂ ಆರ್ಥಿಕತೆ, ಆರ್ಥಿಕ ಅಸಮಾನತೆ ಸಹಿತ ವಿವಿಧ ವಿಷಯಗಳ ಬಗ್ಗೆ ಮುಕ್ತವಾಗಿ ಚರ್ಚಿಸಿದ್ದಾರೆ.
ಭಾರತದ ಆರ್ಥಿಕತೆ ಬಗ್ಗೆ ರಾಹುಲ್ ಅವರು ರಘುರಾಮ್ ರಾಜನ್ ಅವರ ಅಭಿಪ್ರಾಯ ಕೇಳಿದಾಗ ಅವರು ಹೀಗೆ ಹೇಳಿದರು.
"ಮುಂದಿನ ವರ್ಷ ಕಷ್ಟಕರವಾಗಲಿದೆ. ಈ ವರ್ಷ ಹೇಗೂ ಯುದ್ಧ ಮತ್ತಿತರ ವಿಚಾರಗಳಿಂದ ಕಷ್ಟಕರವಾಗಿತ್ತು. ಜಗತ್ತಿನಲ್ಲಿ ಪ್ರಗತಿ ನಿಧಾನಗತಿಯಾಗಲಿದೆ, ಬಡ್ಡಿ ದರಗಳು ಏರಿಕೆಯಾಗುತ್ತಿವೆ, ಇದು ಪ್ರಗತಿಯನ್ನು ನಿಧಾನಗೊಳಿಸುತ್ತದೆ. ಭಾರತ ಕೂಡ ಬಾಧಿತವಾಗಲಿದೆ. ಇಲ್ಲಿ ಕೂಡ ಬಡ್ಡಿ ದರಗಳು ಏರಿಕೆಯಾಗಿವೆ ಹಾಗೂ ದೇಶದ ರಫ್ತು ಕ್ಷೇತ್ರ ಕೂಡ ಸ್ವಲ್ಪ ಮಟ್ಟಿಗೆ ಬಾಧಿತವಾಗಿದೆ. ಭಾರತದ ಹಣದುಬ್ಬರ ಹೆಚ್ಚಾಗಿ ವಸ್ತು ಹಣದುಬ್ಬರ ಸಮಸ್ಯೆ... ತರಕಾರಿ ಹಣದುಬ್ಬರ ಸಮಸ್ಯೆ... ಇದು ಪ್ರಗತಿ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ, ಆದುದರಿಂದ ಮುಂದಿನ ವರ್ಷ ಪ್ರಗತಿ ಪ್ರಮಾಣ ಶೇ 5ರಷ್ಟಾದರೂ ನಾವು ಅದೃಷ್ಟವಂತರು ಎಂದು ಹೇಳಬೇಕು," ಎಂದರು.
ಅಭಿವೃದ್ಧಿ ಪ್ರಮಾಣದಲ್ಲಿ ಇಳಿಕೆಗೆ ಕಾರಣವೇನು ಎಂದು ರಾಹುಲ್ ಕೇಳಿದಾಗ ʻಸಾಂಕ್ರಾಮಿಕʼ ಎಂದು ರಾಜನ್ ಉತ್ತರಿಸಿದರು. "ಸಮಸ್ಯೆಗೆ ಸಾಂಕ್ರಾಮಿಕ ಭಾಗಶಃ ಕಾರಣವಾಗಿತ್ತು. ನಾವು ಶೇ 9 ರಿಂದ ಶೇ 6ಕ್ಕೆ ತಲುಪಿದೆವು ಹಾಗೂ ಅಭಿವೃದ್ಧಿಗೆ ಕಾರಣವಾಗಬಲ್ಲ ಸುಧಾರಣೆಗಳನ್ನು ನಾವು ತಂದಿಲ್ಲ," ಎಂದು ಅವರು ಹೇಳಿದರು.
ಆರ್ಥಿಕ ಅಸಮಾನತೆಯ ಬಗ್ಗೆ ರಾಹುಲ್ ಕೇಳಿದಾಗ ರಾಜನ್ ಅವರ ಉತ್ತರ ಹೀಗಿತ್ತು. "ಇದು ದೊಡ್ಡ ಸಮಸ್ಯೆ. ಉದ್ಯಮಿಗಳು ಮಾತ್ರವಲ್ಲ, ಸಾಂಕ್ರಾಮಿಕದ ಸಂದರ್ಭ ಮಧ್ಯಮ ಮೇಲ್ವರ್ಗದ ಆದಾಯವೂ ಹೆಚ್ಚಾಗಿದೆ. ಅವರಿಗೆ ಮನೆಯಿಂದಲೇ ಕೆಲಸ ಮಾಡಬಹುದಾಗಿತ್ತು. ಆದರೆ ಬಡವರು ಫ್ಯಾಕ್ಟರಿಯಲ್ಲಿ ದುಡಿಯುವವರು, ಫ್ಯಾಕ್ಟರಿ ಮುಚ್ಚಿದಾಗ ಆದಾಯ ಕಳೆದುಕೊಂಡರು. ಸಾಂಕ್ರಾಮಿಕದ ಸಂದರ್ಭ ಈ ಅಂತರ ಹೆಚ್ಚಾಯಿತು. ಬಡವರಿಗೆ ಸಾಂಕ್ರಾಮಿಕ ಸಂದರ್ಭ ರೇಷನ್ ದೊರಕಿತು ಆದರೆ ಶ್ರೀಮಂತರು ಬಾಧಿತರಾಗಲಿಲ್ಲ," ಎಂದು ಹೇಳಿದರು.
"ಕೆಳ ಮಧ್ಯಮ ವರ್ಗದವರು ಬಹಳ ಕಷ್ಟಪಟ್ಟರು. ಕೆಲಸ ಕಳೆದುಕೊಂಡರು, ಸಾಲ ಹೆಚ್ಚಾಯಿತು, ಬಡ್ಡಿ ದರಗಳೂ ಏರಿಕೆಯಾದವು. ನಾವು ಅವರತ್ತ ನೋಡಬೇಕು, ನಾವು ಜಾರಿಗೊಳಿಸುವ ನೀತಿಗಳು ಅವರ ಹಿತಾಸಕ್ತಿಗಳನ್ನು ಗಮನದಲ್ಲಿರಿಸಬೇಕು, ಬಹಳಷ್ಟು ಬಾಧಿತರಾದವರ ಬಗ್ಗೆ ಯೋಚಿಸಬೇಕು," ಎಂದು ರಾಜನ್ ಹೇಳಿದರು.
ಕೆಲವೊಂದು ಉದ್ಯಮಿಗಳೇ ಹೆಚ್ಚು ಶ್ರೀಮಂತರಾಗುವ ಕುರಿತು ಪ್ರತಿಕ್ರಿಯಿಸಿದ ರಾಜನ್, "ನಾವು ಬಂಡವಾಳಶಾಹಿ ವಿರುದ್ಧವಲ್ಲ, ಆದರೆ ಸ್ಪರ್ಧೆ ಆಗತ್ಯ, ಎಲ್ಲಾ ಉದ್ಯಮಗಳೂ ಭಾರತಕ್ಕೆ ಒಳ್ಳೆಯದು, ಸಣ್ಣ ಉದ್ಯಮಗಳು ಕೂಡ, ದೊಡ್ಡ ಉದ್ದಿಮೆಗಳೂ ಒಳ್ಳೆಯದು ಆಧರೆ ಏಕಸ್ವಾಮ್ಯ ಒಳ್ಳೆಯದಲ್ಲ," ಎಂದು ರಾಜನ್ ಹೇಳಿದರು.







