ಪಿಎಚ್ಡಿ ವಿದ್ಯಾರ್ಥಿಯನ್ನು ಕೊಂದು ಶರೀರದ ಭಾಗಗಳನ್ನು ಮೂರು ಕಡೆ ಎಸೆದಿದ್ದ ಆರೋಪಿಯ ಬಂಧನ

ಘಾಝಿಯಾಬಾದ್: ಉ.ಪ್ರದೇಶದ ಘಾಝಿಯಾಬಾದ್ ಜಿಲ್ಲೆಯ ಮೋದಿನಗರದ ತನ್ನ ಮನೆಯಲ್ಲಿ ಬಾಡಿಗೆಗಿದ್ದ ಪಿಎಚ್ಡಿ ವಿದ್ಯಾರ್ಥಿಯನ್ನು ಕೊಂದು ಶರೀರದ ತುಂಡುಗಳನ್ನು ನಾಲೆಗೆ ಎಸೆದಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ನಡೆದ ಎರಡು ತಿಂಗಳುಗಳ ಬಳಿಕ ಪ್ರಕರಣವನ್ನು ಪೊಲೀಸರು ಭೇದಿಸಿದ್ದಾರೆ.
ಉಮೇಶ ಶರ್ಮಾ ಬಂಧಿತ ಆರೋಪಿಯಾಗಿದ್ದು, ಕೊಲೆಯಾಗಿರುವ ವಿದ್ಯಾರ್ಥಿಯನ್ನು ಅಂಕಿತ್ ಖೋಕರ್ ಎಂದು ಗುರುತಿಸಲಾಗಿದೆ.
ಖೋಕರ್ ಇತ್ತೀಚಿಗೆ ಬಾಘಪತ್ನಲ್ಲಿಯ ತನ್ನ ಪೂರ್ವಜರ ಆಸ್ತಿಯನ್ನು ಒಂದು ಕೋಟಿ ರೂ.ಗಳಿಗೆ ಮಾರಾಟ ಮಾಡಿದ್ದು,ಈ ಹಣದ ಮೇಲೆ ಶರ್ಮಾ ಕಣ್ಣಿರಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಶರ್ಮಾನ ಸ್ನೇಹಿತ ಪರ್ವೇಶ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ತನ್ನ ಹೆತ್ತವರ ನಿಧನದ ಬಳಿಕ ಖೋಕರ್ ಒಂಟಿಯಾಗಿ ವಾಸವಾಗಿದ್ದು,ಲಕ್ನೋದ ವಿವಿಯೊಂದರಲ್ಲಿ ಪಿಎಚ್ಡಿ ವಿದ್ಯಾರ್ಥಿಯಾಗಿದ್ದ.
ವಾರಗಟ್ಟಲೆ ತಮ್ಮ ಕರೆಗಳಿಗೆ ಖೋಕರ್ ಉತ್ತರಿಸದಿದ್ದಾಗ ಶಂಕಿತ ಸ್ನೇಹಿತರು ಆತನಿಗಾಗಿ ಹುಡುಕಾಟ ಆರಂಭಿಸಿದ್ದರು. ಖೋಕರ್ನ ಮೊಬೈಲ್ ಸಂಖ್ಯೆಯಿಂದ ಅವರಿಗೆ ಕೆಲವು ಸಂದೇಶಗಳು ಬರಲು ಆರಂಭವಾಗಿದ್ದರೂ,ಸಂಭಾಷಣೆಯ ಶೈಲಿ ಆತನದಾಗಿರಲಿಲ್ಲ. ಇದು ಗೊತ್ತಾದಾಗ ಶೋಧದಲ್ಲಿ ಪೊಲೀಸರೂ ಭಾಗಿಯಾಗಿದ್ದರು.
ಖೋಕರ್ ಶರ್ಮಾನಿಗೆ 40 ಲ.ರೂ.ಗಳ ಸಾಲವನ್ನು ನೀಡಿದ್ದ. ಖೋಕರ್ ಎಲ್ಲಿಗೆ ಹೋಗಿದ್ದಾನೆ ಎನ್ನುವುದು ತನಗೆ ತಿಳಿದಿಲ್ಲ ಎಂದು ಶರ್ಮಾ ಆತನ ಸ್ನೇಹಿತರಿಗೆ ತಿಳಿಸಿದ್ದ.
ಶರ್ಮಾ ಅ.6ರಂದು ಖೋಕರ್ನನ್ನು ಉಸಿರುಗಟ್ಟಿಸಿ ಕೊಂದ ಬಳಿಕ ಗರಗಸದಿಂದ ಶರೀರವನ್ನು ಕನಿಷ್ಠ ಮೂರು ಭಾಗಗಳನ್ನಾಗಿಸಿ ಅಲ್ಯುಮಿನಿಯಂ ಹಾಳೆಯಲ್ಲಿ ಸುತ್ತಿದ್ದ. ಒಂದು ಭಾಗವನ್ನು ಮುಝಫ್ಫರ್ನಗರದ ನಾಲೆಯಲ್ಲಿ,ಇನ್ನೊಂದನ್ನು ಮಸ್ಸೂರಿ ನಾಲೆಯಲ್ಲಿ ಮತ್ತು ಮೂರನೇ ಭಾಗವನ್ನು ಎಕ್ಸಪ್ರೆಸ್ವೇದಲ್ಲಿ ಎಸೆದಿದ್ದ ಎಂದು ಪೊಲೀಸರು ತಿಳಿಸಿದರು. ಖೋಕರ್ ಶರೀರದ ಭಾಗಗಳನ್ನು ಇನ್ನಷ್ಟೇ ಪತ್ತೆ ಹಚ್ಚಬೇಕಿದೆ.
ಶರ್ಮಾ ಖೋಕರ್ನ ಎಟಿಎಂ ಕಾರ್ಡ್ ಬಳಸಿ ಆತನ ಖಾತೆಯಿಂದ ಕಂತುಗಳಲ್ಲಿ 20 ಲ.ರೂ.ಗಳನ್ನು ತೆಗೆದಿದ್ದ. ಬಳಿಕ ಕಾರ್ಡನ್ನು ಪರ್ವೇಶ್ಗೆ ನೀಡಿ ಉತ್ತರಾಖಂಡದಲ್ಲಿ ಇನ್ನಷ್ಟು ಹಣ ತೆಗೆಯುವಂತೆ ಸೂಚಿಸಿದ್ದ. ಖೋಕರ್ ನಾಪತ್ತೆಯ ಬಗ್ಗೆ ದೂರು ದಾಖಲಾದರೆ ತನಿಖೆಯ ಹಾದಿ ತಪ್ಪಿಸಲು ಆತನ ಮೊಬೈಲ್ ಫೋನ್ ನ್ನು ಜೊತೆಗೆ ಒಯ್ಯುವಂತೆಯೂ ಶರ್ಮಾ ಪರ್ವೇಶ್ಗೆ ತಿಳಿಸಿದ್ದ ಎಂದು ಡಿಸಿಪಿ ಇರಜ್ ರಾಜಾ ಸುದ್ದಿಗಾರರಿಗೆ ತಿಳಿಸಿದರು.
ಇದನ್ನು ಓದಿ: ವೋಟರ್ ಐಡಿ ಹಗರಣ ಮರೆಮಾಚಲು "ಕುಕ್ಕರ್ ಸ್ಫೋಟ ನಾಟಕ": ಡಿಕೆಶಿ ಆರೋಪ







