ದ.ಕ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್’ಗಿರಿ: ಮುಸ್ಲಿಂ ಲೀಗ್ ಖಂಡನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನೈತಿಕ ಪೊಲೀಸ್’ಗಿರಿ ಮಿತಿ ಮೀರುತ್ತಿದ್ದು ಉತ್ತರ ಪ್ರದೇಶದ ಗೂಂಡಾ ಸಂಸ್ಕೃತಿಯನ್ನು ಮಂಗಳೂರಿನಲ್ಲಿ ವ್ಯವಸ್ಥಿತವಾಗಿ ಕಾರ್ಯರೂಪಕ್ಕೆ ತರಲು ದುಷ್ಟಶಕ್ತಿಗಳು ಶ್ರಮಿಸುತ್ತಿವೆ. ಪೊಲೀಸ್ ಇಲಾಖೆ ಕೂಡಲೇ ಇದಕ್ಕೆ ಕಡಿವಾಣ ಹಾಕದಿದ್ದರೆ ಪರಿಸ್ಥಿತಿ ಕೈಮೀರಿ ಹೋಗುವ ಸಾಧ್ಯತೆಗಳಿವೆ. ಪೊಲೀಸ್ ಇಲಾಖೆ ನಿರ್ವಹಿಸಬೇಕಾದ ಕಾನೂನು ಸುವ್ಯವಸ್ಥೆಯನ್ನು ಸಂಘಪರಿವಾರದ ಗೂಂಡಾಗಳು ಮಾಡುತ್ತಿದ್ದಾರೆಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್ ತಿಳಿಸಿದ್ದಾರೆ.
ಇತ್ತೀಚೆಗೆ ಮಂಗಳೂರಿನ ಚಿನ್ನದ ಅಂಗಡಿಯೊಂದಕ್ಕೆ ನುಗ್ಗಿದ ದುಷ್ಕರ್ಮಿಗಳು ಅಲ್ಲಿ ಕೆಲಸ ಮಾಡುತ್ತಿದ್ದ ಯುವಕನಿಗೆ ಥಳಿಸಿದ್ದಾರೆ. ಆ ನಂತರ ಮಂಗಳೂರಿನಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಗೂಂಡಾಗಳು ನಿನ್ನೆ ಬಂಟ್ವಾಳ ತಾಲೂಕಿನ ರಾಯಿಯಲ್ಲಿ ಸುಳ್ಳು ಆರೋಪ ಹೊರಿಸಿ ಅಮಾಯಕ ವ್ಯಕ್ತಿಯೊಬ್ಬರಿಗೆ ಭೀಕರವಾಗಿ ಹಲ್ಲೆ ನಡೆಸುವ ಮೂಲಕ ಉತ್ತರ ಪ್ರದೇಶದ ಗೂಂಡಾ ಸಂಸ್ಕೃತಿಯನ್ನು ರಾಜಾರೋಷವಾಗಿ ಮಾಡಿದ್ದಾರೆ. ಗಂಭೀರ ಗಾಯಗೊಂಡ ಸಂತ್ರಸ್ತರಿಗೆ ಸೂಕ್ತ ರೀತಿಯ ಚಿಕಿತ್ಸೆ ನೀಡದೆ ಪೊಲೀಸರು ಬಿಟ್ಟು ಕಳಿಸಿದ್ದಾರೆ. ಇದರ ವಿರುದ್ಧ ಜಿಲ್ಲಾಡಳಿತ ಹೆಚ್ಚೆತ್ತುಕೊಳ್ಳುವಂತೆ ತಿಳಿಸಿದರು.
ಘಟನೆಗೆ ಸಂಬಂಧಪಟ್ಟ ಎಲ್ಲಾ ದುಷ್ಕರ್ಮಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಜಿಲ್ಲೆಯ ಕಾನೂನು ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷ ಕೆ ಎಂ ಫಯಾಝ್ ಒತ್ತಾಯಿಸಿದರು.