ನನ್ನ ತಂದೆ ಆಸೆಯಂತೆ ಕನ್ನಡ ಸಿನೆಮಾ ಮಾಡುವೆ: ಮೈಸೂರಿನಲ್ಲಿ ತಮಿಳು ನಟ ವಿಶಾಲ್
''ಶಕ್ತಿಧಾಮದ ಮಕ್ಕಳಿಗೆ ನೆರವಾಗಲು ನಾನು ಸಿದ್ಧ, ಆದರೆ...''
ಮೈಸೂರು,ಡಿ.15: ಶಕ್ತಿಧಾಮದ ಮಕ್ಕಳ ವಿಚಾರದಲ್ಲಿ ಯಾವ ರೀತಿಯ ಸಹಾಯ ಮಾಡಲು ನಾನು ಎಂದಿಗೂ ಸಿದ್ಧ ಎಂದು ತಮಿಳು ನಟ ವಿಶಾಲ್ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಶಕ್ತಿಧಾಮದ ಸ್ವಯಂ ಸೇವಕರಾಗಿ ಇರುತ್ತೇನೆ. ಆದರೆ ಯಾವ ರೀತಿ ಸಹಾಯ ಬೇಕು ಎಂಬುದರ ಬಗ್ಗೆ ಡಾ.ರಾಜ್ ಕುಟುಂಬದಿಂದ ನನಗೆ ಅಧಿಕೃತ ಮಾಹಿತಿ ಬಂದಿಲ್ಲಾ, ಅವರು ಅಧಿಕೃತವಾಗಿ ಹೇಳಿದರೆ ನಾನು ಯಾವ ಸಹಾಯಕ್ಕೂ ಸಿದ್ಧ ಎಂದು ಹೇಳಿದರು.
ಇನ್ನು ಕನ್ನಡದಲ್ಲಿ ಸಿನೆಮಾ ಮಾಡುವ ಆಸೆ ವ್ಯಕ್ತಪಡಿಸಿದ ವಿಶಾಲ್, ನನ್ನ ತಂದೆಗೆ ನಾನು ಕನ್ನಡದಲ್ಲೇ ಸಿನಿಮಾ ಮಾಡಬೇಕೆಂಬುದು ದೊಡ್ಡ ಆಸೆಯಾಗಿದ್ದು 2024 ರ ನಂತರ ಕನ್ನಡ ಸಿನೆಮಾ ಮಾಡುವುದಾಗಿ ತಿಳಿಸಿದರು.
ದಕ್ಷಿಣ ಭಾರತದ ಸಿನೆಮಾಗಳು ದೇಶದಲ್ಲಿ ದೊಡ್ಡ ಹೆಸರು ಮಾಡುತ್ತಿದೆ. ಸ್ಯಾಂಡಲ್ ವುಡ್‍ನಲ್ಲಿ ಕೆಜಿಎಫ್ ನಂತರ ಕಾಂತಾರ ಸಹ ಒಳ್ಳೆಯ ಸಿನೆಮಾಗಿ ಮೂಡಿಬಂದಿದೆ. ನಾನು ಕೂಡ ಈ ಚಿತ್ರವನ್ನು ನೋಡಿದ್ದೇನೆ. ಬಹಳ ಚೆನ್ನಾಗಿದೆ. ರಿಷಬ್ ಶೆಟ್ಟಿಗೆ ಕರೆ ಮಾಡಿ ಸಿನಿಮಾ ಚೆನ್ನಾಗಿದೆ ಅಂತ ತಿಳಿಸಿದ್ದೇನೆ. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಇಲ್ಲಿನ ಕಲೆ ಸಂಸ್ಕೃತಿ ಅನಾವರಣ ಆಗುತ್ತಿದೆ. ಉತ್ತರ ಭಾರತದವರಿಗೆ ಇದು ಇಷ್ಟವಾಗುತ್ತಿದೆ. ದಕ್ಷಿಣ ಭಾರತ, ಉತ್ತರ ಭಾರತದ ಸನಿಮಾ ಎಂಬ ಬೇದ ಇಲ್ಲ ಎಲ್ಲವೂ ಭಾರತದ ಸಿನಿಮಾ ಎಂದು ಹೇಳಿದರು.