ಇದು ನೆಹರೂ ಅವರ ಭಾರತವಲ್ಲ: ರಾಹುಲ್ ಗಾಂಧಿಗೆ ಬಿಜೆಪಿ ತಿರುಗೇಟು

ಹೊಸದಿಲ್ಲಿ: ಚೀನಾದಿಂದ ಯುದ್ಧದ ಬೆದರಿಕೆಯನ್ನು ಭಾರತ ನಿರ್ಲಕ್ಷಿಸುತ್ತಿದೆ ಎಂದು ಹೇಳಿಕೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ತಿರುಗೇಟು ನೀಡಿರುವ ಬಿಜೆಪಿ, ಇಂತಹ ಹೇಳಿಕೆ ಮೂಲಕ ರಾಹುಲ್ ಅವರು ಸೇನೆಯ ಧೈರ್ಯವನ್ನು ಕುಗ್ಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದೆ. ಈಗಿನ ಭಾರತ ನೆಹರೂ ಅವರ ಭಾರತವಲ್ಲ ಎಂದು ರಾಹುಲ್ ಅವರ ಮುತ್ತಜ್ಜ, ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ವಾಗ್ದಾಳಿ ನಡೆಸಿದೆ.
ಭಾರತ್ ಜೋಡೋ ಯಾತ್ರೆಯ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ, ಚೀನಾ ಯುದ್ಧಕ್ಕೆ ತಯಾರಿ ನಡೆಸುತ್ತಿದೆ ಹಾಗೂ ಭಾರತ ಸರಕಾರ ನಿದ್ರಿಸುತ್ತಿದೆ ಹಾಗೂ ಚೀನಾದ ಬೆದರಿಕೆಯನ್ನು ನಿರ್ಲಕ್ಷಿಸುತ್ತಿದೆ ಎಂದು ಆರೋಪಿಸಿದ್ದರು.
ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ ವಕ್ತಾರ ರಾಜ್ಯವರ್ಧನ್ ಸಿಂಗ್ ರಾಥೋಡ್, Rajyavardhan Singh Rathore "ರಾಹುಲ್ ಗಾಂಧಿ ಚೀನಾದೊಂದಿಗೆ ಸಾಮೀಪ್ಯ ಇರಬೇಕು ಎಂದು ಭಾವಿಸಿದ್ದಾರೆ. ಈಗ ಅವರು ಚೀನಾದೊಂದಿಗೆ ತುಂಬಾ ಸಾಮೀಪ್ಯವನ್ನು ಬೆಳೆಸಿಕೊಂಡಿದ್ದಾರೆ, ಚೀನಾ ಏನು ಮಾಡುತ್ತದೆ ಎಂದು ಅವರಿಗೆ ತಿಳಿದಿದೆ" ಎಂದು ಹೇಳಿದ್ದಾರೆ.
ತಮ್ಮ ಯಾತ್ರೆಯ ವೇಳೆ ರಾಹುಲ್ ಗಾಂಧಿ ಅವರು ಭಾರತೀಯ ಭದ್ರತೆ ಹಾಗೂ ಗಡಿ ಪ್ರದೇಶಗಳ ಬಗ್ಗೆ ದೇಶದಲ್ಲಿ ಗೊಂದಲವನ್ನು ಹರಡಲು ಹಾಗೂ ಭಾರತೀಯ ಸೈನಿಕರ ಧೈರ್ಯವನ್ನು ಕುಗ್ಗಿಸಲು ಹೇಳಿಕೆ ನೀಡಿತ್ತಿದ್ದಾರೆ. ನಿದ್ದೆಯಲ್ಲಿದ್ದಾಗ 37,242 ಚದರ ಕಿ.ಮೀ ಭೂಭಾಗವನ್ನು ಚೀನಾಕ್ಕೆ ಕಳೆದುಕೊಂಡಿದ್ದ ತಮ್ಮ ಮುತ್ತಜ್ಜ ನೆಹರೂ ಅವರ ಭಾರತ ಈಗಿಲ್ಲ’’ ಎಂದು ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಥೋಡ್, 1962ರ ಭಾರತ ಮತ್ತು ಚೀನಾ ನಡುವಿನ ಯುದ್ಧವನ್ನು ಉಲ್ಲೇಖಿಸಿ ಹೇಳಿದರು.







