ಅತ್ಯಾಚಾರ ಪ್ರಕರಣ: ಬಿಜೆಪಿಯ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ಈಗ ಘೋಷಿತ ಅಪರಾಧಿ

ಶಹಜಹಾನ್‍ಪುರ: ಉತ್ತರ ಪ್ರದೇಶದ ಶಹಜಹಾನ್‍ಪುರದ ವಿಶೇಷ ಸಂಸದ/ಶಾಸಕ ನ್ಯಾಯಾಲಯ, ಬಿಜೆಪಿಯ ಮಾಜಿ ಕೇಂದ್ರ ಸಚಿವ ಚಿನ್ಮಯಾನಂದ ವಿರುದ್ಧ ಅಪರಾಧ ದಂಡ ಸಂಹಿತೆಯ ಸೆಕ್ಷನ್ 82ರ ಅಡಿಯಲ್ಲಿ ಕಾನೂನು ಪ್ರಕ್ರಿಯೆ ಆರಂಭಿಸಿದೆ ಎಂದು timesofindia.com ವರದಿ ಮಾಡಿದೆ.
ಈ ಸೆಕ್ಷನ್ ಅಡಿಯಲ್ಲಿ ತಲೆ ಮರೆಸಿಕೊಂಡ ಆರೋಪಿಯನ್ನು ಘೋಷಿತ ಅಪರಾಧಿ ಎಂದು ಪರಿಗಣಿಸಲಾಗುತ್ತದೆ.
2011ರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈತ ನ್ಯಾಯಾಲಯಕ್ಕೆ ಹಾಜರಾಗಲು ವಿಫಲನಾದ ಹಿನ್ನೆಲೆಯಲ್ಲಿ ಈ ಪ್ರಕ್ರಿಯೆ ಆರಂಭಿಸಲಾಗಿದೆ.
ಸುಪ್ರೀಂಕೋರ್ಟ್ ಈ ಪ್ರಕರಣದಲ್ಲಿ ತಾತ್ಕಾಲಿಕ ತಡೆಯಾಜ್ಞೆ ನೀಡಿತ್ತು. ಆದರೆ ಅದರ ಅವಧಿ ನವೆಂಬರ್ 30ಕ್ಕೆ ಕೊನೆಗೊಂಡಿದೆ. "ಆತನ ವಿರುದ್ಧ ಜಾಮೀನು ರಹಿತ ವಾರೆಂಟ್ ಹೊರಡಿಸಿದರೂ ಆತ ನ್ಯಾಯಾಲಯದ ಮುಂದೆ ಹಾಜರಾಗಿಲ್ಲ. ಪೊಲೀಸರು ಕೂಡಾ ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ವಿಫಲರಾಗಿದ್ದಾರೆ. ಇದೀಗ ಆತ ಘೋಷಿತ ಅಪರಾಧಿ. ಜನವರಿ 16ರಂದು ಪ್ರಕರಣದ ಮುಂದಿನ ವಿಚಾರಣೆಗೆ ದಿನ ನಿಗದಿಪಡಿಸಲಾಗಿದೆ" ಎಂದು ಸರ್ಕಾರಿ ವಕೀಲರಾದ ನಿರ್ಮಲಾ ಸಕ್ಸೇನಾ ಹೇಳಿದ್ದಾರೆ.







