ಕಳ್ಳಭಟ್ಟಿ ಸೇವಿಸಿ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ನೀಡುವ ಸಾಧ್ಯತೆ ತಳ್ಳಿ ಹಾಕಿದ ಬಿಹಾರ ಸಿಎಂ
ಮದ್ಯ ಸೇವಿಸಿದರೆ ಸಾಯುತ್ತಾರೆ, ಎಂದ ನಿತೀಶ್ ಕುಮಾರ್

ಪಾಟ್ನಾ: ಕಳ್ಳಭಟ್ಟಿ ಸೇವಿಸಿ ಸಾವಿಗೀಡಾದವರ ಕುಟುಂಬಗಳಿಗೆ ಪರಿಹಾರ ನೀಡುವ ಸಾಧ್ಯತೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂದು ತಳ್ಳಿ ಹಾಕಿದ್ದಾರೆ. ಜನರು ಹೆಚ್ಚು ಜಾಗೃತರಾಗಬೇಕು ಎಂದು ಹೇಳಿದ ಅವರು ರಾಜ್ಯದಲ್ಲಿ 2016 ರಿಂದ ಮದ್ಯ ನಿಷೇಧ ಜಾರಿಯಲ್ಲಿದೆ ಎಂದು ನೆನಪಿಸಿದರು.
ಇತ್ತೀಚೆಗೆ ಬಿಹಾರದ ಸಾರಣ್ ಜಿಲ್ಲೆಯಲ್ಲಿ ಕಳ್ಳಭಟ್ಟಿ ಸೇವಿಸಿ 30ಕ್ಕೂ ಹೆಚ್ಚು ಜನರು ಮೃತಪಟ್ಟ ಘಟನೆಯ ಬೆನ್ನಲ್ಲೇ ರಾಜ್ಯದಲ್ಲಿ ಪಾನನಿಷೇಧ ನಿಯಮಗಳು ಕಟ್ಟುನಿಟ್ಟಾಗಿ ಜಾರಿಗೊಳ್ಳುತ್ತಿಲ್ಲ ಎಂದು ಆರೋಪಿಸಿ ಬಿಜೆಪಿ ಸದನದ ಒಳಗೂ ಹೊರಗೂ ಪ್ರತಿಭಟನೆ ನಡೆಸಿದೆ.
ಹಿಂದಿನ ಕಳ್ಳಭಟ್ಟಿ ದುರಂತಗಳಲ್ಲಿ ಮಡಿದವರಿಗೂ ಪರಿಹಾರ ನೀಡುವ ಕುರಿತ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದ ನಿತೀಶ್ "ಮದ್ಯ ಸೇವಿಸಿದವರು ಸಾಯುತ್ತಾರೆ. ಈ ಕುರಿತು ನಮ್ಮಲ್ಲಿ ಉದಾಹರಣೆಯಿದೆ," ಎಂದರು.
"ದುರಂತದ ಬಗ್ಗೆ ದುಃಖ ವ್ಯಕ್ತಪಡಿಸಬೇಕಿದೆ, ಅದೇ ಸಮಯ ಜನರನ್ನು ಜಾಗೃತಗೊಳಿಸಬೇಕಿದೆ, ನಾವು ಸಾಮಾಜಿಕ ಜಾಗೃತಿ ಅಭಿಯಾನ ನಡೆಸುತ್ತಿದ್ದೇವೆ," ಎಂದು ಅವರು ಹೇಳಿದರು.
"ಪಾನನಿಷೇಧ ಜಾರಿಯಲ್ಲಿರುವಾಗ ಮದ್ಯ ಮಾರಾಟ ಮಾಡಲಾಗುತ್ತಿದ್ದರೆ ಆ ಮದ್ಯದಲ್ಲಿ ಏನಾದರೂ ಕೆಟ್ಟದ್ದು ಇರಬೇಕು, ನೆನಪಿಡಿ ಹೇಗಿದ್ದರೂ ಮದ್ಯ ಸೇವಿಸಬಾರದು, ಪಾನನಿಷೇಧದ ಬಗ್ಗೆ ಹೆಚ್ಚಿನವರು ಸಹಮತ ಹೊಂದಿದ್ದಾರೆ ಆದರೆ ಕೆಲ ಜನರು ತಪ್ಪುಗಳನ್ನು ಮಾಡುತ್ತಾರೆ,"ಎಂದು ನಿತೀಶ್ ಹೇಳಿದರು.







