ಜಮ್ಮು ಕಾಶ್ಮೀರ: ಗುಂಡಿನ ದಾಳಿಗೆ ಇಬ್ಬರು ಸಾವು
ಸೇನೆ ಗುಂಡು ಹಾರಿಸಿದೆ ಎಂದು ನಾಗರಿಕರಿಂದ ಪ್ರತಿಭಟನೆ

ರಜೌರಿ, ಡಿ. 16: ಜಮ್ಮು ಹಾಗೂ ಕಾಶ್ಮೀರದ ರಜೌರಿ ಜಿಲ್ಲೆಯ ಸೇನಾ ಶಿಬಿರದ ಹೊರಗಡೆ ಶುಕ್ರವಾರ ಬೆಳಗ್ಗೆ ನಡೆದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ ಹಾಗೂ ಒಬ್ಬರು ಗಾಯಗೊಂಡಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ರಜೌರಿಯಲ್ಲಿ ಪ್ರತಿಭಟನೆ ಭುಗಿಲೆದ್ದಿತು.
ಗುಂಡಿನ ದಾಳಿಗೆ ಕಾರಣವಾದ ‘‘ಅಪರಿಚಿತ ಉಗ್ರ’’ರನ್ನು ಸೇನೆಯ ವೈಟ್ ನೈಟ್ ಕಾರ್ಪ್ಸ್ ವಶಕ್ಕೆ ತೆಗೆದುಕೊಂಡಿದೆ. ಆದರೆ, ಪ್ರತಿಭಟನೆ ನಡೆಸುತ್ತಿರುವ ಇಲ್ಲಿನ ನಾಗರಿಕರು ಸೇನೆ ಗುಂಡು ಹಾರಿಸಿದೆ ಎಂದು ಆರೋಪಿಸಿದ್ದಾರೆ.
ನಾಗರಿಕರ ಗುಂಪು ಮುಂಜಾನೆ 6.15ಕ್ಕೆ ಕೆಲಸಕ್ಕಾಗಿ ಶಿಬಿರದ ಗೇಟ್‌ಗೆ ಸಮೀಪಿಸುತ್ತಿದ್ದಾಗ ಸೇನಾ ಸಿಬ್ಬಂದಿ ಗುಂಡು ಹಾರಿಸಿದ್ದಾರೆ ಎಂದು ಅನಾಮಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ತಪ್ಪಾಗಿ ಗುರುತಿಸಿ ಗುಂಡು ಹಾರಿಸಲಾಗಿದೆಯೇ ಎಂಬುದನ್ನು ತಿಳಿಯಲು ತನಿಖೆ ಆರಂಭಿಸಲಾಗಿದೆ ಎಂದು ರಜೌರಿಯ ಹಿರಿಯ ಪೊಲೀಸ್ ಅಧೀಕ್ಷಕ ಮುಹಮ್ಮದ್ ಅಸ್ಲಾಂ ಚೌಧರಿ ಅವರು ಹೇಳಿದ್ದಾರೆ ಎಂದು ‘ಗ್ರೇಟರ್ ಕಾಶ್ಮೀರ’ ವರದಿ ಮಾಡಿದೆ.
ಗುಂಡಿನ ದಾಳಿಯಲ್ಲಿ ಮೃತಪಟ್ಟ ಇಬ್ಬರನ್ನು ಕಮಲ್ ಕಿಶೋರ್ ಹಾಗೂ ಸುರೀಂದರ್ ಕುಮಾರ್ ಎಂದು ಗುರುತಿಸಲಾಗಿದೆ. ಇಬ್ಬರೂ ರಜೌರಿಯ ಫಲಯಾನ ಗ್ರಾಮದ ನಿವಾಸಿಗಳು ಎಂದು ಕಾಶ್ಮೀರ ಮೂಲದ ವೆಬ್‌ಸೈಟ್ ಹೇಳಿದೆ.
ಆದರೆ, ಇದುವರೆಗೆ ಘಟನೆಯ ಅಧಿಕೃತ ಮಾಹಿತಿಯನ್ನು ನೀಡಿದ ವೈಟ್ ನೈಟ್ ಕಾರ್ಪ್ಸ್ ಮೃತಪಟ್ಟವರನ್ನು ಗುರುತಿಸಿಲ್ಲ.
‘‘ಸೇನಾ ಆಸ್ಪತ್ರೆಯ ಬಳಿಯ ರಜೌರಿಯಲ್ಲಿ ಮುಂಜಾನೆ ಅಪರಿಚಿತ ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ಪೊಲೀಸ್, ಭದ್ರತಾ ಪಡೆ ಹಾಗೂ ನಾಗರಿಕ ಆಡಳಿತದ ಅಧಿಕಾರಿಗಳು ಇದ್ದಾರೆ’’ ಎಂದು ಸೇನಾ ಕಾರ್ಪ್ಸ್ ಟ್ವೀಟ್‌ನಲ್ಲಿ ಹೇಳಿದೆ.
ಘಟನೆ ನಡೆದ ಕೂಡಲೇ ಸೇನಾ ಶಿಬರದ ಸಮೀಪ ನಾಗರಿಕರು ಪ್ರತಿಭಟನೆ ನಡೆಸಿದರು, ಕಲ್ಲು ತೂರಾಟ ನಡೆಸಿದರು ಎಂದು ಅನಾಮಿಕ ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು-ಪೂಂಚ್ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಪ್ರತಿಭಟನೆ ನಡೆಸುತ್ತಿದ್ದ ಹಾಗೂ ಘಟನೆಯ ತನಿಖೆಗೆ ಆಗ್ರಹಿಸಿದ ನಾಗರಿಕರೊಂದಿಗೆ ಅಲ್ಲಿದ್ದ ನಾಗರಿಕ ಹಾಗೂ ಪೊಲೀಸ್ ಅಧಿಕಾರಿಗಳು ಮಾತುಕತೆ ನಡೆಸಿದರು.
ಅಪರಿಚಿತ ಉಗ್ರರು ಗುಂಡಿನ ದಾಳಿ ನಡೆಸಿದರು ಎಂದು ಸೇನೆಯ ವೈಟ್ ನೈಟ್ ಕಾರ್ಪ್ಸ್ ಹೇಳಿದೆ. ಆದರೆ, ಇದು ನಿಜವಲ್ಲ. ಭದ್ರತಾ ಪಡೆ ಗುಂಡು ಹಾರಿಸಿದೆ ಎಂದು ನಾಗರಿಕರು ಆರೋಪಿಸಿದ್ದಾರೆ.







