ಪ್ರಚಲಿತ ಐತಿಹಾಸಿಕ ಚಿತ್ರಗಳಿಗೆ ಕಾಲ್ಪನಿಕ ತೀವ್ರ ರಾಷ್ಟ್ರಾಭಿಮಾನದ ಲೇಪ: ಖ್ಯಾತ ನಟ ಅಮಿತಾಬ್ ಬಚ್ಚನ್

ಕೊಲ್ಕತ್ತಾ: ಪ್ರಚಲಿತ ಐತಿಹಾಸಿಕ ಚಿತ್ರಗಳಿಗೆ ಕಾಲ್ಪನಿಕ ತೀವ್ರ ರಾಷ್ಟ್ರಾಭಿಮಾನದ ಲೇಪ ಕೂಡಿವೆ ಎಂದು ಖ್ಯಾತ ನಟ ಅಮಿತಾಬ್ ಬಚ್ಚನ್ (Legendary actor Amitabh Bachchan) ಅಭಿಪ್ರಾಯಪಟ್ಟಿದ್ದಾರೆ.
28ನೇ ಕೊಲ್ಕತ್ತಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮಾತನಾಡಿದ ಅವರು, ಭಾರತೀಯ ಚಿತ್ರರಂಗ ಸದಾ ಸಾಹಸವನ್ನು ಪೋಷಿಸುತ್ತ ಬಂದಿದೆ ಮತ್ತು ಸಮಾನತಾವಾದದ ಚೇತನವನ್ನು ಜೀವಂತವಾಗಿ ಇರಿಸಿವೆ ಎಂದು ಬಣ್ಣಿಸಿದರು.
"ಆರಂಭದ ಕಾಲದಿಂದಲೂ ಚಲನಚಿತ್ರದ ವಿಷಯದಲ್ಲಿ ಹಲವು ಬದಲಾವಣೆಗಳು ಬಂದಿವೆ.. ಪೌರಾಣಿಕ ಚಿತ್ರಗಳು ಮತ್ತು ಸಮಾಜವಾದದ ಚಿತ್ರಗಳಿಂದ ಹಿಡಿದು, ಉದ್ರಿಕ್ತ ಯುವಜನತೆಯ ಉದಯದ ವರೆಗೆ.. ಕಪೋಲಕಲ್ಪಿತ ಆಡಂಬರದ ದೇಶಭಕ್ತಿಯ ಲೇಪನದಿಂದ ಕೂಡಿದ, ನೈತಿಕ ಪೊಲೀಸ್‍ಗಿರಿಯನ್ನು ಹೊಂದಿದ ಪ್ರಚಲಿತ ಐತಿಹಾಸಿಕ ಚಿತ್ರಗಳವರೆಗೆ.." ಎಂದು ಸೂಪರ್ ಸ್ಟಾರ್ ಬಚ್ಚನ್, ಭಾರತೀಯ ಚಿತ್ರರಂಗವನ್ನು ವಿಶ್ಲೇಷಿಸಿದರು.
ರಾಜಕೀಯ ಹಾಗೂ ಸಾಮಾಜಿಕ ಕಳಕಳಿಯನ್ನು ಪ್ರತಿಫಲಿಸುವ ಶ್ರೇಣಿಯ ಚಿತ್ರಗಳು ಪ್ರೇಕ್ಷಕರಿಗೆ ಲಭ್ಯ ಇವೆ ಎಂದು ಹೇಳಿದರು. ಭಾರತೀಯ ಸಿನಿಮಾಗಳು ಇಂದು ಕೂಡಾ ನಾಗರಿಕ ಸ್ವಾತಂತ್ರ್ಯ ಮತ್ತು ಸ್ವಾತಂತ್ರ್ಯದ ಪ್ರಶ್ನೆಗಳನ್ನು ಎತ್ತುತ್ತಿವೆ ಎಂದರು.
ಪ್ರಸ್ತುತ ಕಾಲಘಟ್ಟಕ್ಕೆ ಖ್ಯಾತ ಚಿತ್ರ ನಿರ್ಮಾಪಕ ಸತ್ಯಜೀತ್ ರೇ ಹೇಗೆ ಸ್ಪಂದಿಸುತ್ತಿದ್ದರು ಎನ್ನುವುದಕ್ಕೆ ಗಣಶತ್ರು ಉತ್ತಮ ನಿದರ್ಶನ ಎಂದು ಅಮಿತಾಬ್ ಬಚ್ಚನ್ ಬಣ್ಣಿಸಿದರು.
ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ವೈದ್ಯರೊಬ್ಬರು ಎದುರಿಸಿದ ಧಾರ್ಮಿಕ ಮೂಢನಂಬಿಕೆ ಹಾಗೂ ಮಧ್ಯಕಾಲೀನ ಪೂರ್ವಾಗ್ರಹಗಳ ನಡುವಿನ ಸಂಘರ್ಷವನ್ನು ಈ ಚಿತ್ರ ಬಿಂಬಿಸಿದೆ.







