ಅನೈತಿಕ ಗೂಂಡಾಗಿರಿಗೆ ಮುಖ್ಯಮಂತ್ರಿಯಿಂದಲೇ ಪ್ರೋತ್ಸಾಹ: ಸಿದ್ದರಾಮಯ್ಯ ಆರೋಪ

ಮಂಗಳೂರು, ಡಿ.17: ಅನೈತಿಕ ಪೊಲೀಸ್‌ಗಿರಿಗೆ ಕಾನೂನಿನಲ್ಲಿ ಅವಕಾಶವಿಲ್ಲ. ಆದರೆ ರಾಜ್ಯದ ಮುಖ್ಯಮಂತ್ರಿಯೇ ಇಂತಹ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಹೇಳಿಕೆ ನೀಡುತ್ತಿದ್ದಾರೆ. ಇದು ಖಂಡನಾರ್ಹ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಳ್ತಂಗಡಿ ಭೇಟಿಯ ನಿಮಿತ್ತ ಇಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.
ಕಳೆದ ಎರಡು ತಿಂಗಳ ಅವಧಿಯಲ್ಲಿ ಮಂಗಳೂರಿನಲ್ಲಿ ಏಳೆಂಟು ಅನೈತಿಕ ಗೂಂಡಾಗಿರಿ ನಡೆದಿರುವ ಬಗ್ಗೆ ಮಾಹಿತಿ ದೊರಕಿದೆ. ಇದನ್ನು ನಾನು ಖಂಡಿಸುತ್ತೇನೆ ಮತ್ತು ಅವರ ವಿರುದ್ಧ ಕಠಿಣವಾದ ಕಾನೂನು ಕ್ರಮ ವಹಿಸಬೇಕು. ಆ ರೀತಿ ಅನೈತಿಕ ಗೂಂಡಾಗಿರಿಗೆ ಕಾನೂನಿನಲ್ಲಿ ಯಾವುದೇ ಅವಕಾಶವಿಲ್ಲ. ಮುಖ್ಯಮಂತ್ರಿಗೆ ಕಾನೂನು ಗೊತ್ತಿದೆಯೋ ಗೊತ್ತಿಲ್ಲ. ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಪೊಲೀಸರು ಇರುವುದು. ಸರಕಾರ ಇಂತಹ ಕೃತ್ಯಗಳಿಗೆ ಅವಕಾಶ ನೀಡಬಾರದು. ಆದರೆ ಮುಖ್ಯಮಂತ್ರಿಯೇ ಪ್ರೋತಾಹ ನೀಡುವ ರೀತಿ ಹೇಳಿಕೆ ನೀಡಿದರೆ ಏನಾಗುತ್ತದೆ ಎಂದವರು ಅಸಮಾಧಾನ ವ್ಯಕ್ತಪಡಿಸಿದರು.
ಕುಕ್ಕರ್ ಬಾಂಬ್ ಸ್ಫೋಟದ ಕುರಿತಂತೆ ಡಿಕೆಶಿ ಹೇಳಿಕೆ ವಿರುದ್ಧ ಎದ್ದಿರುವ ಅಭಿಪ್ರಾಯದ ಕುರಿತಂತೆ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಬಿಜೆಪಿಯವರಿಗೆ ಬೇಕಾಗಿರುವುದು ಇಂತಹದ್ದೇ. ಪಕ್ಷದ ಅಧ್ಯಕ್ಷರು ಕುಕ್ಕರ್ ಸ್ಫೋಟ ಪ್ರಕರಣವನ್ನು ಬಿಜೆಪಿಯವರು ದುರುಪಯೋಗ ಮಾಡಿಕೊಂಡಿದ್ದಾರೆ. ರಾಜಕೀಯಕ್ಕೆ ಬಳಸಿಕೊಂಡಿದ್ದಾರೆ. ಡಿಕೆಶಿ ಭಯೋತ್ಪಾದನೆಗೆ ಬೆಂಬಲ ಅಂತ ಹೇಳಿದ್ದಾರೆಯೇ? ಎಂದು ಪ್ರಶ್ನಿಸಿದ ಅವರು, ಬಿಜೆಪಿಯವರು ಅವರ ಹೇಳಿಕೆಯನ್ನು ತಿರುಚಿ ಜನರಿಗೆ ತಪ್ಪು ಮಾಹಿತಿ ನೀಡುವ ಕೆಲಸವನ್ನು ಮಾಡುತ್ತಿದ್ದಾರೆ ಎಂದರು.
ದೇಶದಲ್ಲಿ ಭಯೋತ್ಪಾದನೆ ಚಟುವಟಿಕೆಗಳು ಕಾಂಗ್ರೆಸ್ ಅವಧಿಯಲ್ಲಿ ಜಾಸ್ತಿಯಾಗಿವೆ ಎಂಬ ಬಿಜೆಪಿ ಆರೋಪದ ಕುರಿತಂತೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಉಗ್ರ ಚಟುವಟಿಕೆಯನ್ನು ಇವರು ಹತ್ತಿಕಲಿ. ದೇಶದಲ್ಲಿ ಡಬಲ್ ಇಂಜಿನ್ ಸರಕಾರ ಇದೆಯಲ್ಲ. ಕಳೆದ ಒಂಭತ್ತು ವರ್ಷಗಳಲ್ಲಿ ಇವರಿಗೆ ಅದನ್ನು ಮಾಡಲು ಸಾಧ್ಯವಾಗಿಲ್ಲವೇ? ಇವರಿಗೆ ಅಧಿಕಾರ ಕೊಟ್ಟಿರುವುದು ಅದಕ್ಕಲ್ಲವೇ? ಅದು ಬಿಟ್ಟು ಜನರನ್ನು ಪ್ರಚೋದಿಸಿ ಭಾವನಾತ್ಮಕವಾಗಿ ತಪ್ಪು ದಾರಿಗೆ ಎಳೆಯಲು ಅಧಿಕಾರ ನೀಡಿರುವುದಲ್ಲ ಎಂದು ಅವರು ಹೇಳಿದರು.
ಮಂಗಳೂರು ವಿಮಾನ ನಿಲ್ದಾಣದಿಂದ ಸಿದ್ದರಾಮಯ್ಯಬೆಳ್ತಂಗಡಿಗೆ ನಿರ್ಗಮಿಸಿದರು.ಈ ಸಂದರ್ಭ ಶಾಸಕ ಯು.ಟಿ.ಖಾದರ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಐವನ್ ಡಿಸೋಜ, ಮೊಯ್ದಿನ್ ಬಾವ ಮತ್ತಿತರರು ಉಪಸ್ಥಿತರಿದ್ದರು.