Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಭಾರತದ ನೆಲದಲ್ಲಿ ಚೀನಾದ ನಿರಂತರ...

ಭಾರತದ ನೆಲದಲ್ಲಿ ಚೀನಾದ ನಿರಂತರ ಅತಿಕ್ರಮಣ ಮತ್ತು ಅದರ ರಾಜಕೀಯ ಉದ್ದೇಶಗಳು

ಡಾ.ಎಂ. ವೆಂಕಟಸ್ವಾಮಿಡಾ.ಎಂ. ವೆಂಕಟಸ್ವಾಮಿ17 Dec 2022 12:18 PM IST
share
ಭಾರತದ ನೆಲದಲ್ಲಿ ಚೀನಾದ ನಿರಂತರ ಅತಿಕ್ರಮಣ ಮತ್ತು ಅದರ ರಾಜಕೀಯ ಉದ್ದೇಶಗಳು

ಚೀನಾದ ಭೂವಿಸ್ತರಣೆ ಮತ್ತು ಭೂಕಬಳಿಕೆಯ ಆಸೆ ಹೇಸಿಗೆ ಹುಟ್ಟಿಸುತ್ತದೆ. ಇಷ್ಟಕ್ಕೂ ಅರುಣಾಚಲ ಪ್ರದೇಶದ, ಅದೂ ಕೂಡ ಮುಖ್ಯವಾಗಿ ತವಾಂಗ್ ತನಗೆ ಸೇರಿದ ಪ್ರದೇಶ ಎಂದು ಪದೇಪದೇ ಹೇಳಿಕೊಳ್ಳುತ್ತಾ ಭಾರತದ ಗಡಿ ಒಳಕ್ಕೆ ನುಗ್ಗಿ ಘರ್ಷಣೆಗೆ ನಿಲ್ಲಲು ಕಾರಣ ತವಾಂಗ್ ಪ್ರಾಂತ ಯುದ್ಧ ವ್ಯೆಹಾತ್ಮಕ ಸ್ಥಳವಾಗಿರುವುದೇ ಅಲ್ಲದೆ ಅದರ ಅಪಾರವಾದ ಸೊಬಗು ಎನ್ನಬಹುದು! 

ಚೀನಾ ಸೈನಿಕರು ಪದೇಪದೇ ಭಾರತೀಯ ಗಡಿ ಒಳಕ್ಕೆ ಪ್ರವೇಶಿಸಿ ಭಾರತೀಯ ಸೈನ್ಯದ ಜೊತೆಗೆ ಘರ್ಷಣೆಗೆ ಇಳಿಯುವುದು ಮಾಮೂಲಿಯಾಗಿಬಿಟ್ಟಿದೆ. 2020ರ ಜೂನ್ 17ರಂದು ಹಿಮಾಲಯದ ಪಶ್ಚಿಮ ಲಡಾಖ್‌ನ ಗಲ್ವಾನ್ ಪ್ರದೇಶದಲ್ಲಿ ಚೀನಿ ಸೈನಿಕರು ಅತಿಕ್ರಮಣ ನಡೆಸಿದಾಗ ಘರ್ಷಣೆಯಲ್ಲಿ 20 ಭಾರತೀಯ ಯೋಧರು ಮೃತಪಟ್ಟಿದ್ದರು. ಆ ಘರ್ಷಣೆ ನಡೆದಿದ್ದು ಕಲ್ಲುಗಳು ಮತ್ತು ದೊಣ್ಣೆಗಳಿಂದ. 

ಇದೇ 9-10ನೇ ತಾರೀಕು ತವಾಂಗ್ ಹತ್ತಿರ ಮತ್ತೆ ಅತಿಕ್ರಮಣ ನಡೆಸಿ ಘರ್ಷಣೆಗೆ ಇಳಿದಿದೆ. ಹಿಮಾಲಯ ಪರ್ವತಗಳ ಮೇಲೆ ಝೀರೊ ಡಿಗ್ರಿ ತಾಪಮಾನದಲ್ಲಿ ಹಗಲು-ರಾತ್ರಿ ದೇಶದ ಗಡಿಯಲ್ಲಿ ಕಾವಲು ಕಾಯುವ ಯೋಧರ ಬಗ್ಗೆ ಒಂದು ಕಡೆ ಹೆಮ್ಮೆಯಾದರೆ ಮತ್ತೊಂದು ಕಡೆ ದುಃಖವಾಗುತ್ತದೆ. ಜಗತ್ತಿನ ಯಾವುದೇ ಮೂಲೆಯಲ್ಲಿ ಇಂತಹ ವಾತಾವರಣದಲ್ಲಿ ಕೆಲಸ ಮಾಡುವುದೆಂದರೆ ಅದೊಂದು ನರಕಯಾತನೆಯೇ ಸರಿ. 

