ರಾಜ್ಯದಲ್ಲಿ ಗುಣಮಟ್ಟದ ಕೌಶಲ್ಯಾಧಾರಿತ ಶಿಕ್ಷಣ: ಸಚಿವ ಡಾ.ಅಶ್ವತ್ಥ ನಾರಾಯಣ
ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ

ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ
ಮಂಗಳೂರು,ಡಿ.16: ಪ್ರಧಾನಿ ಮತ್ತು ಮುಖ್ಯಮಂತ್ರಿ ಕೌಶಲ್ಯ ಯೋಜನೆಯ ಸಮರ್ಪಕ ಅನುಷ್ಠಾನದಿಂದ ರಾಜ್ಯದಲ್ಲಿ ಗುಣಮಟ್ಟದ ಕೌಶಲ್ಯಾಧಾರಿತ ಶಿಕ್ಷಣ ಸಿಗುತ್ತಿದೆ. ಕೌಶಲ್ಯ ಶಿಕ್ಷಣದಲ್ಲಿ ರಾಜ್ಯವು ದೇಶಕ್ಕೆ ಮಾದರಿಯಾಗಿದೆ ಎಂದು ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ ನಾರಾಯಣ ಸಿ.ಎನ್.ಹೇಳಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್ ಆಶ್ರಯದಲ್ಲಿ 20.85 ಕೋ.ರೂ. ವೆಚ್ಚದಲ್ಲಿ ನಗರದ ಕದ್ರಿಹಿಲ್ಸ್‌ನಲ್ಲಿರುವ ಸರಕಾರಿ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯ ನೂತನ ಕಟ್ಟಡಕ್ಕೆ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು. ಕೊರಿಯಾದಲ್ಲಿ ಶೇ.96, ಜರ್ಮನಿಯಲ್ಲಿ ಶೇ.60ರಷ್ಟು ಮಂದಿ ಕೌಶಲ್ಯ ಹೊಂದಿದವರಿದ್ದರೆ, ಭಾರತದಲ್ಲಿ ಶೇ.5 ರಷ್ಟು ಮಂದಿ ಮಾತ್ರ ಇದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಕೌಶಲ್ಯ ಹೊಂದಿದ ಶಿಕ್ಷಣಕ್ಕೆ ಆದ್ಯತೆ ನೀಡಿ ಅನೇಕ ಯೋಜನೆಗಳನ್ನು ರೂಪಿಸಿದೆ. ವೃತ್ತಿಪರ ಶಿಕ್ಷಣಕ್ಕೆ ಆದ್ಯತೆ ನೀಡಿ ವಿದ್ಯಾರ್ಥಿಗಳನ್ನು ಬೆಳೆಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಕಂಪನಿಗಳ ಜತೆ ಒಡಂಬಡಿಕೆ ಮಾಡಿಕೊಂಡು ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿದೆ ಎಂದರು. ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಮನಪಾ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ, ಮನಪಾ ಸದಸ್ಯೆ ಶಕೀಲಾ ಕಾವ, ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಮುಡಾ ಅಧ್ಯಕ್ಷ ರವಿಶಂಕರ ಮಿಜಾರ್, ಕೆಜಿಟಿಟಿಐ ಪ್ರಾಂಶುಪಾಲ ಗಿರಿಧರ ಸಾಲ್ಯಾನ್, ಗುತ್ತಿಗೆದಾರ ಸುಜಯ್ ಕುಮಾರ್, ರಾಜೇಶ್ ರೈ ಉಪಸ್ಥಿತರಿದ್ದರು. ಕೆಜಿಟಿಟಿಐ ಜಂಟಿ ಕಾರ್ಯದರ್ಶಿ ಬಿ.ಎಸ್.ರಘುಪತಿ ಸ್ವಾಗತಿಸಿದರು.

Next Story





