17 ವರ್ಷ ಜೈಲುವಾಸದ ಹಿನ್ನೆಲೆ: ಗೋಧ್ರಾ ಪ್ರಕರಣದ ದೋಷಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

ಹೊಸದಿಲ್ಲಿ,ಡಿ.15: 2002ರ ಗೋಧ್ರಾ ರೈಲು ಅಗ್ನಿ ದುರಂತ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯನ್ನು ಅನುಭವಿಸುತ್ತಿರುವ ದೋಷಿಯೊಬ್ಬನಿಗೆ ಸುಪ್ರೀಂಕೋರ್ಟ್ ಗುರುವಾರ ಜಾಮೀನು ಬಿಡುಗಡೆ ನೀಡಿದೆ. ಕಳೆದ 17 ವರ್ಷಗಳಿಂದ ಆತ ಜೈಲಿನಲ್ಲಿದ್ದನೆಂಬುದನ್ನು ಗಣನೆಗೆ ತೆಗೆದುಕೊಂಡು ಆತನಿಗೆ ಜಾಮೀನು ನೀಡಿರುವುದಾಗಿ ಸರ್ವೋಚ್ಚ ನ್ಯಾಯಾಲಯ ತಿಳಿಸಿದೆ.
ಪ್ರಕರಣದ ದೋಷಿ ಫಾರೂಕ್ ಪರ ವಕೀಲರ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು, ಆತ ಈಗಾಗಲೇ 17 ವರ್ಷ ಜೈಲು ಶಿಕ್ಷೆ ಅನುಭವಿಸಿದ್ದಾನೆ. ಈ ಅವಧಿಯನ್ನು ಪರಿಗಣನೆಗೆ ತೆಗೆದುಕೊಂಡು ಆತನಿಗೆ ಜಾಮೀನು ಬಿಡುಗಡೆ ನೀಡುವಂತೆ ಆದೇಶಿಸಿದೆ.ಈ ಪ್ರಕರಣದ ಇತರ ಹಲವಾರು ದೋಷಿಗಳು ಕೂಡಾ ಜಾಮೀನು ಬಿಡುಗಡೆ ಕೋರಿ ಅರ್ಜಿ ಸಲ್ಲಿಸಿದ್ದು, ಸರ್ವೋಚ್ಚ ನ್ಯಾಯಾಲದಲ್ಲಿ ಅವುಗಳ ವಿಚಾರಣೆ ಬಾಕಿಯಿದೆ.
ಗುಜರಾತ್ ಸರಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 59 ಮಂದಿಯನ್ನು ಜೀವಂತವಾಗಿ ದಹಿಸಿದ ಈ ಕೃತ್ಯವು ಅತ್ಯಂತ ಹೇಯ ಅಪರಾಧವಾಗಿದೆ. ಈ ಪ್ರಕರಣದ ದೋಷಿಗಳ ಮನವಿಗಳ ಅಲಿಕೆಯನ್ನು ತುರ್ತಾಗಿ ನಡೆಸುವ ಅಗತ್ಯವಿಲ್ಲವೆಂದು ಅವರು ತಿಳಿಸಿದ್ದಾರೆ.ಅಗ್ನಿದುರಂತ ನಡೆದ ಸಬರಮತಿ ಎಕ್ಸ್ಪ್ರೆಸ್ ಬೋಗಿಯ ಮೇಲೆ ಕಲ್ಲುಗಳನ್ನು ಎಸೆದುದಕ್ಕಾಗಿ ಪಾರೂಕ್ ಹಾಗೂ ಇತರ ಹಲವರನ್ನು ದೋಷಿಗಳೆಂದು ಪರಿಗಣಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಲಾಗಿತ್ತು.
ಸಾಮಾನ್ಯವಾಗಿ ಕಲ್ಲೆಸೆಯುವುದು ಒಂದು ಸಣ್ಣ ಮಟ್ಟದ ಅಪರಾಧವಾಗಿದೆ. ಆದಾಗ್ಯೂ ಈ ಪ್ರಕರಣದಲ್ಲಿ ರೈಲಿನ ಬೋಗಿಗೆ ಅಗುಳಿ ಹಾಕಿ ಮುಚ್ಚಲಾಗಿತ್ತು ಹಾಗ ಬೆಂಕಿ ಹಚ್ಚಲಾದ ರೈಲಿನ ಬೋಗಿಯಿಂದ ಪ್ರಯಾಣಿಕರು ಹೊರಬಾರದಂತೆ ಮಾಡಲು ಕಲ್ಲೆಸೆಯಲಾಗಿತ್ತು ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು. ಇದಕ್ಕಿಂತಲೂ ಹೆಚ್ಚಾಗಿ ರೈಲು ಬೋಗಿಗೆ ಹಚ್ಚಲಾದ ಬೆಂಕಿಯನ್ನು ನಂದಿಸಲು ಆಗಮಿಸುತ್ತಿದ್ದ ಅಗ್ನಿಶಾಮಕದಳದ ವಾಹನಗಳಿಗೂ ಕಲ್ಲೆಸೆಯಲಾಗಿತ್ತು ಎಂದು ತುಷಾರ್ ಮೆಹ್ತಾ ನ್ಯಾಯಾಲಯಕ್ಕೆ ತಿಳಿಸಿದರು.