ಇಷ್ಟಕ್ಕೂ ಭಾರತ ಮತ್ತು ಚೀನಾ ನಡುವೆ ಘರ್ಷಣೆಗಳು ಮತ್ತು ಯುದ್ಧಗಳು ಏಕೆ ನಡೆಯುತ್ತವೆ? ಎಂಬ ಪ್ರಶ್ನೆಯನ್ನು ಕೆದಕುತ್ತಾಹೋದರೆ ಕನಿಷ್ಠ ನೂರು ವರ್ಷಗಳ ಹಿಂದಿನ ಕೆಲವು ಇತಿಹಾಸದ ಪುಟಗಳನ್ನು ತೆರೆದು ನೋಡಬೇಕಾಗುತ್ತದೆ. ಅದು ಬೇರೆ ಏನೂ ಅಲ್ಲ, ಸಾವಿರಾರು ವರ್ಷಗಳ ಹಿಂದಿನಿಂದಲೂ ಪಾಳೇಗಾರರು, ರಾಜ-ಮಹಾರಾಜರು ಮತ್ತು ದೇಶಗಳ ನಡುವಿನ ಭೂಕಬಳಿಕೆಯ ದುರಾಸೆಯೇ ಆಗಿದೆ. 

ಚೀನಾ, ಭಾರತದಿಂದ ಪಶ್ಚಿಮ ಕಾಶ್ಮೀರವನ್ನು ವಶಪಡಿಸಿಕೊಂಡು ಪಾಕಿಸ್ಥಾನಕ್ಕೆ ಕೊಟ್ಟ ಪಿಒಕೆ 13,295 ಚ.ಕಿ.ಮೀ. ವಿಸ್ತೀರ್ಣವಾದರೆ, ಈಶಾನ್ಯ ಕಾಶ್ಮೀರದಲ್ಲಿ ಚೀನಾ ವಶಪಡಿಸಿಕೊಂಡಿರುವ ಪ್ರದೇಶ ಸುಮಾರು 38,000 ಚ.ಕಿ.ಮೀ. ಎನ್ನಲಾಗಿದೆ. ಇದು ಸಾಲದೆಂಬಂತೆ ಇನ್ನೂ 20,000 ಚ.ಕಿ.ಮೀ. ವಿಸ್ತೀರ್ಣದ ಅರುಣಾಚಲ ಪ್ರದೇಶ ತನಗೆ ಸೇರಿದ್ದೆಂದು ಚೀನಾ ಆಗಾಗ ತಗಾದೆ ತೆಗೆಯುತ್ತಲೇ ಇರುತ್ತದೆ. 

1960ರ ದಶಕದಲ್ಲಿ ಸ್ವಾತಂತ್ರ್ಯ ಪಡೆದುಕೊಂಡ ಭಾರತ ಇನ್ನೂ ಮಂಪರಿನಲ್ಲೇ ಉಳಿದುಕೊಂಡಿತ್ತು. ಪ್ರಪಂಚದ ಛಾವಣಿ ಎಂದು ಕರೆಯುವ ಹಿಮಚ್ಛಾದಿತ ನೀರಿನ ಸಂಪನ್ಮೂಲ ಹೊಂದಿರುವ ಇಡೀ ಟಿಬೆಟ್‌ನ್ನು ಚೀನಾ ದಿಢೀರನೆ ತನ್ನ ತೆಕ್ಕೆಗೆ ತೆಗೆದುಕೊಂಡುಬಿಟ್ಟಿತು. ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಬಿಟ್ಟರೆ ಹೆಚ್ಚು ನೀರಿನ ಸಂಪನ್ಮೂಲ ಹೊಂದಿರುವ ಈ ಪ್ರದೇಶದಿಂದ ಅನೇಕ ಅಂತರ್‌ರಾಷ್ಟ್ರೀಯ ನದಿಗಳ ಉಗಮವಾಗುತ್ತವೆ.

