ಕೆಳಪರ್ಕಳ ರಾ.ಹೆ. ಕಾಮಗಾರಿಯಿಂದ ನಗರಸಭೆ ರಸ್ತೆ ಬಂದ್: ಸ್ಥಳೀಯರ ಆಕ್ರೋಶ

ಮಣಿಪಾಲ, ಡಿ.16: ಕೆಳಪರ್ಕಳದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ನೇರವಾಗಿ ಮಾಡುವ ಉದ್ದೇಶದಿಂದ ಕೆಳಪರ್ಕಳದಲ್ಲಿ ಮಾತ್ರ ವಿನ್ಯಾಸ ಬದಲಾವಣೆ ಮಾಡಲಾಗಿದ್ದು, ಈ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದ ನಗರಸಭೆ ರಸ್ತೆ ಬಂದ್ ಆಗಿದೆ. ಇದರ ವಿರುದ್ಧ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಹೆದ್ದಾರಿ ಕಾಮಗಾರಿ ವಿರುದ್ಧ ಹೆಚ್ಚಿನವರು ನ್ಯಾಯಾಲಯದಿಂದ ತಡೆ ಯಾಜ್ಞೆ ತಂದರೂ ಈ ಭಾಗದಲ್ಲಿ ಮಣ್ಣು ಹಾಕುವ ಕಾರ್ಯ ಭರದಿಂದ ಸಾಗಿದೆ. ಇದೀಗ ಗಣೇಶ ಶೆಣೈ ಎಂಬವರ ಮನೆಯ ಮುಂದೆ ಸಾಗಿ ಬಿಎಸ್‌ಎನ್‌ಎಲ್ ಕಚೇರಿ ಸಂಪರ್ಕಿಸುವ ನಗರ ಸಭೆಯ ರಸ್ತೆಯನ್ನು ಮಣ್ಣು ಹಾಕುವ ಭರದಲ್ಲಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಇದರಿಂದ ಸ್ಥಳೀಯರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ದೂರಲಾಗಿದೆ.
ಇಲ್ಲಿ ಸೂಕ್ತವಾಗಿ ಅಂಡರ್ ಪಾಸ್ ಅಳವಡಿಸಬೇಕು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಕಾಮಗಾರಿಯಾಗುವ ತನಕ ಸಂಪರ್ಕ ಕಲ್ಪಿಸುವ ರಸ್ತೆ ಇರಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಇಲ್ಲಿ ಸುಮಾರು ೫೦ಕ್ಕೂ ಹೆಚ್ಚು ಮನೆಗಳಿದ್ದು, ಇವರು ಸ್ಥಳೀಯವಾಗಿ ಮನೆ ಸಂಪರ್ಕಿಸಬೇಕಾದರೆ ಸುತ್ತುವರಿದು ಬರುವಂತಹ ಪರಿಸ್ಥಿತಿ ಉದ್ಭವಿಸಿದೆ. ಸ್ಥಳೀಯ ರಸ್ತೆಯನ್ನು ಏಕಾಏಕಿಯಾಗಿ ಬಂದು ಮಾಡಿ ಸಾರ್ವಜನಿಕರಿಗೆ ತೊಂದರೆ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.







