ವಕೀಲರ ರಕ್ಷಣಾ ಅಧಿನಿಯಮ ಅಂಗೀಕರಿಸಲು ಆಗ್ರಹಿಸಿ ಮನವಿ

ಕುಂದಾಪುರ, ಡಿ.16: ವಕೀಲರ ರಕ್ಷಣಾ ಅಧಿನಿಯಮವನ್ನು ವಿಧಾನಸಭಾ ಅಧಿವೇಶನದಲ್ಲಿ ಅಂಗೀಕರಿಸಲು ಕುಂದಾಪುರ ವಕೀಲರ ಸಂಘದ ವತಿಯಿಂದ ಸರಕಾರಕ್ಕೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಮಾತನಾಡಿದ ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ, ವಕೀಲರು ದಿನನಿತ್ಯ ಕಕ್ಷಿಗಾರರು ಸಾರ್ವಜನಿಕರು ಮತ್ತು ಪೊಲೀಸರು ಸೇರಿ ಸರಕಾರದ ಬೇರೆ ಬೇರೆ ಇಲಾಖೆಗಳ ಬೇರೆ ಬೇರೆ ಪ್ರಾಧಿಕಾರದ ಜೊತೆಯಲ್ಲಿ ಕೆಲಸ ಮಾಡುತ್ತಾರೆ. ಇತ್ತೀಚಿನ ಕೆಲವು ವರ್ಷಗಳಲ್ಲಿ ದೇಶದ ಹಲವು ಕಡೆ ವಕೀಲರ ಮೇಲೆ ನ್ಯಾಯಾಲಯದಿಂದ ಪ್ರತಿಕೂಲ ಆದೇಶ ಬಂದಾಗ ಹಲ್ಲೆ ನಡೆಸುವುದು ಮತ್ತು ಕೊಲೆ ಮಾಡುವ ಕೃತ್ಯಗಳು ನಡೆಯುತ್ತಿವೆ ಎಂದು ದೂರಿದರು. ಇತ್ತೀಚೆಗೆ ಸಾರ್ವಜನಿಕವಾಗಿ ವಕೀಲರೊಬ್ಬರನ್ನು ಪ್ರಕರಣದ ಎದುರು ಕಕ್ಷಿಗಾರರು ಹಲ್ಲೆ ನಡೆಸಿದ್ದು ಕೆಲವು ದಿನಗಳ ಹಿಂದೆ ಪೊಲೀಸ್ ಅಧಿಕಾರಿ ಯೊಬ್ಬರು ಮಂಗಳೂರಿನ ಯುವ ವಕೀಲರನ್ನು ರಾತ್ರೋರಾತ್ರಿ ಎಳೆದುಕೊಂಡು ಹೋಗಿ ಹಿಂಸೆ ನೀಡಿದ ಪ್ರಕರಣ ನಡೆದಿದೆ. ಇಂತಹ ಅನೇಕ ಘಟನೆಗಳು ರಾಜ್ಯದಲ್ಲಿ ನಡೆಯುತ್ತಿದ್ದು ವಕೀಲರಿಗೆ ಜೀವ ರಕ್ಷಣೆ ಇಲ್ಲದಾಗಿದೆ. ಮುಂಬರುವ ಬೆಳಗಾವಿಯ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ರಕ್ಷಣಾ ಅಧಿನಿಯಮ ಅಂಗೀಕರಿಸಬೇಕು ಎಂದು ಅವರು ಒತ್ತಾಯಿಸಿದರು. ಸಂಘದ ಕಚೇರಿಯಿಂದ ಕುಂದಾಪುರ ಸಹಾಯಕ ಕಮಿಷನರ್ ಕಚೇರಿ ತನಕ ವಕೀಲರು ಜಾಥಾ ನಡೆಸಿದರು. ಬಳಿಕ ಕುಂದಾಪುರ ಸಹಾಯಕ ಕಮಿಷನರ್ ಕೆ.ರಾಜು ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು. ಹಿರಿಯ ವಕೀಲರಾದ ಟಿ.ಬಿ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಪದಾಧಿಕಾರಿಗಳಾದ ಬೀನಾ ಜೋಸೆಫ್, ರಿತೇಶ್ ಬಿ., ಹಾಲಾಡಿ ದಿನಕರ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
Next Story





