ಮೂಡಿಗೆರೆ; ಮೊರಾರ್ಜಿ ದೇಸಾಯಿ, ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅಕ್ರಮ: ಆರೋಪ
ಚಿಕ್ಕಮಗಳೂರು, ಡಿ.15: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿರುವ ಕರ್ನಾಟಕ ವಸತಿ ಶಿಕ್ಷಣ ಸಂಘದ ವತಿಯಿಂದ ನಡೆಯುತ್ತಿರುವ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಹಾಗೂ ಬಾಳೂರು ಇಂದಿರಾಗಾಂಧಿ ವಸತಿ ಶಾಲೆಯಲ್ಲಿ ಅಧಿಕಾರಿ ಸಿಬ್ಬಂದಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡದೇ ವಂಚಿಸುತ್ತಿದ್ದು, ಆಹಾರ ಸೇರಿದಂತೆ ಸರಕಾರದ ಸೌಲಭ್ಯಗಳನ್ನು ನೀಡದೇ ಭ್ರಷ್ಟಾಚಾರದಲ್ಲಿ ಮುಳುಗಿದ್ದಾರೆ. ಪರಿಣಾಮ ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ಸಮುದಾಯಗಳ ವಿದ್ಯಾರ್ಥಿಗಳಿಗೆ ಸರಕಾರ ನೀಡುತ್ತಿರುವ ಅನುದಾನ ಭ್ರಷ್ಟ ಅಧಿಕಾರಿ, ಸಿಬ್ಬಂದಿ ಪಾಲಾಗುತ್ತಿದೆ ಎಂದು ದಲಿತ ಸಂಘಟನೆ ಒಕ್ಕೂಟದ ಸಂಚಾಲಕ ಅಂಗಡಿ ಚಂದ್ರು ಆರೋಪಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಮೂಡಿಗೆರೆ ತಾಲೂಕು ವ್ಯಾಪ್ತಿಯಲ್ಲಿರುವ ಬಿದರಹಳ್ಳಿ ಮೊರಾರ್ಜಿ ವಸತಿ ಶಾಲೆ ಹಾಗೂ ಬಾಳೂರು ಗ್ರಾಮದಲ್ಲಿರುವ ಇಂದಿರಾಗಾಂಧಿ ವಸತಿಯಲ್ಲಿ ಪ್ರಾಂಶುಪಾಲರು, ಸಿಬ್ಬಂದಿ ಸರಕಾರದ ಅನುದಾನವನ್ನು ಸ್ವಂತಕ್ಕೆ ಬಳಸಿಕೊಂಡಿರುವುದು ಮಾಹಿತಿ ಹಕ್ಕಿನಡಿಯಲ್ಲಿ ಪಡೆದಿರುವ ದಾಖಲಾತಿಗಳಿಂದ ಬೆಳಕಿಗೆ ಬಂದಿದೆ. ಬಿದರಹಳ್ಳಿ ಹಾಗೂ ಬಾಳೂರು ವಸತಿ ಶಾಲೆಗಳ ಪ್ರಾಂಶುಪಾಲರಾಗಿರುವ ಟಿ.ಎಸ್.ಸತೀಶ್ ಎಂಬವರು ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ವಿದ್ಯಾರ್ಥಿಗಳಿಗೆ ಸರಕಾರ ಬಿಡುಗಡೆ ಮಾಡಿರುವ ಅನುದಾನವನ್ನು ದುರ್ಬಳಕೆ ಮಾಡಿಕೊಂಡಿರುವುದಲ್ಲದೇ ಬೋಧಕೇತರ ಸಿಬ್ಬಂದಿಯನ್ನು ನಿಲಯಪಾಲಕರಾಗಿ ಕಾರ್ಯನಿರ್ವಹಿಸಲು ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದರು.
ಈ ವಸತಿ ಶಾಲೆಗಳಿಗೆ ಹೈಕೋರ್ಟ್ ಆದೇಶದ ಅನ್ವಯ ಹೊರ ಸಂಪನ್ಮೂಲದಡಿಯಲ್ಲಿ ರಮೇಶ್ ಎಂಬ ದೈಹಿಕ ಶಿಕ್ಷಕ ಕರ್ತವ್ಯದಲ್ಲಿದ್ದರೂ ಬೋಧಕೇತರ ಸಿಬ್ಬಂದಿಯಾದ ಸತೀಶ್ ಜಿ.ಕೆ ಎಂಬವರನ್ನು ನಿಲಯಪಾಲಕರನ್ನಾಗಿ ನೇಮಕ ಮಾಡಲಾಗಿದೆ. ನಿಲಯಪಾಲಕ ಸತೀಶ್ ಜಿ.ಕೆ ಅವರನ್ನು ಪ್ರಾಂಶುಪಾಲರು ಬೇರೆಡೆಗೆ ವರ್ಗಾವಣೆ ಮಾಡಿದ್ದರೂ ಸಹ ಅಲ್ಲಿಗೆ ತೆರಳದ ಸತೀಶ್ ಜಿ.ಕೆ. ಇದೇ ವಸತಿ ಶಾಲೆಗಳ ನಿಯಮ ಪಾಲಕರಾಗಿದ್ದಾರೆ. ಒಂದೇ ಹುದ್ದೆಯಲ್ಲಿ ಇಬ್ಬರು ಕಾರ್ಯನಿರ್ವಹಿಸುವಂತಿಲ್ಲ ಎಂಬ ನಿಯಮವಿದ್ದರೂ ಅದನ್ನು ಕಡೆಗಣಿಸಲಾಗಿದೆ ಎಂದ ಅವರು, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಚೈತ್ರಾ ಹಾಗೂ ಪ್ರಾಂಶುಪಾಲ ಸತೀಶ್ ಟಿ.ಎಸ್ ಅವರು ಭ್ರಷ್ಟಾಚಾರ ನಡೆಸುವ ಸಲುವಾಗಿ ನಿಯಮಬಾಹಿರವಾಗಿ ಒಂದೇ ಹುದ್ದೆಯಲ್ಲಿ ಇಬ್ಬರು ಕಾರ್ಯನಿರ್ವಹಿಸಲು ಅವಕಾಶ ನೀಡಿದ್ದಾರೆ ಎಂದು ದೂರಿದರು.