1959ರಲ್ಲಿ ಟಿಬೆಟ್‌ನ ಬೌದ್ಧ ಆಧ್ಯಾತ್ಮಿಕ ಗುರು ದಲಾಯಿಲಾಮಾ ಭಾರತಕ್ಕೆ ಓಡಿಬಂದಿದ್ದು, ನೆಹರೂ ಸರಕಾರ ಅವರಿಗೆ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ಆಶ್ರಯ ಕೊಟ್ಟ ಕಾರಣ ಚೀನಾದ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಂದಿನಿಂದ ಇಂದಿನವರೆಗೂ ಚೀನಾ ಅರುಣಾಚಲ ಪ್ರದೇಶದ ಮೇಲೆ ಕಾಲು ಕೆದರಿಕೊಂಡು ಬರುತ್ತಲೇ ಇದೆ. ಬ್ರಿಟಿಷರು ಭಾರತ ಬಿಟ್ಟುಹೋಗಿದ್ದೇ ತಡ ಚೀನಾ ಟಿಬೆಟ್‌ಅನ್ನು ಕಬಳಿಸಿಕೊಂಡಿತು. ಅದುವರೆಗೂ ನಾರ್ಥ್ ಈಸ್ಟ್ ಫ್ರಾಂಟೀಯರ್ ವಲಯ ಬ್ರಿಟಿಷ್-ಭಾರತದ ವಶದಲ್ಲಿತ್ತು. ಸ್ವಾತಂತ್ರ್ಯಾನಂತರ ಭಾರತದ ಮೇಲೆ ದಾಳಿ ಮಾಡಿದ ಚೀನಾ ಭಾರತದ ಬೆನ್ನಿಗೆ ಚೂರಿ ಹಾಕಿತ್ತು. ನೆಹರೂ ಇದೇ ಕೊರಗಿನಲ್ಲಿ ವಿಧವಶರಾದರು ಎನ್ನುವ ಮಾತೂ ಇದೆ.

1962ರ ಅಕ್ಟೋಬರ್‌ನಿಂದ ನವೆಂಬರ್‌ವರೆಗೂ ಹಿಮಾಲಯದ ಕಣಿವೆಗಳಲ್ಲಿ ಭಾರತ-ಚೀನಾ ಯುದ್ಧ ನಡೆಯಿತು. ಅದನ್ನು ಒಂದು ರೀತಿಯಲ್ಲಿ ‘ಒನ್ ಸೈಡೆಡ್ ವಾರ್’ ಎನ್ನಬಹುದು. ಯಾಕೆಂದರೆ ಭಾರತ ಯಾವ ರೀತಿಯಲ್ಲೂ ಯುದ್ಧ ಮಾಡುವ ಪರಿಸ್ಥಿತಿಯಲ್ಲಿ ಇರಲಿಲ್ಲ. 1960-62ರ ಉದ್ದಕ್ಕೂ ಭಾರತ ಪ್ರಸ್ತಾವಿಸಿದ ರಾಜತಾಂತ್ರಿಕ ವಸಾಹತುಗಳನ್ನು ತಿರಸ್ಕರಿಸಿದ ಚೀನಾ 1962ರ ಎಪ್ರಿಲ್ 30ರ ನಂತರ ಲಡಾಖ್‌ನಲ್ಲಿ ನಿಷೇಧಿಸಲಾಗಿದ್ದ ಫಾರ್ವರ್ಡ್ ಗಸ್ತುಗಳನ್ನು ಮತ್ತೆ ಪ್ರಾರಂಭಿಸಿಬಿಟ್ಟಿತು. ಕ್ಯೂಬನ್ ಕ್ಷಿಪಣಿ ಬಿಕ್ಕಟ್ಟಿನ ನಡುವೆ, ಚೀನಾ 1962ರ ಅಕ್ಟೋಬರ್ 20ರಂದು ಶಾಂತಿಯುತ ಪರಿಹಾರದ ಎಲ್ಲಾ ಪ್ರಯತ್ನಗಳನ್ನು ಕೈಬಿಟ್ಟು ಲಡಾಖ್ ಪ್ರದೇಶದ ಗಡಿಯುದ್ದಕ್ಕೂ ಮತ್ತು ಈಶಾನ್ಯ ಗಡಿಯಲ್ಲಿನ ‘ಮೆಕ್‌ಮೋಹನ್ ರೇಖೆ’ಯ ಉದ್ದಕ್ಕೂ ವಿವಾದಿತ ಪ್ರದೇಶವನ್ನು ಆಕ್ರಮಿಸಿಕೊಂಡಿತು.

