ಚಿಕ್ಕಮಗಳೂರು | ರೇಬಿಸ್ ಕಾಯಿಲೆಯಿಂದ ಬಾಲಕ ಮೃತ್ಯು
ಚಿಕ್ಕಮಗಳೂರು: ನಾಯಿ ಕಡಿತಕ್ಕೆ ಸೂಕ್ತ ಚಿಕಿತ್ಸೆ ಪಡೆಯದ ಬಾಲಕ ಆರು ತಿಂಗಳ ಬಳಿಕ ರೇಬಿಸ್‍ನಿಂದ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಆಲ್ದೂರು ಸಮೀಪದ ಕಾರ್ಲಗದ್ದೆ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನ ಪ್ರಧಾನ್ (12) ಎಂದು ಗುರುತಿಸಲಾಗಿದೆ. ಆಲ್ದೂರು ಸಮೀದ ಕುಂದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾರ್ಲ್‍ಗದ್ದೆ ಗ್ರಾಮದ ರಮೇಶ್ ಅವರ ಮಗ ಮನೆ ಮುಂದೆ ಆಟವಾಡುವಾಗ ಬೀದಿ ನಾಯಿ ಬಾಲಕನ ಮೇಲೆ ದಾಳಿ ಮಾಡಿತ್ತು.
ಬೀದಿ ನಾಯಿ ದಾಳಿ ಮಾಡಿದಾಗ ಮನೆಯವರು ಸೂಕ್ತ ಚಿಕಿತ್ಸೆ ಕೊಡಿಸಬೇಕಿತ್ತು. ಆದರೆ, ನಾಯಿ ದಾಳಿ ಮಾಡಿದರೂ ಸೂಕ್ತ ಚಿಕಿತ್ಸೆ ಕೊಡಿಸದ ಕಾರಣ ಬಾಲಕ ಸಾವನ್ನಪ್ಪಿದ್ದಾನೆ ಎಂದು ದೂರಲಾಗಿದೆ.
ಕಳೆದೊಂದು ವಾರದ ಹಿಂದೆ ಬಾಲಕ ಪ್ರಧಾನ್‍ಗೆ ತೀವ್ರ ಜ್ವರ ಕಾಣಿಸಿಕೊಂಡಿತ್ತು. ಆತನನ್ನ ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಾಸನದ ಆಸ್ಪತ್ರೆಯಲ್ಲಿ ನಾಯಿ ಕಡಿತದಿಂದ ರೇಬಿಸ್ ಕಾಯಿಲೆಗೆ ತುತ್ತಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆದರೆ, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವಿಗೀಡಾಗಿದ್ದಾನೆ.