ವಾಟ್ಸ್ ಆ್ಯಪ್ ಪೇ ಇಂಡಿಯಾ ಮುಖ್ಯಸ್ಥ ವಿನಯ್ ಚೊಲೆಟ್ಟಿ ರಾಜೀನಾಮೆ

ಹೊಸದಿಲ್ಲಿ: ಮೆಟಾ (Meta) ಒಡೆತನದ ವಾಟ್ಸ್ ಆ್ಯಪ್ ಪೇ (WhatsApp Pay) ಇಂಡಿಯಾದ ಮುಖ್ಯಸ್ಥ ವಿನಯ್ ಚೊಲೆಟ್ಟಿ (Vinay Choletti) ಅವರು ರಾಜೀನಾಮೆ ನೀಡಿದ್ದಾರೆಂದು ವರದಿಯಾಗಿದೆ. ಈ ಹುದ್ದೆಗೆ ಏರಿದ ನಾಲ್ಕೇ ತಿಂಗಳಲ್ಲಿ ವಿನಯ್ ರಾಜೀನಾಮೆ ಕುತೂಹಲ ಕೆರಳಿಸಿದೆ.
ಕಳೆದ ಒಂದೂವರೆ ತಿಂಗಳು ಅವಧಿಯಲ್ಲಿ ಮೆಟಾ ಸಂಸ್ಥೆಯ ಉನ್ನತ ಅಧಿಕಾರಿಯೊಬ್ಬರು ರಾಜೀನಾಮೆ ನೀಡಿದ ನಾಲ್ಕನೇ ವಿದ್ಯಮಾನ ಇದಾಗಿದೆ. ನವೆಂಬರ್ ತಿಂಗಳಿನಲ್ಲಿ ಮೆಟಾ ಇಂಡಿಯಾ ಮುಖ್ಯಸ್ಥ ಅಜಿತ್ ಮೋಹನ್ (Ajit Mohan) ರಾಜೀನಾಮೆ ನೀಡಿದ್ದರು.
ಇದರ ಬೆನ್ನಲ್ಲೇ ವಾಟ್ಸ್ ಆ್ಯಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ಹುದ್ದೆ ತೊರೆದಿದ್ದರೆ ಕಳೆದ ತಿಂಗಳು ಮೆಟಾ ಇಂಡಿಯಾ ಪಬ್ಲಿಕ್ ಪಾಲಿಸಿ ಮುಖ್ಯಸ್ಥ ರಾಜೀವ್ ಅಗರ್ವಾಲ್ ರಾಜೀನಾಮೆ ನೀಡಿದ್ದರು.
ವಾಟ್ಸ್ ಆ್ಯಪ್ ತೊರೆಯುವ ಕುರಿತು ಲಿಂಕ್ಡ್‌ಇನ್‌ನಲ್ಲಿ ಬುಧವಾರ ಪೋಸ್ಟ್ ಮಾಡಿ ವಾಟ್ಸ್ ಆ್ಯಪ್ ಪೇ ನಲ್ಲಿ ಇದು ನನ್ನ ಕೊನೆ ದಿನ ಎಂದು ವಿನಯ್ ಬರೆದುಕೊಂಡಿದ್ದಾರೆ.
ಅಕ್ಟೋಬರ್ 2021 ರಲ್ಲಿ ಅವರು ಅಮೆಝಾನ್ ತೊರೆದು ವಾಟ್ಸ್ ಆ್ಯಪ್ ಪೇ ಸೇರಿದ್ದರು.