ಚೀನಾ ಪಡೆಗಳು ಎರಡೂ ವಲಯಗಳಲ್ಲಿ ಭಾರತೀಯ ಪಡೆಗಳನ್ನು ಹಿಮ್ಮೆಟ್ಟಿಸಿ ಪಶ್ಚಿಮ (ಪಾಕಿಸ್ತಾನ) ಮತ್ತು ಪೂರ್ವ ವಲಯಗಳಲ್ಲಿ ತವಾಂಗ್ ಟ್ರ್ಯಾಕ್‌ನಲ್ಲಿನ ಎಲ್ಲಾ ಪ್ರದೇಶವನ್ನು ವಶಪಡಿಸಿಕೊಂಡುಬಿಟ್ಟಿತು. ಆನಂತರ 1962ರ ನವೆಂಬರ್ 20ರಂದು ತಾನೇ ಕದನ ವಿರಾಮ ಘೋಷಿಸಿ ವಾಸ್ತವಿಕ ನಿಯಂತ್ರಣ ರೇಖೆಗೆ ಹೋಗಿ ನಿಂತುಕೊಂಡುಬಿಟ್ಟಿತು. 13,000 ಅಡಿಗಳ ಎತ್ತರದ ಪರ್ವತ-ಕಣಿವೆಗಳಲ್ಲಿ ಈ ಯುದ್ಧ ನಡೆದಿತ್ತು. ಈ ಯುದ್ಧದಲ್ಲಿ ಎರಡೂ ಕಡೆ ಯಾವುದೇ ನೌಕಾ ಮತ್ತು ವೈಮಾನಿಕ ಅಸ್ತ್ರಗಳನ್ನು ಬಳಸಲಿಲ್ಲ. ಚೀನಾ-ಸೋವಿಯತ್ ವಿಭಜನೆ ಗಾಢವಾಗುತ್ತಿದ್ದಂತೆ ಸೋವಿಯತ್ ಒಕ್ಕೂಟವು ಭಾರತವನ್ನು ಬೆಂಬಲಿಸಲು ಸುಧಾರಿತ ಮಿಗ್ ಯುದ್ಧ ವಿಮಾನಗಳ ಮಾರಾಟಕ್ಕೆ ಪ್ರಯತ್ನ ಮಾಡಿತು. ಅದೇ ಕಾಲಕ್ಕೆ ಅಮೆರಿಕ ಮತ್ತು ಯುನೈಟೆಡ್ ಕಿಂಗ್‌ಡಮ್ ಭಾರತಕ್ಕೆ ಸುಧಾರಿತ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ನಿರಾಕರಿಸಿತು.

