ತೀವ್ರಗೊಳ್ಳುತ್ತಿರುವ ಒಪಿಎಸ್ ಬೇಡಿಕೆಯ ಸುತ್ತಮುತ್ತ
ಇಂದು ರಾಷ್ಟ್ರೀಯ ನಿವೃತ್ತರ ದಿನ

ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಮರುಜಾರಿಗೆ ಬಹುದೊಡ್ಡ ಮಟ್ಟದಲ್ಲಿ ಆಗ್ರಹ ಕೇಳಿಬರುತ್ತಿದೆ. ಹಿಮಾಚಲ ಪ್ರದೇಶದಲ್ಲಿ ಚುನಾವಣಾ ವಿಷಯವಾಗಿ ಕಾಂಗ್ರೆಸ್ ಇದನ್ನು ಪ್ರಸ್ತಾವಿಸಿತ್ತು ಮತ್ತು ಗೆಲುವನ್ನೂ ಸಾಧಿಸಿತು. ಕೇಂದ್ರವು ಜಾರಿಗೊಳಿಸಿರುವ ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ಬದಲಿಸಲು ಸಾಧ್ಯವಿಲ್ಲ ಎಂದು ಕೆಲವು ರಾಜ್ಯಗಳು ಹೇಳುತ್ತಿದ್ದರೂ, ಈಗಾಗಲೇ ರಾಜಸ್ಥಾನ, ಛತ್ತೀಸ್‌ಗಡ, ಜಾರ್ಖಂಡ್ ರಾಜ್ಯಗಳು ಒಪಿಎಸ್ ಜಾರಿಗೊಳಿಸಿವೆ. ಇತ್ತೀಚೆಗೆ ಪಂಜಾಬ್ ಕೂಡ ಒಪಿಎಸ್ ಮರುಜಾರಿ ಪ್ರಸ್ತಾವವನ್ನಿಟ್ಟಿದ್ದು, ಅದು ಕಾರ್ಯರೂಪಕ್ಕೆ ಬಂದರೆ ಪಂಜಾಬ್, ಒಪಿಎಸ್ ಜಾರಿಗೊಳಿಸಿದ ನಾಲ್ಕನೇ ರಾಜ್ಯವಾಗಲಿದೆ. ಕರ್ನಾಟಕದಲ್ಲಿಯೂ ಈಗ ಇದಕ್ಕಾಗಿ ಒತ್ತಾಯಿಸಲಾಗುತ್ತಿದ್ದು, ರಾಜ್ಯಾದ್ಯಂತ ಒಪಿಎಸ್ ಹೋರಾಟ ತೀವ್ರಗೊಳ್ಳತೊಡಗಿದೆ.
ಏನಿದು ಒಪಿಎಸ್ ಮತ್ತು ಎನ್‌ಪಿಎಸ್?
ಒಪಿಎಸ್‌ನಲ್ಲಿ, 10 ವರ್ಷ ಸರಕಾರಿ ಸೇವೆ ಸಲ್ಲಿಸಿದ ನೌಕರರು ಪಿಂಚಣಿಗೆ ಅರ್ಹರಾಗುತ್ತಾರೆ ಮತ್ತು ಇದಕ್ಕಾಗಿ ಅವರು ಯಾವುದೇ ಮೊತ್ತವನ್ನು ಹೂಡಿಕೆ ಮಾಡಬೇಕಾಗಿರುವುದಿಲ್ಲ. ನಿವೃತ್ತಿಯ ಕೊನೆಯಲ್ಲಿ ಪಡೆದ ಸಂಬಳದ ಶೇ.50ರಷ್ಟನ್ನು ತಿಂಗಳ ಪಿಂಚಣಿಯಾಗಿ ಪಡೆಯುವುದಕ್ಕೆ ಅವಕಾಶವಿರುತ್ತದೆ. ಮತ್ತಿಲ್ಲಿ ತಿಂಗಳ ಸಂಬಳದ ಹಾಗೆಯೇ ಪಿಂಚಣಿಯೂ ಏರುತ್ತಲೇ ಇರುತ್ತದೆ. ಇದು ಸರಕಾರಗಳಿಗೆ ಹೊರೆಯಾದರೂ ನೌಕರರಿಗೆ ಲಾಭದಾಯಕ. ಆದರೆ ಎನ್‌ಪಿಎಸ್‌ನಲ್ಲಿ ನೌಕರರು ಸಂಬಳದ ಶೇ.10ರಷ್ಟನ್ನು ಎನ್‌ಪಿಎಸ್ ಖಾತೆಯಲ್ಲಿಡಬೇಕು. ಅದಕ್ಕೆ ಪ್ರತಿಯಾಗಿ ಸರಕಾರವು ಶೇ.14ರಷ್ಟನ್ನು ನೀಡುತ್ತದೆ. ಇದು ಸರಕಾರಿ ವಲಯದ ನೌಕರರಿಗೆ ಮಾತ್ರವಲ್ಲದೆ, ಖಾಸಗಿ ಮತ್ತು ಅಸಂಘಟಿತ ವಲಯದ ನೌಕರರಿಗೂ ಮುಕ್ತವಾಗಿದೆ.
