ಭಾರತದ ಅತ್ಯಂತ ದುಬಾರಿ ಕಾರು ಖರೀದಿಸಿದ ಹೈದರಾಬಾದ್ ಮೂಲದ ವ್ಯಕ್ತಿ: ಸೂಪರ್ ಕಾರ್‌ನ ಬೆಲೆ ಎಷ್ಟು ನೋಡಿ...

ಹೈದರಾಬಾದ್: ಹೈದರಾಬಾದ್ ಮೂಲದ ಉದ್ಯಮಿ ನಾಸೀರ್ ಖಾನ್ ಎಂಬವರು ಮ್ಯಾಕ್‌ಲಾರೆನ್ 765 ಎಲ್‌ಟಿ ಸ್ಪೈಡರ್ ಸೂಪರ್ ಕಾರಿನ ಮಾಲಕರಾಗಿದ್ದು, ಭಾರತದಲ್ಲಿ ಅಧಿಕೃತವಾಗಿ ಮಾರಾಟಕ್ಕೆ ಲಭ್ಯವಿರುವ ಅತ್ಯಂತ ದುಬಾರಿ ಸೂಪರ್ ಕಾರ್ ಇದಾಗಿದೆ. ಮ್ಯಾಕ್‌ಲಾರೆನ್ 765 ಎಲ್‌ಟಿ ಸ್ಪೈಡರ್ (McLaren 765 LT Spider) ಸೂಪರ್ ಕಾರಿನ ಮೌಲ್ಯ ರೂ. 12 ಕೋಟಿಯಾಗಿದ್ದು, ಇದನ್ನು ಇತ್ತೀಚೆಗೆ ಹೈದರಾಬಾದ್‌ನ ಫಲಕ್‌ನುಮಾ ಪ್ಯಾಲೇಸ್‌ನಲ್ಲಿ ನಾಸೀರ್ ಖಾನ್‌ಗೆ ಹಸ್ತಾಂತರಿಸಲಾಯಿತು ಎಂದು Cartoq.com ವರದಿ ಮಾಡಿದೆ. ಬಹುಶಃ ಮ್ಯಾಕ್‌ಲಾರೆನ್ 765 ಎಲ್‌ಟಿ ಸ್ಪೈಡರ್ ಸೂಪರ್ ಖರೀದಿಸಿರುವ ಮೊದಲ ಭಾರತೀಯ ಎಂದೂ ವರದಿಯಲ್ಲಿ ಹೇಳಲಾಗಿದೆ.
ಈ ಕುರಿತು ಇನ್ಸ್ಟಾಗ್ರಾಮ್ ಪೋಸ್ಟ್ ಮಾಡಿರುವ ನಾಸೀರ್ ಖಾನ್, "ಮನೆಗೆ ಸುಸ್ವಾಗತ ಮ್ಯಾಕ್‌ಲಾರೆನ್ 765 ಎಲ್‌ಟಿ ಸ್ಪೈಡರ್. ಈ ಸುಂದರಿಯನ್ನು ಸ್ವೀಕರಿಸಿದ ಸ್ಥಳ ಎಂಥ ಅದ್ಭುತ!" ಎಂಬ ಒಕ್ಕಣೆಯೊಂದಿಗೆ ಅದರ ಫೋಟೊ ಮತ್ತು ರೀಲ್‌ಗಳನ್ನು ಹಂಚಿಕೊಂಡಿದ್ದಾರೆ. ಇವುಗಳಲ್ಲಿ ನಾಸೀರ್ ಖಾನ್ ಕಂದು ಬಣ್ಣದ ಉಡುಗೆ ತೊಟ್ಟು ಹೊಚ್ಚ ಹೊಸ ಕೆಂಪು ಬಣ್ಣದ ಮ್ಯಾಕ್‌ಲಾರೆನ್765 ಎಲ್‌ಟಿ ಸ್ಪೈಡರ್ ಸೂಪರ್ ಕಾರಿನೊಂದಿಗೆ ನಿಂತಿರುವುದು ಕಂಡು ಬರುತ್ತದೆ.
McLaren 765 LT Spider ಅತ್ಯಂತ ಕ್ಷಿಪ್ರವಾಗಿ ಮಡಚಬಹುದಾದ ಸೂಪರ್ ಕಾರ್ ಆಗಿದೆ. ಅತ್ಯಂತ ವಿಸ್ಮಯಕಾರಿ ಸಂಗತಿಯೆಂದರೆ ಈ ಕಾರಿನ ಮೇಲ್ಚಾವಣಿಯನ್ನು ಕೇವಲ 11 ಸೆಕೆಂಡ್‌ಗಳಲ್ಲಿ ಮಡಚಬಹುದಾಗಿದೆ. ಈ ಕಾರು ಉತ್ಕೃಷ್ಟ ಏರೋಡೈನಾಮಿಕ್ ವಿನ್ಯಾಸ ಹೊಂದಿದ್ದು, ನಾಲ್ಕು ಲೀಟರ್ ಸಾಮರ್ಥ್ಯವುಳ್ಳ ಜೋಡಿ ಟರ್ಬೊಚಾರ್ಜಿಂಗ್ ವಿ8 ಮಾದರಿಯ ಪೆಟ್ರೋಲ್ ಎಂಜಿನ್ ಹೊಂದಿದೆ ಎಂದು Cartoq.com ಹೇಳಿದೆ.
ತನ್ನನ್ನು ತಾನು ಹವ್ಯಾಸಿ ಕಾರು ಸಂಗ್ರಹಕಾರ ಎಂದು ಹೇಳಿಕೊಂಡಿರುವ ಉದ್ಯಮಿ ನಾಸೀರ್ ಖಾನ್, ವಿವಿಧ ಬಗೆಯ ಐಷಾರಾಮಿ ಕಾರುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಮಾಡಿದ್ದಾರೆ.







