ಭಾರತ ಹಿಂದು ರಾಷ್ಟ್ರೀಯವಾದಿ ರಾಷ್ಟ್ರ ಆಗುವ ಅಪಾಯವೆದುರಿಸುತ್ತಿದೆ ಎಂದ ಅಮೆರಿಕಾದ ನಿರ್ಗಮನ ಡೆಮಾಕ್ರೆಟ್ ಸಂಸದ

ಹೊಸದಿಲ್ಲಿ: ಭಾರತ ಜಾತ್ಯತೀತ ಪ್ರಜಾಪ್ರಭುತ್ವವಾಗುವ ಬದಲು ಹಿಂದು ರಾಷ್ಟ್ರೀಯವಾದಿ ರಾಷ್ಟ್ರ ಆಗುವ ಅಪಾಯವನ್ನೆದುರಿಸುತ್ತಿದೆ ಎಂದು ಅಮೆರಿಕಾದ ಡೆಮಾಕ್ರೆಟ್ ಪಕ್ಷದ ನಿರ್ಗಮನ ಸಂಸದ ಆ್ಯಂಡಿ ಲೆವಿನ್ ಹೇಳಿದ್ದಾರೆ. "ಭಾರತದಲ್ಲಿ ಹುಟ್ಟಿದ ಹಿಂದೂ, ಜೈನ, ಬೌದ್ಧ ಧರ್ಮದ ಮತ್ತು ಇತರ ಧರ್ಮಗಳ ಅಭಿಮಾನಿ ನಾನು, ನಾವು ಇಲ್ಲಿನ ಎಲ್ಲಾ ಜನರ - ಅವರು ಮುಸ್ಲಿಮರಾಗಿರಲಿ, ಹಿಂದುಗಳಾಗಿರಲಿ, ಬೌದ್ಧ, ಯಹೂದಿಗಳು, ಕ್ರೈಸ್ತರು ಅಥವಾ ಜೈನರಾಗಿರಲಿ, ಅವರ ಹಕ್ಕುಗಳನ್ನು ರಕ್ಷಿಸಬೇಕಿದೆ," ಎಂದು ಅಮೆರಿಕಾದ ಹೌಸ್ ಆಫ್ ರೆಪ್ರಸೆಂಟೇಟಿವ್ಸ್‌ನಲ್ಲಿ ತಮ್ಮ ಕೊನೆಯ ಭಾಷಣದಲ್ಲಿ ಅವರು ಗುರುವಾರ ಹೇಳಿದರು. ಭಾರತದಲ್ಲಿ ಬಿಜೆಪಿ ಆಡಳಿತದಡಿಯಲ್ಲಿ ಕಾಶ್ಮೀರ ಸಮಸ್ಯೆ ಮತ್ತು ಮುಸ್ಲಿಮರ ಸಮಸ್ಯೆಯ ಬಗ್ಗೆ ಲೆವಿನ್ ಹಲವು ಬಾರಿ ಮಾತನಾಡಿದ್ದಾರೆ. ಕಾಶ್ಮೀರ ಸಮಸ್ಯೆಗೆ ಅಂತಾರಾಷ್ಟ್ರೀಯ ಗಮನದ ಅಗತ್ಯವಿದೆಯೆಂದು ಎಪ್ರಿಲ್ 20 ರಂದು ವಿವಿಧ ಮಾನವ ಹಕ್ಕು ಸಂಘಟನೆಗಳು "ಇಂಡಿಯಾಸ್ ಬ್ರೂಟಲ್ ಪರ್ಸಿಕ್ಯೂಶನ್ ಆಫ್ ಕಾಶ್ಮೀರ್" ಎಂಬ ಶೀರ್ಷಿಕೆಯ ವಿಶೇಷ ಕಾಂಗ್ರೆಶನಲ್ ಸಭೆಯಲ್ಲಿ ಲೆವಿನ್ ಹೇಳಿದ್ದರು. ಇದಕ್ಕೂ ಮುಂಚೆ 2019 ರಲ್ಲಿ ಮೀಡಿಯಂ ಬ್ಲಾಗ್‌ನಲ್ಲಿನ ಲೇಖನವೊಂದರಲ್ಲಿ ಮುಸ್ಲಿಮರ ಬಗ್ಗೆ ಪ್ರಧಾನಿಯ ಧೋರಣೆಯ ಬಗ್ಗೆ ಅವರು ಬರೆದಿದ್ದರು. "ಗುಜರಾತ್ ಮುಖ್ಯಮಂತ್ರಿಯಾಗಿದ್ದ ವೇಳೆ 2002 ರಲ್ಲಿ ಅಲ್ಲಿ ಮುಸ್ಲಿಮರ ವಿರುದ್ಧ ನಡೆದ ವ್ಯಾಪಕ ಹಿಂಸಾಚಾರ ತಡೆಯಲು ಅವರ ವೈಫಲ್ಯವನ್ನು ಕಂಡು 2005 ರಲ್ಲಿ ಆಗಿನ ಬುಷ್ ಆಡಳಿತ ಅವರಿಗೆ ಅಮೆರಿಕಾಗೆ ಪ್ರವೇಶ ನಿರಾಕರಿಸಿತ್ತು. ಕಾಸ್ಮೀರದಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವಾಗ ಸರ್ಕಾರ ಅಂತರ್ಜಾಲ ಮತ್ತು ಸಂವಹನ ಮಾಧ್ಯಮಗಳನ್ನು ನಿರ್ಬಂಧಿಸಿತ್ತು. ಇಂತಹ ಕ್ರಮ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವಕ್ಕೆ ತಕ್ಕುದೇ ಎಂದು ಅಮೆರಿಕಾ ಸ್ಪಷ್ಟಪಡಿಸಬೇಕು," ಎಂದು ಅವರು ಬರೆದಿದ್ದರು.
Next Story