ಕುಂದಾಪುರ: ಮಂಗಳೂರು ವಿವಿ ಶೈಕ್ಷಣಿಕ ಸಮಸ್ಯೆ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಕುಂದಾಪುರ, ಡಿ.15: ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿದ್ಯಾರ್ಥಿಗಳು ಅನುಭವಿಸುತ್ತಿರುವ ಶೈಕ್ಷಣಿಕ ಸಮಸ್ಯೆಗಳನ್ನು ವಿರೋಧಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕುಂದಾಪುರದ ಮಿನಿವಿಧಾನಸೌಧದ ಎದುರು ಪ್ರತಿಭಟನೆ ನಡೆಸಿದರು.
ಮಂಗಳೂರು ವಿವಿ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡದೆ ಸತಾಯಿಸಲಾಗುತ್ತಿದೆ. ಈ ಅಂಕಪಟ್ಟಿ ಬಾರದಿರುವುದರಿಂದ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಹಾಕಲು ಸಮಸ್ಯೆಯಾಗುತ್ತಿದೆ. ಮೌಲ್ಯಮಾಪನವನ್ನು ಸೂಕ್ತ ಸಮಯದಲ್ಲಿ ನಡೆಸದೇ ಇರುವುದು, ಮರು ಪರೀಕ್ಷೆ ಹಾಗೂ ಮರು ಮೌಲ್ಯ ಮಾಪನಗಳಲ್ಲಿ ಗೊಂದಲ, ಮರು ಮೌಲ್ಯಮಾಪನದಲ್ಲಿ ಶುಲ್ಕ ಮರುಪಾವತಿಗೆ ನಿಗದಿ ಪಡಿಸಿದಷ್ಟು ಅಂಕ ಬಂದರೂ ಸಹ ಕಟ್ಟಿದ ಶುಲ್ಕವು ಮರುಪಾವತಿ ಯಾಗದಿರುವುದು ಸಮಸ್ಯೆಯಾಗಿದೆ ಎಂದು ಪ್ರತಿಭಟನಕಾರರು ದೂರಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಈ ಎಲ್ಲಾ ಬೇಜವಾಬ್ದಾರಿತನದಿಂದಾಗಿ ಮಕ್ಕಳು ಹಾಗೂ ಪೋಷಕರು ತಲೆತಗ್ಗಿಸುವಂತೆ ಆಗಿದೆ. ಸಾವಿರಾರು ವಿದ್ಯಾರ್ಥಿ ಗಳಿಗೆ ಸ್ನಾತಕೋತ್ತರ ವಿಭಾಗಗಳಿಗೆ ಸೇರ್ಪಡೆಯಾಗಲು ಆಗದೆ ಇರುವುದು ಶೋಚನೀಯ. ಈ ಎಲ್ಲಾ ವಿಷಯಗಳಿಗೆ ಮಂಗಳೂರು ವಿವಿ ಉಪಕುಲಪತಿ ಹಾಗೂ ಪರೀಕ್ಷಾಂಗ ಕುಲ ಸಚಿವರು ನೇರ ಹೊಣೆಯಾಗಿದ್ದಾರೆ. ಸಂಬಂಧ ಪಟ್ಟವರು ವಿದ್ಯಾರ್ಥಿಗಳು ಅನುಭವಿಸುತ್ತಿರುವ ತೊಂದರೆಗಳನ್ನು ಶೀಘ್ರವೇ ಪರಿಹರಿಸಬೇಕು ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ತಾಲೂಕು ಸಂಪರ್ಕ ಪ್ರಮುಖ್ ರಾಹುಲ್ ಶೆಟ್ಟಿ, ತಾಲೂಕು ಸಂಚಾಲಕ ಧನುಷ್ ಪೂಜಾರಿ, ತಾಲೂಕು ಸಂಪರ್ಕ ಪ್ರಮುಖ್ ರಾಹುಲ್ ಶೆಟ್ಟಿ, ಬಿ.ಬಿ.ಹೆಗ್ಡೆ ಕಾಲೇಜು ಘಟಕದ ಅಧ್ಯಕ್ಷ ವಿಘ್ನೇಶ್ ಶೆಟ್ಟಿ, ಭಂಡಾರ್ಕಾರ್ಸ್ ಕಾಲೇಜು ಘಟಕದ ಅಧ್ಯಕ್ಷ ವೀಕ್ಷಿತ್, ಕಾಗೇರಿ ಕಾಲೇಜು ಘಟಕದ ಅಧ್ಯಕ್ಷ ಚೇತನ್ ಉಪಸ್ಥಿತರಿದ್ದರು. ಇದಕ್ಕೂ ಮೊದಲು ಕುಂದಾಪುರ ಶಾಸ್ತ್ರಿ ವೃತ್ತದಿಂದ ಮಿನಿವಿಧಾನ ಸೌದದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸ ಲಾಯಿತು.







