ಬಂಟ್ವಾಳದಲ್ಲಿ ಅಮಾಯಕನ ಮೇಲೆ ಹಲ್ಲೆ: ಯುನಿವೆಫ್ ಖಂಡನೆ

ಬಂಟ್ವಾಳದ ರಾಯಿಯಲ್ಲಿ ಅಮಾಯಕನ ಮೇಲೆ ಬಸ್ ನಿರ್ವಾಹಕ ಸೇರಿದಂತೆ ಸಂಘ ಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವುದು ದುರದೃಷ್ಟಕರ ಮತ್ತು ಖಂಡನೀಯ.
ಬುದ್ಧಿವಂತರ ಜಿಲ್ಲೆ ಎಂದು ಬಿರುದಾಂಕಿತ ದ.ಕ. ಜಿಲ್ಲೆ ಎಂದೂ ಶಾಂತಿಪ್ರಿಯ. ಕೈಗಾರಿಕೆಗಳು ತಲೆ ಎತ್ತುತ್ತಿರುವ, ಸ್ಮಾರ್ಟ್ ಸಿಟಿ ಆಗುತ್ತಿರುವ ಈ ಜಿಲ್ಲೆಯಲ್ಲಿ ಸಮಾಜಘಾತುಕ ಶಕ್ತಿಗಳು ಇತ್ತೀಚೆಗೆ ವಿಜೃಂಭಿಸುತ್ತಿರುವುದು ಜಿಲ್ಲೆಗೆ ಮಾತ್ರವಲ್ಲ ಕರ್ನಾಟಕ ರಾಜ್ಯದ ಅಭಿವೃದ್ಧಿಗೆ ಮಾರಕಾವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಧರ್ಮಗಳ ಮಧ್ಯೆ ಕಂದರ ಸೃಷ್ಟಿಸಿ, ಪರಸ್ಪರ ದ್ವೇಷವನ್ನು ಹರಡುವಂತಹ ಕೋಮುವಾದಿ ಷಡ್ಯಂತ್ರಗಳು ಇಲ್ಲಿ ದಿನೇ ದಿನೇ ಹೆಚ್ಚುತ್ತಿವೆ.
ಯುನಿವೆಫ್ ಕರ್ನಾಟಕ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಚುನಾವಣಾ ವರ್ಷದಲ್ಲಿ ಈ ಘಟನೆಗಳು ಕೇವಲ ಒಂದು ಕಡೆಗೆ ಸೀಮಿತವಾಗಿರದೆ ರಾಜ್ಯದ ವಿವಿಧ ಭಾಗಗಳಲ್ಲಿ ಮುಸ್ಲಿಮ್ ದ್ವೇಷವನ್ನು ಹರಡುವ ಹುನ್ನಾರವನ್ನು ಇಲ್ಲಿಯ ರಾಜಕೀಯ ಪಕ್ಷಗಳು, ಸಮಾನ ಮನಸ್ಕರು ಮತ್ತು ವಿಚಾರವಂತರು ಒಕ್ಕೊರಳಿನಿಂದ ಖಂಡಿಸಿ ರಾಜ್ಯದ ಪಾರಂಪರಿಕ ಸಾಂಸ್ಕೃತಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕಾಗಿದೆ. ಮುಸ್ಲಿಮ್ ದ್ವೇಷದ ಮೂಲಕ ಸಮಾಜಘಾತುಕ ಶಕ್ತಿಗಳು ತಮ್ಮ ರಾಜಕೀಯ ಹಿತಾಸಕ್ತಿಯನ್ನು ಪೋಷಿಸುವ ಈ ಸಂದರ್ಭದಲ್ಲಿ ಯುನಿವೆಫ್ ಕರ್ನಾಟಕ ಈ ಘಟನೆಯನ್ನು ತೀವ್ರವಾಗಿ ಖಂಡಿಸುತ್ತದೆ. ಈ ಘಟನೆಯ ಹಿಂದಿರುವ ಎಲ್ಲಾ ಆರೋಪಿಗಳನ್ನು ಮತ್ತು ಈ ಷಡ್ಯಂತ್ರದ ಹಿಂದಿರುವ ಎಲ್ಲಾ ಶಕ್ತಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಯುನಿವೆಫ್ ಕರ್ನಾಟಕ ಆಗ್ರಹಿಸುತ್ತದೆ ಎಂದು ಪ್ರಕಟನೆ ತಿಳಿಸಿದೆ.