 1962ರ ಭಾರತ-ಚೀನಾ ಯುದ್ಧದಲ್ಲಿ ಭಾರತದ 1,383 ಯೋಧರು ಸಾವನ್ನಪ್ಪಿದರೆ, 1,047 ಯೋಧರು ಗಾಯಗೊಂಡಿದ್ದರು. 1,696 ಯೋಧರು ನಾಪತ್ತೆಯಾಗಿ 3,968 ಯೋಧರನ್ನು ಚೀನಾ ಸೆರೆ ಹಿಡಿದಿಕೊಂಡಿತ್ತು. ನಂತರ ಎಲ್ಲರನ್ನೂ ಬಿಡುಗಡೆ ಮಾಡಲಾಯಿತು. ಚೀನಾದ 722 ಯೋಧರು ಪ್ರಾಣ ಕಳೆದುಕೊಂಡು 1,697 ಯೋಧರು ಗಾಯಗೊಂಡಿದ್ದರು ಎನ್ನಲಾಗಿದೆ. ಆದರೆ ಚೀನಾ 4,897 ಭಾರತೀಯ ಯೋಧರನ್ನು ಸಾಯಿಸಿದ್ದಾಗಿ ಹೇಳಿಕೊಂಡಿತು. ಈ ಯುದ್ಧದ ಬಗ್ಗೆ ಹೆಚ್ಚು ತಿಳಿಯಬೇಕಾದರೆ ಜೆ.ಪಿ.ದಳ್ವಿ ಅವರ ‘ಹಿಮಾಲಯನ್ ಬ್ಲಂಡರ್’ ಓದಬಹುದು. ಯುದ್ಧ ನಡೆದ ಸ್ಥಳಗಳು, ಪಾಳುಬಿದ್ದ ಬಂಕರುಗಳು, ಯುದ್ಧದಲ್ಲಿ ಉಪಯೋಗಿಸಿದ ಮದ್ದುಗುಂಡು ಮತ್ತು ಭಾರತೀಯ ಯೋಧರ ಯುದ್ಧ ಸ್ಮಾರಕಗಳು ತವಾಂಗ್ ಸುತ್ತಮುತ್ತಲೂ ಹತ್ತಾರು ಕಡೆ ಹರಡಿಕೊಂಡಿವೆ. ಇದನ್ನೆಲ್ಲ ನೋಡಿದಾಗ ಮನಸ್ಸಿಗೆ ಖೇದ ಎನಿಸುತ್ತದೆ. 

1980ರ ದಶಕದವರೆಗೂ ಚೀನಾ ಯಾವುದೇ ರೀತಿಯಲ್ಲೂ ಭಾರತಕ್ಕೆ ಸಮಾನವಾಗಿರಲಿಲ್ಲ. ಆನಂತರ ಅದು ಅಭಿವೃದ್ಧಿಗೊಂಡ ರೀತಿ ಮಾತ್ರ ಅಮೋಘ. ಆದರೆ ಚೀನಾದ ಭೂವಿಸ್ತರಣೆ ಮತ್ತು ಭೂಕಬಳಿಕೆಯ ಆಸೆ ಮಾತ್ರ ಹೇಸಿಗೆ ಹುಟ್ಟಿಸುತ್ತದೆ. ಇಷ್ಟಕ್ಕೂ ಅರುಣಾಚಲ ಪ್ರದೇಶದ, ಅದೂ ಕೂಡ ಮುಖ್ಯವಾಗಿ ತವಾಂಗ್ ತನಗೆ ಸೇರಿದ ಪ್ರದೇಶ ಎಂದು ಪದೇಪದೇ ಹೇಳಿಕೊಳ್ಳುತ್ತಾ ಭಾರತದ ಗಡಿ ಒಳಕ್ಕೆ ನುಗ್ಗಿ ಘರ್ಷಣೆಗೆ ನಿಲ್ಲುತ್ತದೆ. ಬಹುಶಃ ಇದಕ್ಕೆ ಕಾರಣ ತವಾಂಗ್ ಪ್ರಾಂತ ಯುದ್ಧ ವ್ಯೆಹಾತ್ಮಕ ಸ್ಥಳವಾಗಿರುವುದೇ ಅಲ್ಲದೆ ಅದರ ಅಪಾರವಾದ ಸೊಬಗು ಎನ್ನಬಹುದು! 

