ಕಲಬುರಗಿ: ನೀರಿನ ಟ್ಯಾಂಕ್ ನಲ್ಲಿ 15ಕ್ಕೂ ಅಧಿಕ ಮಂಗಗಳ ಶವ ಪತ್ತೆ

ಕಲಬುರಗಿ: ಬಳಕೆಯಲ್ಲಿಲ್ಲದ ಶಿಥಿಲ ನೀರಿನ ಟ್ಯಾಂಕ್ ನಲ್ಲಿ 15ಕ್ಕೂ ಅಧಿಕ ಮಂಗಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಗ್ರಾಪಂ ಕೇಂದ್ರ ಸ್ಥಾನವಾಗಿರುವ ಹಳಕರ್ಟಿ ಗ್ರಾಮದಲ್ಲಿರುವ ಶಿಥಿಲ ನೀರಿನ ಟ್ಯಾಂಕ್ (ಓವರ್ ಹೆಡ್ ಟ್ಯಾಂಕ್) ಬೀಳುವ ಹಂತಕ್ಕೆ ತಲುಪಿದ್ದರ ಪರಿಣಾಮ ಕಳೆದ ಐದಾರು ವರ್ಷಗಳಿಂದ ನೀರು ಸಂಗ್ರಹ ಕೈಬಿಡಲಾಗಿದೆ ಎನ್ನಲಾಗಿದ್ದು, ಪಾರಿವಾಳ ಬಿದ್ದಿದೆ ಎಂದು ಬಾಲಕನೊಬ್ಬ ಟ್ಯಾಂಕ್ ಒಳಗೆ ಇಣುಕಿ ನೋಡಿದಾಗ 40ಕ್ಕೂ ಅಧಿಕ ಮಂಗಗಳು ಒಳಗೆ ಇರುವುದು ಗಮನಿಸಿದ್ದಾನೆ. ತಕ್ಷಣ ಸ್ಥಳಕ್ಕೆ ತೆರಳಿದ ಸಾರ್ವಜನಿಕರು ಇಣುಕಿ ನೋಡಿದಾಗ ಅದರಲ್ಲಿ 15ಕ್ಕೂ ಅಧಿಕ ಮಂಗಗಳು ಸತ್ತು ಕೊಳೆತ ಸ್ಥಿತಿಯಲ್ಲಿ ಬಿದ್ದಿದ್ದು, ಇನ್ನುಳಿದ 15ಕ್ಕೂ ಅಧಿಕ ಮಂಗಗಳು ತೀವ್ರ ನರಳಾಡುತ್ತಿದ್ದವು. ಟ್ಯಾಂಕ್ ಒಳಗೆ ಇಳಿಯಲು ಏಣಿ ವ್ಯವಸ್ಥೆ ಇಲ್ಲದ ಕಾರಣ ಗ್ರಾಮದ ಯುವಕರು ಹಗ್ಗ ಇಳಿಬಿಟ್ಟು ಕೆಲವು ಕೋತಿಗಳನ್ನು ರಕ್ಷಣೆ ಮಾಡಿದ್ದಾರೆ. ಆದರೆ ನೀರು ಆಹಾರವಿಲ್ಲದೇ ಐದಾರು ದಿನಗಳ ಕಾಲ ಟ್ಯಾಂಕಿನಲ್ಲೇ ನರಳಾಡಿದ್ದ ಕೋತಿಗಳು ಪ್ರಾಣಬಿಟ್ಟಿವೆ. ಇನ್ನುಳಿದ ಮಂಗಗಳು ಮೇಲೆ ಬಾರಲು ಸಾಧ್ಯವಾಗದೇ ಅಲ್ಲಿಯೇ ಮೃತಪಟ್ಟಿವೆ.
ಗ್ರಾಪಂ ವಿರುದ್ಧ ಗ್ರಾಮಸ್ಥರ ಆಕ್ರೋಶ: ಜನ ವಸತಿ ಜಾಗದಲ್ಲಿರುವ ಈ ಟ್ಯಾಂಕ್ ನೆಲಕ್ಕುರುಳಿ ಪ್ರಾಣಾಪಾಯ ತಂದಿಡುವ ಮುಂಚೆಯೇ ಅಧಿಕಾರಿಗಳು ಎಚ್ಚೆತ್ತುಕೊಂಡು ತೆರವು ಮಾಡಬೇಕು ಎಂಬುದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಕೋತಿಗಳು ಬಿದ್ದು ಸತ್ತರೂ ಗ್ರಾಪಂ ಅಧಿಕಾರಿಗಳು ಹಾಗೂ ಗ್ರಾಪಂ ಚುನಾಯಿತ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಲು ಮುಂದಾಗದಿರುವುದು ಗ್ರಾಮಸ್ಥರ ಆಕ್ರೋಶ ಕಾರಣವಾಗಿದೆ.







