ಬಿಹಾರ: ಕಳ್ಳಭಟ್ಟಿ ದುರಂತ; ಮೃತರ ಸಂಖ್ಯೆ 65ಕ್ಕೆ ಏರಿಕೆ

ಪಾಟ್ನಾ, ಡಿ. 16: ಬಿಹಾರದ ಛಾಪ್ರಾದಲ್ಲಿ ಕಳ್ಳ ಭಟ್ಟಿ ಸೇವಿಸಿ ಅಸ್ವಸ್ಥರಾಗಿದ್ದ ಮತ್ತೆ 11 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಕಳ್ಳ ಭಟ್ಟಿ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ.
ಮಂಗಳವಾರ ರಾತ್ರಿ ಕಳ್ಳಭಟ್ಟಿ ದುರಂತ ಸಂಭವಿಸಿದ ಬಳಿಕ ಮರೌರ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಯೋಗೇಂದ್ರ ಕುಮಾರ್ ಅವರ ಶಿಫಾರಸಿನಂತೆ ಮಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ರಿತೇಶ್ ಮಿಶ್ರಾ ಹಾಗೂ ಕಾನ್‌ಸ್ಟೆಬಲ್ ವಿಕೇಶ್ ತಿವಾರಿ ಅವರನ್ನು ಅಮಾನತುಗೊಳಿಸಲಾಗಿದೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಸರಕಾರ ಮದ್ಯ ಮಾರಾಟ ಹಾಗೂ ಬಳಕೆಯನ್ನು 2016 ಎಪ್ರಿಲ್‌ನಲ್ಲಿ ನಿಷೇಧಿಸಿದೆ. ಆದುದರಿಂದ ಈ ಕಳ್ಳಭಟ್ಟಿ ದುರಂತ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಕೋಲಾಹಲ ಉಂಟು ಮಾಡಿದೆ.
ರಾಜ್ಯ ಸಭೆಯಲ್ಲಿ ಗುರುವಾರ ಬಿಜೆಪಿ ಸಂಸದರು ಕಳ್ಳ ಭಟ್ಟಿ ದುರಂತದ ಕುರಿತಂತೆ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಛಾಪ್ರಾ ಕಳ್ಳ ಭಟ್ಟಿ ದುರಂತದ ಬಗ್ಗೆ ಪ್ರಶ್ನಿಸಿದಾಗ ನಿತೀಶ್ ಕುಮಾರ್ ಅವರು, ಮದ್ಯ ಕುಡಿದವರು ಸಾವನ್ನಪ್ಪುತಾರೆ ಎಂದು ಹೇಳಿಕೆ ನೀಡಿದ್ದರು.
ಮದ್ಯ ನಿಷೇಧ ಹಲವರಿಗೆ ಪ್ರಯೋಜನವಾಗಿದೆ. ದೊಡ್ಡ ಸಂಖ್ಯೆಯ ಜನರು ಮದ್ಯ ವರ್ಜಿಸಿದ್ದಾರೆ. ಇದು ಉತ್ತಮ. ಹಲವರು ಇದನ್ನು ಸಂತೋಷದಿಂದ ಒಪ್ಪಿಕೊಂಡಿದ್ದಾರೆ. ಆದರೆ, ಸಮಸ್ಯೆ ಸೃಷ್ಟಿಸುವವರು ಕೂಡ ಇದ್ದಾರೆ. ನಿಜವಾಗಿ ಸಮಸ್ಯೆ ಸೃಷ್ಟಿಸುವವರನ್ನು ಗುರುತಿಸಿ ಹಾಗೂ ಬಂಧಿಸಿ ಎಂದು ನಾನು ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದು ನಿತೀಶ್ ಕುಮಾರ್ ಅವರು ಪಟ್ನಾದಲ್ಲಿ ಗುರುವಾರ ಮಾದ್ಯಮಕ್ಕೆ ತಿಳಿಸಿದ್ದರು.
ಪರಿಹಾರ ಇಲ್ಲ: ನಿತೀಶ್ ಕುಮಾರ್
ವಿಧಾನ ಸಭೆಯಲ್ಲಿ ಶುಕ್ರವಾರ ಮಾತನಾಡಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಕಳ್ಳಭಟ್ಟಿ ದುರಂತದಲ್ಲಿ ಮೃತಪಟ್ಟವರಿಗೆ ಪರಿಹಾರ ಇಲ್ಲ. ಮದ್ಯ ಕುಡಿದರೆ, ನೀವು ಸಾಯುತ್ತೀರಿ. ಮದ್ಯ ಕುಡಿಯುವುದನ್ನು ಬೆಂಬಲಿಸಿ ಮಾತನಾಡುವವರು ನಿಮಗೆ ಯಾವುದೇ ಒಳ್ಳೆಯದನ್ನು ಮಾಡಲಾರರು ಎಂದಿದ್ದಾರೆ.
ಎನ್‌ಎಚ್‌ಆರ್‌ಸಿ ನೋಟಿಸ್
ಕಳ್ಳ ಭಟ್ಟಿ ದುರಂತಕ್ಕೆ ಸಂಬಂಧಿಸಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಬಿಹಾರ ಸರಕಾರ ಹಾಗೂ ರಾಜ್ಯ ಪೊಲೀಸ್ ವರಿಷ್ಠರಿಗೆ ನೋಟಿಸು ಜಾರಿ ಮಾಡಿದೆ.







