ಸಚಿವರಾದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ ಸಮುದಾಯ ಪರ ಯಾಕೆ ಮಾತನಾಡುತ್ತಿಲ್ಲ? : ಪ್ರಣವಾನಂದ ಸ್ವಾಮೀಜಿ
ʼಸರಕಾರ ಬೇಡಿಕೆಗಳನ್ನು ಈಡೇರಿಸಿದರೆ ಪಾದಯಾತ್ರೆ ವಾಪಸ್ʼ

ʼಸರಕಾರ ಬೇಡಿಕೆಗಳನ್ನು ಈಡೇರಿಸಿದರೆ ಪಾದಯಾತ್ರೆ ವಾಪಸ್ʼ
ಮಂಗಳೂರು, ಡಿ.17: ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸಹಿತ ಸಮುದಾಯದ ಪ್ರಮುಖ ಮೂರು ಬೇಡಿಕೆಗಳನ್ನು ರಾಜ್ಯ ಸರಕಾರ ಈಡೇರಿಸಿದರೆ ಪಾದಯಾತ್ರೆ ನಿರ್ಧಾರವನ್ನು ವಾಪಸ್ ಪಡೆಯುತ್ತೇವೆ ಎಂದು ಕಲಬುರಗಿ ನಾರಾಯಣಗುರು ಶಕ್ತಿಪೀಠದ ಪ್ರಣವಾನಂದ ಸ್ವಾಮೀಜಿ ಹೇಳಿದರು. ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಬೆಂಗಳೂರಿಗೆ 658 ಕಿಮೀ ಪಾದಯಾತ್ರೆ ಜ.6ರ ಬೆಳಗ್ಗೆ 10ಕ್ಕೆ ಧಾರ್ಮಿಕ ಸಭೆಯೊಂದಿಗೆ ಆರಂಭವಾಗಲಿದೆ. 25 ಹಿಂದುಳಿದ ಮಠಾಧಿಪತಿಗಳು ಭಾಗವಹಿಸಲಿದ್ದು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಪಾದಯಾತ್ರೆ ಉದ್ಘಾಟಲಿದ್ದಾರೆ. ಶಿವಗಿರಿ ಮಠದಿಂದ ಇಬ್ಬರು ಸನ್ಯಾಸಿಗಳು, ಸಮುದಾಯದ ಸ್ವಾಮೀಜಿಗಳು, ತೆಲಂಗಾಣ, ಆಂಧ್ರ, ತಮಿಳುನಾಡು, ಕೇರಳದಲ್ಲಿರುವ ಸಮುದಾಯ ಸಚಿವರು ಈ ಕಾರ್ಯಕ್ರಮದಲ್ಲಿ ಭಾಗವಹಿಲಿದ್ದಾರೆ ಎಂದರು. ನಾರಾಯಣ ಗುರು ನಿಗಮ, ನೀರಾ ನಿಗಮದ ಅಧ್ಯಕ್ಷತೆ, ಸಿಗಂದೂರು ದೇವಳ ವಿಚಾರದಲ್ಲಿ ಈಡಿಗ ಸಮಾಜದ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ. ಒಕ್ಕಲಿಗ ಸಮುದಾಯದ ರಾಜಕೀಯ ನಾಯಕರೆಲ್ಲ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕುಳಿತು ಆ ಸಮುದಾಯಕ್ಕೆ ಮೀಸಲಾತಿ ಕೇಳಲು ಸಾಧ್ಯವಾಗಿದ್ದರೆ, ಬಿಲ್ಲವ ಸಮುದಾಯದ ಸುನಿಲ್ ಕುಮಾರ್, ಕೋಟ ಶ್ರೀನಿವಾಸ್ ಪೂಜಾರಿ ಸಮುದಾಯ ಪರ ಯಾಕೆ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಕೇಂದ್ರ ಸರಕಾರ ಮೇಲ್ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10ರಷ್ಟು ಮೀಸಲಾತಿ ನೀಡುತ್ತಿದ್ದು, ಇದನ್ನು ಬಿಪಿಎಲ್ ಮಾನದಂಡವನ್ನೇ ನೀಡಬೇಕು. ಇಲ್ಲದಿದ್ದಲ್ಲಿ ಉಳಿದ ಸಮುದಾಯಕ್ಕೆ ಅನ್ಯಾಯವಾಗಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಾದಯಾತ್ರೆ ಸಮಿತಿಯ ಜಿಲ್ಲಾಧ್ಯಕ್ಷ ಜಿತೇಂದ್ರ ಜೆ. ಸುವರ್ಣ, ಮಾಜಿ ಮೇಯರ್ ಕವಿತಾ ಸನಿಲ್, ರಾಜ್ಯ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ಪದ್ಮನಾಭ ಕೋಟ್ಯಾನ್, ಶಂಕರ್ ಸುವರ್ಣ ಉಪಸ್ಥಿತರಿದ್ದರು. ಬಿಲ್ಲವರಿಗೆ 4 ಸ್ಥಾನ ನೀಡಬೇಕು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಸಮುದಾಯ ಅತ್ಯಧಿಕ ಸಂಖ್ಯೆಯಲ್ಲಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ತಲಾ ದ.ಕ. ಜಿಲ್ಲೆಯಲ್ಲಿ 4 ಮತ್ತು ಉಡುಪಿಯಲ್ಲಿ 3 ಸೀಟುಗಳನ್ನು ನೀಡಲೇಬೇಕು ಎಂದು ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದರು. ಶಿವಮೊಗ್ಗ 4, ಉ.ಕ.ದಲ್ಲಿ 3 ಸೀಟುಗಳನ್ನು ನೀಡಬೇಕು. ಇಷ್ಟು ವರ್ಷ ಬಿಲ್ಲವರನ್ನು ಒಡೆದು ಆಳಿದ್ದೀರಿ. ಮುಂದೆ ಒಬ್ಬನೂ ಧರ್ಮಾಂಧತೆಯಿಂದ ಸಾಯಬಾರದು ಎಂದು ಸ್ವಾಮೀಜಿ ಹೇಳಿದರು.
Next Story





