KGF-2 ಹಾಡಿನ ದುರ್ಬಳಕೆ ಆರೋಪ: ರಾಹುಲ್ ಗಾಂಧಿ ವಿರುದ್ಧದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ
ಬೆಂಗಳೂರು, ಡಿ.16: ಭಾರತ್ ಜೋಡೋ ಯಾತ್ರೆಯಲ್ಲಿ ಕೆಜಿಎಫ್-2 ಚಿತ್ರದ ಹಾಡುಗಳನ್ನು ಬಳಕೆ ಮಾಡಿಕೊಂಡು ಹಕ್ಕುಸ್ವಾಮ್ಯ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿ ಇತರ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ ರದ್ದುಕೋರಿ ಸಲ್ಲಿಸಿದ್ದ ಅರ್ಜಿಯನ್ನು ಧಾರವಾಡ ಪೀಠದಿಂದ ವರ್ಚುವಲ್ ಆಗಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ಅವರಿದ್ದ ನ್ಯಾಯಪೀಠ, ಕೇಸ್ ಸಂಬಂಧ ನಡೆಯುತ್ತಿರುವ ತನಿಖೆಗೆ ಮುಂದಿನ ವಿಚಾರಣೆವರೆಗೂ ಮಧ್ಯಂತರ ತಡೆ ನೀಡಿ ಆದೇಶಿಸಿದೆ.
ಇದರಿಂದ, ರಾಹುಲ್ ಗಾಂಧಿ, ಕಾಂಗ್ರೆಸ್‍ನ ಮಾಧ್ಯಮ ವಿಭಾಗದ ಮುಖ್ಯಸ್ಥ ಹಾಗೂ ರಾಜ್ಯಸಭಾ ಸದಸ್ಯ ಜೈರಾಮ್ ರಮೇಶ್, ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮದ ಮುಖ್ಯಸ್ಥೆ ಸುಪ್ರಿಯಾ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಎ.ಎಸ್.ಪೊನ್ನಣ್ಣ ಅವರು, ಕೆಜಿಎಫ್-2 ಹಾಡುಗಳ ಬಳಕೆ ಆರೋಪದಲ್ಲಿ ಈ ಹಿಂದೆ ನ್ಯಾಯಾಲಯಕ್ಕೆ ನೀಡಿದ ಭರವಸೆಯಂತೆ ಹಾಡಿನ ತುಣುಕುಗಳನ್ನು ಸಾಮಾಜಿಕ ಜಾಲಾತಾಣಗಳಿಂದ ತೆಗೆದು ಹಾಕಲಾಗಿದೆ. ಜತೆಗೆ, ಕೆಜಿಎಫ್ ಚಿತ್ರದ ದೃಶ್ಯಗಳನ್ನು ಬಳಕೆ ಮಾಡಿಕೊಂಡಿಲ್ಲ. ಯಾತ್ರೆಯ ದೃಶ್ಯಗಳಿಗೆ ಹಿನ್ನೆಲೆ ಸಂಗೀತ ಬಳಕೆ ಮಾಡಿಕೊಳ್ಳಲಾಗಿತ್ತು.
