ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿದ್ದು ಏಕೆ?: ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿದ್ದು ಹೀಗೆ...
ಮೈಸೂರು, ಡಿ.15: 'ನಾನು ಕಾಂಗ್ರೆಸ್ ನಾಯಕರನ್ನು ಕದ್ದು ಮುಚ್ಚಿ ಭೇಟಿ ಆಗಿಲ್ಲ, ನಾನು ಕಾಂಗ್ರೆಸ್ ಪಕ್ಷದಲ್ಲಿ 40 ವರ್ಷ ಇದ್ದವನು. ಆ ಸ್ನೇಹದಿಂದ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದೇನೆ' ಎಂದು ವಿಧಾನಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ತಿಳಿಸಿದ್ದಾರೆ.
ನಗರದ ಪತ್ರಕರ್ತರ ಭವನದಲ್ಲಿ ಗುರುವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 'ನಾನು ಕಾಂಗ್ರೆಸ್ ಸೇರುತ್ತೇನೆ ಎಂದು ಎಲ್ಲೂ ಹೇಳಿಲ್ಲ, ಸದ್ಯ ಬಿಜೆಪಿ ಪಕ್ಷದ ವಿಧಾನಪರಿಷತ್ ಸದಸ್ಯ ನಾನು. ಕಾಂಗ್ರೆಸ್ ಸೇರುತ್ತೇನೆ ಎಂದರೆ ನಾನು ಮಾಧ್ಯಮದವರಿಗೆ ಹೇಳಿಯೇ ಸೇರುತ್ತೇನೆ' ಎಂದು ಪ್ರಶ್ನೆಯೊಂದಕ್ಕೆ ವಿಶ್ವನಾಥ್ ಪ್ರತಿಕ್ರಿಯಿಸಿದರು.
ನಾನು ಸಿದ್ದರಾಮಯ್ಯ ಅವರ ವಿರುದ್ಧ ರಾಜಕೀಯವಾಗಿ ಹೋರಾಟ ಮಾಡಿರಬಹುದು. ಆದರೆ ನಾನು, ಸಿದ್ದರಾಮಯ್ಯ ವೈಯಕ್ತಿಕವಾಗಿ ಸ್ನೇಹಿತರಂತೆ ಇದ್ದೇವೆ. ಅವರ ಆರೋಗ್ಯ ಸರಿ ಇಲ್ಲದಾಗ ಅವರನ್ನು ಧರ್ಮಸಹಿಷ್ಣುತೆಗಾಗಿ ಭೇಟಿ ಮಾಡಿದ್ದು ತಪ್ಪಾಯಿತೇ? ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನನಗೆ ನಲವತ್ತು ವರ್ಷದ ಸ್ನೇಹಿತರು. ಅವರು ಬೆಂಗಳೂರಿನ ಹೋಟೆಲ್ ನಲ್ಲಿ ಇದ್ದರು ಎಂಬ ಮಾಹಿತಿ ತಿಳಿದು ಅವರ ಅಪಾಯಿಂಟ್ ಮೆಂಟ್ ತೆಗೆದು ಕೊಂಡು ಹೋಗಿ ಅವರಿಗೆ ಸ್ವಾಗತ ಮಾಡಿದೆ ಅದು ತಪ್ಪೇ? ಡಿ.ಕೆ.ಶಿವಕುಮಾರ್ ನಾನು ಸ್ನೇಹಿತರು, ರಾಜಕೀಯ ಬಿಟ್ಟು ಅವರನ್ನು ಭೇಟಿ ಮಾಡಿದ್ದು ತಪ್ಪೇ? ಎಂದು ಪ್ರಶ್ನಿಸಿದರು.