ಪ್ರಾಚೀನ ಸಂಸ್ಕೃತ ವ್ಯಾಕರಣ ಸಮಸ್ಯೆ ಪರಿಹರಿಸಿದ ಭಾರತೀಯ ವಿದ್ಯಾರ್ಥಿ

ಲಂಡನ್, ಡಿ.15: ಕ್ರಿಸ್ತಪೂರ್ವ 5ನೇ ಶತಮಾನದಿಂದ ವಿದ್ವಾಂಸರನ್ನು ಕಂಗೆಡಿಸಿದ ವ್ಯಾಕರಣ ಸಮಸ್ಯೆಯನ್ನು ಕೇಂಬ್ರಿಡ್ಜ್ ವಿವಿಯ ವಿದ್ಯಾರ್ಥಿಯೊಬ್ಬ ಪರಿಹರಿಸಿದ್ದಾನೆ. ಇದು ಸಂಸ್ಕೃತ ಅಧ್ಯಯನದಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಬಹುದು ಎಂದು ವಿವಿಯ ಪ್ರೊಫೆಸರ್ ವಿನ್ಜೆಂಝೊ ವೆರ್ಗಿಯಾನಿಯನ್ನು ಉಲ್ಲೇಖಿಸಿ `ದಿ ಇಂಡಿಪೆಂಡೆಂಟ್' ವರದಿ ಮಾಡಿದೆ.
ಸುಮಾರು 2,500 ಸಾವಿರ ವರ್ಷದ ಹಿಂದೆ ವಾಸಿಸುತ್ತಿದ್ದ ಸಂಸ್ಕೃತದ ಮಹಾವಿದ್ವಾಂಸ ಪಾಣಿನಿ ಬೋಧಿಸುತ್ತಿದ್ದ ಸೂತ್ರವನ್ನು ಕೇಂಬ್ರಿಡ್ಜ್ ವಿವಿಯಲ್ಲಿನ ಸಂಶೋಧನಾ ವಿದ್ಯಾರ್ಥಿ ರಿಷಿ ರಜಪೂತ್ ಪರಿಹರಿಸಿದ್ದಾನೆ. ಪಾಣಿನಿಯ ಅಷ್ಟಾಧ್ಯಾಯಿ ಎಂದು ಕರೆಯಲ್ಪಡುವ ಪಾಣಿನಿಯ ವ್ಯಾಕರಣವು ಒಂದು ಪದದ ಮೂಲ ಮತ್ತು ಪ್ರತ್ಯಯವನ್ನು ಸರಿಯಾದ ವ್ಯಾಕರಣವಿರುವ ಪದಗಳು ಮತ್ತು ವಾಕ್ಯಗಳಾಗಿ ಪರಿವರ್ತಿಸಲು ನೀತಿಸಂಹಿತೆಯಂತೆ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಅವಲಂಬಿಸಿದೆ. ಆದರೆ ಪಾಣಿನಿಯ ಎರಡು ಅಥವಾ ಹೆಚ್ಚಿನ ಸೂತ್ರಗಳು ಏಕಕಾಲದಲ್ಲಿ ಅನ್ವಯಿಸುವುದರಿಂದ ನಿಯಮ ಸಂಘರ್ಷಕ್ಕೆ ಕಾರಣವಾಗುತ್ತಿತ್ತು. ಈ ಸಮಸ್ಯೆಗೆ ರಿಷಿ ರಜಪೂತ್ ಪರಿಹಾರ ರೂಪಿಸಿದ್ದಾನೆ ಎಂದು ವರದಿಯಾಗಿದೆ.