ಪ್ರಸ್ತುತ ದಾಖಲಾಗಿರುವ ಎಫ್‍ಐಆರ್‍ನಲ್ಲಿ ಯಾವುದೇ ಕಾಗ್ನಿಜಬಲ್ ಆರೋಪಗಳಿಲ್ಲ. ಆದರೆ, ವಿಡಿಯೋದಲ್ಲಿ ರಾಹುಲ್ ಗಾಂಧಿ ಅವರ ಮುಖ ಕಾಣುತ್ತದೆ ಎಂಬ ಕಾರಣಕ್ಕಾಗಿ ಅವರನ್ನು ಆರೋಪಿಯನ್ನಾಗಿಸಲಾಗಿದೆ. ಬೆಂಗಳೂರಿನಲ್ಲಿ ಯಾತ್ರೆ ನಡೆಯದಿದ್ದರೂ, ಯಶವಂತಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಪ್ರಕರಣದಲ್ಲಿ ಹಕ್ಕು ಸ್ವಾಮ್ಯ ಉಲ್ಲಂಘನೆ ಆರೋಪವಿದ್ದರೂ, ಉದ್ದೇಶ ಪೂರ್ವಕವಾಗಿ ಐಪಿಸಿ ಸೆಕ್ಷನ್ 120ಬಿ(ಕ್ರಿಮಿನಲ್ ಪಿತೂರಿ), 403(ಆಸ್ತಿಯ ಅಪ್ರಾಮಾಣಿಕ ದುರುಪಯೋಗ) ಮತ್ತು 465(ನಕಲಿ) ಕಾಯುದೆಗಳು ಮತ್ತು ಮಾಹಿತಿ ಕಾಯಿದೆ ಅಡಿಯಲ್ಲಿ ದಾಖಲಿಸಿಕೊಳ್ಳಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ದೂರದಾರರಾದ ಎಂಆರ್‍ಟಿ ಮ್ಯೂಸಿಕ್ ಪರ ವಾದ ಮಂಡಿಸಿದ ಹಿರಿಯ ವಕೀಲ ಶ್ಯಾಮ್ ಸುಂದರ್, ನ್ಯಾಯಾಲಯದ ಆದೇಶದ ನಡುವೆಯೂ ಸಂಗೀತ ಬಳಕೆ ಮಾಡಿಕೊಂಡಿರುವ ತುಣುಕುಗಳನ್ನು ಅರ್ಜಿದಾರರ ಸಾಮಾಜಿಕ ಜಾಲಾತಾಣಗಳಲ್ಲಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕಾಗಿ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ. ಆ ರ್ಯಾಲಿಯಲ್ಲಿ ತಮ್ಮನ್ನು ವೈಭವೀಕರಿಸಿಕೊಳ್ಳಲು ದೂರುದಾರರ ಹಾಡುಗಳನ್ನು ಬಳಕೆ ಮಾಡಿಕೊಂಡಿರಬಹುದು. ಆದರೆ, ಆ ಹಾಡನ್ನು ಬಳಸುವುದಕ್ಕೆ ಹಕ್ಕು ಸ್ವಾಮ್ಯ ಪಡೆದಿರುವವರಿಗೆ ಮಾತ್ರ ಅವಕಾಶವಿದೆ. ಇದು ಕೃತಿಸ್ವಾಮ್ಯ ಉಲ್ಲಂಘನೆ. ಕ್ರಿಮಿನಲ್ ಆರೋಪಗಳ ಕುರಿತು ತನಿಖೆಯಲ್ಲಿ ಹೊರ ಬರಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠ, ತನಿಖೆಗೆ ಮಧ್ಯಂತರ ತಡೆ ನೀಡಿ ವಿಚಾರಣೆ ಮುಂದೂಡಿತು.
ಪ್ರಕರಣವೇನು?: ಕೆಜಿಎಫ್-2 ಚಿತ್ರದ ಹಾಡನ್ನು ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆಯ ದೃಶ್ಯಕ್ಕೆ ಬಳಸಿಕೊಳ್ಳಲಾಗಿದೆ. ಈ ಮೂಲಕ ಕಾಂಗ್ರೆಸ್, ಎಂಆರ್‍ಟಿ ಮ್ಯೂಸಿಕ್ ಕಂಪೆನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ಎಂಆರ್‍ಟಿ ಕಂಪೆನಿಯು ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ್ದ ಬೆಂಗಳೂರು ವಾಣಿಜ್ಯ ನ್ಯಾಯಾಲಯವು, "ಕಾಂಗ್ರೆಸ್ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿಬರ್ಂಧಿಸಬೇಕು" ಎಂದು ಟ್ವಿಟರ್‍ಗೆ ಸೂಚಿಸಿತ್ತು. ಈ ನಿರ್ದೇಶನವನ್ನು ಕಾಂಗ್ರೆಸ್ ಹೈಕೋರ್ಟ್‍ನಲ್ಲಿ ಪ್ರಶ್ನಿಸಿತ್ತು.