ಐದು ವರ್ಷಗಳಲ್ಲಿ ಜಾಹೀರಾತುಗಳಿಗೆ ರೂ. 3,723.38 ಕೋಟಿ ವೆಚ್ಚ: ಕೇಂದ್ರ
![ಐದು ವರ್ಷಗಳಲ್ಲಿ ಜಾಹೀರಾತುಗಳಿಗೆ ರೂ. 3,723.38 ಕೋಟಿ ವೆಚ್ಚ: ಕೇಂದ್ರ ಐದು ವರ್ಷಗಳಲ್ಲಿ ಜಾಹೀರಾತುಗಳಿಗೆ ರೂ. 3,723.38 ಕೋಟಿ ವೆಚ್ಚ: ಕೇಂದ್ರ](https://www.varthabharati.in/sites/default/files/images/articles/2022/12/15/360275-1671122197.jpg)
ಹೊಸದಿಲ್ಲಿ: ಸರಕಾರವು ಕಳೆದ ಐದು ವರ್ಷಗಳಲ್ಲಿ ತನ್ನ ನೀತಿಗಳು ಮತ್ತು ಕಾರ್ಯಕ್ರಮಗಳ ಜಾಹೀರಾತುಗಳಿಗಾಗಿ ಸೆಂಟ್ರಲ್ ಬ್ಯೂರೊ ಆಫ್ ಕಮ್ಯುನಿಕೇಷನ್ ಮೂಲಕ ಒಟ್ಟು 3,723.38 ಕೋಟಿ .ರೂ.ಗಳನ್ನು ವೆಚ್ಚ ಮಾಡಿದೆ ಎಂದು ವಾರ್ತಾ ಮತ್ತು ಪ್ರಸಾರ ಸಚಿವ ಅನುರಾಗ ಠಾಕೂರ್ ಅವರು ಗುರುವಾರ ರಾಜ್ಯಸಭೆಯಲ್ಲಿ ತಿಳಿಸಿದರು.ಕಳೆದ ಐದು ವರ್ಷಗಳಲ್ಲಿ ಜಾಹೀರಾತುಗಳು ಮತ್ತು ಪ್ರಚಾರ ವೆಚ್ಚಗಳಲ್ಲಿ ಹೆಚ್ಚಳವಾಗಿಲ್ಲ ಎಂದು ಲಿಖಿತ ಉತ್ತರದಲ್ಲಿ ಅವರು ಹೇಳಿದರು.
ಸರಕಾರವು ಹಂಚಿಕೊಂಡಿರುವ ಅಂಕಿಅಂಶಗಳಂತೆ ಜಾಹೀರಾತುಗಳಿಗಾಗಿ 2017-18ರಲ್ಲಿ 1,220.89 ಕೋ.ರೂ. ಮತ್ತು 2018-19ರಲ್ಲಿ ಸಾರ್ವತ್ರಿಕ ಚುನಾವಣೆಗಳಿಗೆ ಮೊದಲು 1106.88 ಕೋ.ರೂ.ಗಳನ್ನು ವ್ಯಯಿಸಲಾಗಿತ್ತು. 2019-20ರಲ್ಲಿ 627.67 ಕೋ.ರೂ., 2020-21ರಲ್ಲಿ 349.09 ಕೋ.ರೂ. ಮತ್ತು 2021-22ರಲ್ಲಿ 264.78 ಕೋ.ರೂ.ಗಳನ್ನು ವೆಚ್ಚ ಮಾಡಲಾಗಿದೆ. ಹಾಲಿ ಹಣಕಾಸು ವರ್ಷದಲ್ಲಿ ಡಿ.9ರವರೆಗೆ ಸರಕಾರವು ಜಾಹೀರಾತುಗಳಿಗಾಗಿ 154.07 ಕೋ.ರೂ.ಗಳನ್ನು ವೆಚ್ಚ ಮಾಡಿದೆ ಎಂದು ಠಾಕೂರ್ ತಿಳಿಸಿದರು.
ಈ ಅಂಕಿ ಅಂಶಗಳಂತೆ ಕಳೆದ ಐದು ವರ್ಷಗಳಲ್ಲಿ ಜಾಹೀರಾತು ಮತ್ತು ಪ್ರಚಾರ ವೆಚ್ಚಗಳಲ್ಲಿ ಹೆಚ್ಚಳವಾಗಿಲ್ಲ ಎಂದು ಠಾಕೂರ್ ಕಾಂಗ್ರೆಸ್ ಸದಸ್ಯ ಸೈಯದ್ ನಾಸಿರ್ ಹುಸೇನ್ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ತಿಳಿಸಿದರು.ಕಳೆದ ಕೆಲವು ವರ್ಷಗಳಲ್ಲಿ ಜಾಹೀರಾತುಗಳು ಮತ್ತು ಪ್ರಚಾರಕ್ಕಾಗಿ ವೆಚ್ಚವು ಹಲವು ಪಟ್ಟುಗಳಷ್ಟು ಹೆಚ್ಚಿದೆ ಎನ್ನುವುದು ಸರಕಾರಕ್ಕೆ ತಿಳಿದಿದೆಯೇ ಎಂದು ಹುಸೇನ್ ಪ್ರಶ್ನಿಸಿದ್ದರು.