ಉಡುಪಿ: ಬೋನಿಗೆ ಬಿತ್ತು ಮರಿಯನ್ನು ಅರಸಿ ಬಂದ ತಾಯಿ ಚಿರತೆ!

ಉಡುಪಿ, ಡಿ.17: ತಾಲೂಕಿನ ಪೆರ್ಡೂರಿನಲ್ಲಿ ಆತಂಕ ಸೃಷ್ಟಿಸಿದ್ದ ತಾಯಿ ಚಿರತೆ ಕೊನೆಗೂ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದೆ.
ಕಳೆದ ಮೂರು ದಿನಗಳಿಂದ ಈ ಹೆಣ್ಣು ಚಿರತೆ ಆತಂಕ ಸೃಷ್ಟಿಸಿತ್ತು.
ಮೂರು ದಿನಗಳ ಹಿಂದೆ ಈ ಭಾಗದಲ್ಲಿ ಚಿರತೆ ಮರಿಯೊಂದನ್ನು ಹಿಡಿದು ಆಗುಂಬೆಗೆ ಬಿಡಲಾಗಿತ್ತು. ಹೀಗಾಗಿ ಈ ತಾಯಿ ಚಿರತೆ ತನ್ನ ಮರಿಯನ್ನು ಅರಸಿಕೊಂಡು ಇಲ್ಲಿಗೆ ಬಂದಿತ್ತು. ಇದರಿಂದಾಗಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಮೂರು ದಿನಗಳಿಂದ ಸಾರ್ವಜನಿಕರ ನಿದ್ದೆಗೆಡಿಸಿದ್ದ ತಾಯಿ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆ ಬೋನು ಇರಿಸಿತ್ತು.
ಅರಣ್ಯ ಇಲಾಖೆ ಹಾಗೂ ಸಾರ್ವಜನಿಕರ ಸಹಕಾರದಿಂದ ಯಶಸ್ವಿ ಕಾರ್ಯಾಚರಣೆ ನಡೆದಿದ್ದು ಚಿರತೆ ಬೋನಿಗೆ ಬಿದ್ದಿದೆ. ಹೀಗಾಗಿ ಸಾರ್ವಜನಿಕರು ನಿರಾಳರಾಗಿದ್ದಾರೆ.