ಜಗತ್ತಿನ ಅದೂ ಅಭಿವೃದ್ಧಿ ಹೊಂದಿದ ಅಥವಾ ದೊಡ್ಡಣ್ಣ ದೇಶಗಳಾದ ಅಮೆರಿಕ, ರಶ್ಯ, ಚೀನಾ ಇನ್ನೂ ಕೆಲವು ದೇಶಗಳ ಒಳಗೆ ಯಾವುದೇ ರೀತಿಯ ಆಂತರಿಕ ಕಲಹಗಳು ಹುಟ್ಟಿಕೊಂಡರೆ ತಮ್ಮ ದೇಶಗಳ ಜನರ ಗಮನವನ್ನು ಬೇರೆ ಕಡೆಗೆ ಸೆಳೆಯಲು ಜಗತ್ತಿನ ಯಾವುದೋ ಮೂಲೆಯಲ್ಲಿರುವ ಅಥವಾ ಅಕ್ಕಪಕ್ಕದ ದೇಶಗಳ ಮೇಲೆ ಕಾಲು ಕೆದರಿಕೊಂಡು ಹೋಗುವುದು ವಾಡಿಕೆ. ಜೊತೆಗೆ ಯಾವುದೇ ರಾಜಕೀಯ ನಾಯಕನು ದೇಶದ ಮುಖ್ಯಸ್ಥನಾಗಿಬಿಟ್ಟರೆ ಸಾಕು. ಆತ ಭ್ರಷ್ಟನಾಗಿ ಅತಿಭ್ರಷ್ಟನಾಗಿ ಸಾಯುವವರೆಗೂ ಅಧಿಕಾರದ ಅಮಲನ್ನು ನೆತ್ತಿಗೆ ಏರಿಸಿಕೊಂಡು ದೇಶ ಹಾಳಾದರೂ ಸರಿ ಅಧಿಕಾರವನ್ನು ಮಾತ್ರ ಬಿಡುವುದಿಲ್ಲ. ಈಗ ಬಹಳಷ್ಟು ದೇಶಗಳಲ್ಲಿ ಅದೇ ನಡೆಯುತ್ತಿರುವುದನ್ನು ನಾವು ನೇರವಾಗಿಯೇ ನೋಡುತ್ತಿದ್ದೇವೆ. 

ಇನ್ನು ಪ್ರಸಕ್ತ ಚೀನಾದಲ್ಲಿ ನಡೆಯುತ್ತಿರುವ ಆಂತರಿಕ ಸಮಸ್ಯೆಗಳು, ಕೋವಿಡ್-19ರ ಪುನರಾವರ್ತನೆ ಮತ್ತು ಭಾರತ ಜಿ-20 ಅಧ್ಯಕ್ಷತೆ ವಹಿಸಿರುವುದರ ಹಿನ್ನೆಲೆಯಿಂದ ಚೀನಾ ತನ್ನ ದೇಶದ ಜನರ ಗಮನ ಬೇರೆ ಕಡೆ ಸೆಳೆಯಲು ಹೀಗೆ ಮಾಡುತ್ತಿರಬಹುದು! ಈಗ ಆಡಳಿತದಲ್ಲಿರುವ ಭಾರತ ಸರಕಾರ ಮತ್ತು ವಿರೋಧ ಪಕ್ಷಗಳು ಒಂದುಗೂಡಿ ಚೀನಾದ ವಿರುದ್ಧ ಒಂದು ದೃಢವಾದ ನಿಲುವನ್ನು ತೆಗೆದುಕೊಳ್ಳುವ ಕಾಲ ಸನ್ನಿಹಿತವಾಗಿದೆ. ಅದು ಮುಖ್ಯವಾಗಿ ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳನ್ನು ಸರಕಾರ ನಿಷೇಧಿಸಬೇಕಿದೆ. ಇದುವರೆಗೂ ಜಗತ್ತಿನಲ್ಲಿ ನಡೆದ ನೂರಾರು ಯುದ್ಧಗಳಿಂದ ಜಗತ್ತು ಯಾವುದೇ ಪಾಠ ಕಲಿತುಕೊಂಡಿಲ್ಲ. ನಮ್ಮ ಒಬ್ಬ ಯೋಧನನ್ನೂ ನಾವು ಕಳೆದುಕೊಳ್ಳುವುದು ಬೇಡ. ಈಗ ನಾವೆಲ್ಲ ಉಕ್ರೇನ್ ಪರಿಸ್ಥಿತಿಯನ್ನು ಒಮ್ಮೆ ನೆನೆದುಕೊಳ್ಳಬೇಕಿದೆ.

share
ಡಾ.ಎಂ. ವೆಂಕಟಸ್ವಾಮಿ
ಡಾ.ಎಂ. ವೆಂಕಟಸ್ವಾಮಿ
Next Story
X