ದ.ಕ. ಜಿಲ್ಲೆಯಲ್ಲಿ ಅನೈತಿಕ ಪೊಲೀಸ್’ಗಿರಿ ಖಂಡನೀಯ : ಎಸ್ ಬಿ ದಾರಿಮಿ ಉಪ್ಪಿನಂಗಡಿ

ಮಂಗಳೂರು : ಕಾನೂನು ಕೈಗೆತ್ತಿಕೊಳ್ಳುವ ಕುಕೃತ್ಯ ಯಾರೇ ಮಾಡಿದರೂ ಅದು ದೇಶವನ್ನು ದುರ್ಬಲಗೊಳಿ ಸುತ್ತೆ. ಮೂಲರಪಟ್ಣ ನಿವಾಸಿ ಇಸಾಕ್ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ ಖಂಡನಿಯ ಎಂದು ಎಸ್ ಬಿ ದಾರಿಮಿ ಉಪ್ಪಿನಂಗಡಿ ತಿಳಿಸಿದ್ದಾರೆ.
ಮಸೂದ್, ಪ್ರವೀಣ್, ಪಾಝಿಲ್ ಕೊಲೆ ಪ್ರಕರಣದ ನಂತರ ಬೂದಿ ಮುಚ್ಚಿದ ಕೆಂಡದಂತಿದ್ದ ಜಿಲ್ಲೆಯ ಸಾಮಾಜಿಕ ವಾತಾವರಣವನ್ನು ಮತ್ತೆ ಕಲುಷಿತ ಗೊಳಿಸಿ ರಾಜಕೀಯ ಬೇಳೆ ಬೇಯಿಸಲು ಶ್ರಮಿಸುತ್ತಿರುವ ದುಷ್ಟಶಕ್ತಿಗಳು ತೆರೆಮರೆಯಲ್ಲಿ ಸಕ್ರಿಯರಾಗಿದ್ದಾರೆಂಬುದನ್ನು ಇತ್ತೀಚಿನ ಘಟನೆಗಳು ತಿಳಿಸಿ ಕೊಡುತ್ತಿದೆ.
ಕಣಿಯೂರು ಬಟ್ಟೆ ವ್ಯಾಪಾರಿಗಳ ಮೇಲೆ ರಾಕ್ಷಸೀಯ ವರ್ತನೆ ತೋರಿದ ಸಂಘಟನೆಯೊಂದರ ಪುಂಡರ ಅದೇ ಕೃತ್ಯ ಇದೀಗ ಮೂಲರಪಟ್ಣ ಇಸಾಕ್ ಎಂಬ ಮೇಸ್ತ್ರಿ ಯ ಮೇಲೆ ಪ್ರಯೋಗಿಸಿಲಾಗಿದೆ. ಗುಂಪು ಸೇರಿ ಸಾರ್ವವಜನಿಕವಾಗಿ ಹಲ್ಲೆ ನಡೆಸುವ ಪ್ರಕರಣಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ ಎಂದರೆ ಅದರ ಅರ್ಥ ಕಾನೂನು ವ್ಯವಸ್ಥೆ ಕುಸಿದು ಬಿದ್ದಿದೆ ಎಂಬುದಾಗಿದೆ. ಕಣಿಯೂರು ಪ್ರಕರಣದಲ್ಲಿ ಹಲ್ಲೆಗೊಳಗಾದವರು ಮಾಡಿದ ತಪ್ಪು ಏನೆಂದು ಈ ತನಕ ಅಧಿಕಾರಿಗಳಾಗಲಿ ಹಲ್ಲೆ ನಡೆಸಿದವರಾಗಲಿ ಜನರ ಮುಂದೆ ಸ್ಪಷ್ಟ ಪಡಿಸಿಲ್ಲ.
ಈಗ ಇಸಾಕ್ ನ ಮೇಲೂ ಹಲ್ಲೆ ನಡೆಸುವಂತಹ ಯಾವುದೇ ಗಂಭೀರ ಆರೋಪ ಇಲ್ಲ ಎಂದು ಹೇಳಲಾಗುತ್ತಿದೆ. ಅದೇನೇ ಇದ್ದರೂ ಅದನ್ನು ಪೊಲೀಸರು ತನಿಖೆ ನಡೆಸಿ ಸಾರ್ವಜನಿಕರಿಗೆ ಮಾಹಿತಿ ನೀಡಬೇಕಾಗುತ್ತದೆ. ಯಾರೇ ತಪ್ಪು ಮಾಡಿದರು ಅದನ್ನು ಕಾನೂನಾತ್ಮಕವಾಗಿ ಬಗೆಹರಿಸಬೇಕೆಂಬುದು ಸಾಮಾನ್ಯ ನ್ಯಾಯವಾಗಿದೆ. ಗೂಂಡಾಯಿಸಂ ಯಾವುದಕ್ಕೂ ಪರಿಹಾರವಲ್ಲ.
ಅಲ್ಪ ಸಂಖ್ಯಾತ ದುರ್ಬಲ ವರ್ಗವನ್ನು ಈ ರೀತಿ ನಡೆಸಿಕೊಂಡರೆ ಅದು ಒಂದು ವರ್ಗದಲ್ಲಿ ಭಯದ ವಾತಾವರಣ ನಿರ್ಮಾಣವಾಗಿ ನಾಡಿನಲ್ಲಿ ಅರಾಜಕತೆ ಉಂಟಾಗಲು ಅದು ಸಾಕಾಗುತ್ತದೆ. ನ್ಯಾಯ ನಿರಾಕರಿಸಲ್ಪಡುವ ಜನರು ಬೇರೆಯೇ ಅಡ್ಡ ದಾರಿ ಹಿಡಿದರೆ ಅದು ಇಡೀ ಸಾಮಾಜ ಮತ್ತು ದೇಶಕ್ಕೆ ದುಬಾರಿಯಾಗುತ್ತದೆ. ಈ ನಿಟ್ಟಿನಲ್ಲಿ ಇಸಾಕ್ ಮೇಲಿನ ಹಲ್ಲೆ ಪ್ರಕರಣವನ್ನು ಪೋಲೀಸರು ಗಂಭೀರ ವಾಗಿ ಪರಿಗಣಸಿ ಆರೋಪಿಗಳನ್ನು ನ್ಯಾಯದ ಕಟಕಟೆಗೆ ತಂದು ನಿಲ್ಲಿಸ ಬೇಕು ಎಂದು ಎಸ್ ಬಿ ದಾರಿಮಿ ಉಪ್ಪಿನಂಗಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.