ಯಾವುದೇ ಶಾಲೆ, ಕಾಲೇಜುಗಳಲ್ಲಿ ಪ್ರಾಂಶುಪಾಲರು 3 ವರ್ಷಗಳಿಗೂ ಮೀರಿ ಕಾರ್ಯನಿರ್ವಹಿಸುವಂತಿಲ್ಲ. ಉಪನ್ಯಾಸಕರು, ಶಿಕ್ಷಕರು 4 ವರ್ಷ ಮೀರಿ ಕೆಲಸ ಮಾಡುವಂತಿಲ್ಲ, ವಾರ್ಡನ್‍ಗಳು 3 ವರ್ಷ ಮೀರಿ ಕೆಲಸ ಮಾಡುವಂತಿಲ್ಲ ಎಂಬ ನಿಯಮವಿದೆ. ಆದರೆ ಸತೀಶ್ ಟಿ.ಎಸ್ ಹಾಗೂ ಸತೀಶ್ ಜಿ.ಕೆ ಎಂಬವರು ಕಳೆದ 10 ವರ್ಷಗಳಿಂದ ಬಾಳೂರು, ಬಿದರಹಳ್ಳಿ ವಸತಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಸರಕಾರದ ನಿಯಮಗಳ ಉಲ್ಲಂಘನೆಯಾಗಿದೆ ಎಂದ ಅವರು, ಪತಿ, ಪತ್ನಿ ಪ್ರಕರಣದಲ್ಲಿ ಗಂಡ ಹೆಂಡತಿ ಇಬ್ಬರು ಒಂದೇ ಸ್ಥಳದಲ್ಲಿ ಕೆಲಸ ಮಾಡುವಂತಿಲ್ಲ ಎಂಬ ನಿಯಮವಿದ್ದರೂ ಸತೀಶ್ ಟಿ.ಎಸ್ ಹಾಗೂ ಅವರ ಪತ್ನಿ ಒಂದೇ ಸ್ಥಳದಲ್ಲಿ ಕೆಲಸ ಮಾಡುತ್ತಿರುವುದಲ್ಲದೇ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕುವಂತಹ ದುರ್ನಡತೆಗಳನ್ನು ತೋರಿರುವ ಪ್ರಕರಣಗಳೂ ವರದಿಯಾಗಿವೆ ಎಂದರು.
ಸರಕಾರ ವಸತಿ ಶಾಲೆಗಳ ವಿದ್ಯಾರ್ಥಿಗಳ ಹೇರ್ ಕಟಿಂಗ್‍ಗೆ ಅನುದಾನ ನೀಡುತ್ತಿದ್ದು, ಇಲ್ಲಿನ ಪ್ರಾಂಶುಪಾಲರು ಹಾಗೂ ನಿಯಮಪಾಲಕರು ಮಕ್ಕಳು ರಜೆ ಮೇಲೆ ತೆರಳಿದ್ದ ದಿನದಂದು ಮಕ್ಕಳ ಹಾಜರಾತಿ ಹಾಕಿ ವಸತಿ ಶಾಲೆಯ ಕಾವಲುಗಾರ ಶ್ರೀಧರ್ ಎಂಬಾತನ ಹೆಸರಿಗೆ ಹೇರ್ ಕಟಿಂಗ್ ಮಾಡಿದ ಅನುದಾನದ ಚೆಕ್ ನೀಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ. ಅಲ್ಲದೇ ಇಲ್ಲಿನ ವಸತಿ ಶಾಲೆಗೆ ಪರೀಕ್ಷೆ ಬರೆಯದೇ 2ಎ, 3ಬಿ ಸಮುದಾಯಕ್ಕೆ ಸೇರಿದ, ಖಾಸಗಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದ್ದು, ಇದರಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ಈ ವಸತಿ ಶಾಲೆಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಅವರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ದಸಂಸ ಮುಖಂಡ ಮರ್ಲೆ ಅಣ್ಣಯ್ಯ, ಮುಖಂಡರಾದ ದಂಟರಮಕ್ಕಿ ಶ್ರೀನಿವಾಸ್, ಬಾಲಕೃಷ್ಣ ಉಪಸ್ಥಿತರಿದ್ದರು.