ಒಪಿಎಸ್ ದೊಡ್ಡ ಮಟ್ಟದ ಹಣಕಾಸು ಹೊರೆಗೆ ಕಾರಣವಾಗುತ್ತದೆಂಬ ಕಾರಣದಿಂದ 2003ರಲ್ಲಿ ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ವಾಜಪೇಯಿ ನೇತೃತ್ವದ ಎನ್‌ಡಿಎ ಸರಕಾರ ಎನ್‌ಪಿಎಸ್ ಜಾರಿಗೊಳಿಸಿತು. ನಂತರದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ 2005ರಲ್ಲಿ ಎನ್‌ಪಿಎಸ್ ಅಗತ್ಯವನ್ನು ರಾಜ್ಯಗಳಿಗೆ ಮನವರಿಕೆ ಮಾಡಿಕೊಡುವುದರೊಂದಿಗೆ, 2007ರ ಹೊತ್ತಿಗೆ ಬಹುತೇಕ ರಾಜ್ಯಗಳು ಅದನ್ನು ಅಳವಡಿಸಿಕೊಂಡವು.
ಆದರೆ ಹಳೆಯ ಪದ್ಧತಿಗೇ ಕೆಲವು ರಾಜ್ಯಗಳು ಮರಳಿದ ಬಳಿಕ, ಈಗ ಬಹುತೇಕ ರಾಜ್ಯಗಳಲ್ಲಿ ಒಪಿಎಸ್ ಅಳವಡಿಸಿಕೊಳ್ಳುವುದಕ್ಕೆ ನೌಕರರು ಒತ್ತಾಯಿಸತೊಡಗಿದ್ದಾರೆ. ಇದು ಸರಕಾರಿ ನೌಕರರ ಪ್ರಸಕ್ತ ವೇತನಕ್ಕಿಂತಲೂ ಹೆಚ್ಚಿನ ಹೊರೆಯಾಗುತ್ತದೆ ಎಂಬ ಆತಂಕ ಸರಕಾರಗಳದ್ದಾಗಿದೆ. ಆದರೆ ಒಪಿಎಸ್ ಮರುಜಾರಿ ವಿಚಾರಕ್ಕೆ ಕಾಂಗ್ರೆಸ್, ಆಪ್ ಮೊದಲಾದ ರಾಜಕೀಯ ಪಕ್ಷಗಳು ಬರುವ ಚುನಾವಣೆಯ ಹೊತ್ತಿನಲ್ಲೂ ಹೆಚ್ಚು ಮಹತ್ವ ಕೊಡುವ ಸಾಧ್ಯತೆ ಇದೆ.
ಎನ್‌ಪಿಎಸ್ ಪ್ರಕಾರ ಸೇವೆಯಿಂದ ನಿವೃತ್ತರಾಗುವವರಿಗೆ ಅತ್ಯಂತ ಕಡಿಮೆ ಪಿಂಚಣಿ ಸಿಗಲಿದೆ. ಪಿಂಚಣಿ ವಿಚಾರದಲ್ಲಿ ಸರಕಾರದ ನಿಲುವು ಸಂವಿಧಾನಕ್ಕೆ ವಿರುದ್ಧವಾಗಿದೆ ಎಂಬುದು ನೌಕರರ ಆರೋಪ. ಕಳೆದ ಕೆಲವು ವರ್ಷಗಳಿಂದಲೇ ಒಪಿಎಸ್‌ಗಾಗಿ ಕೇಳಿಬರುತ್ತಿದ್ದ ಒತ್ತಾಯ ಈ ಬಾರಿ ತೀವ್ರತೆ ಪಡೆದಿದೆ. ಈಗಾಗಲೇ ಒಪಿಎಸ್ ಮುಂದುವರಿಸುವ ಕುರಿತು ಮೂರು ರಾಜ್ಯಗಳು ಕೇಂದ್ರಕ್ಕೆ ಬರೆದಿವೆ. ಆಪ್ ಆಡಳಿತವಿರುವ ರಾಜ್ಯಗಳಲ್ಲೂ ಒಪಿಎಸ್ ಜಾರಿ ಚಿಂತನೆ ನಡೆದಿದೆ. ಆದರೆ ಎನ್‌ಪಿಎಸ್ ಅಡಿಯಲ್ಲಿ ಉದ್ಯೋಗಿಗಳು ಮತ್ತು ಸರಕಾರ ಹೂಡಿರುವ ಹಣವನ್ನು ಹಿಂದಿರುಗಿಸುವಂತೆ ಮಾಡಿರುವ ಮನವಿಯನ್ನು ಕೇಂದ್ರ ಸರಕಾರ ತಿರಸ್ಕರಿಸಿದೆ. ಪ್ರಾಧಿಕಾರದ ನಿಯಮದ ಪ್ರಕಾರ ಅದನ್ನು ಹಿಂದಿರುಗಿಸಲು ಸಾಧ್ಯವಿಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಲಾಗಿದೆ ಎಂಬುದು ಕೇಂದ್ರದ ಹೇಳಿಕೆ. ಒಪಿಎಸ್ ಮರುಜಾರಿ ಪ್ರಸ್ತಾಪ ಸರಕಾರದ ಮುಂದೆ ಇಲ್ಲ ಎಂದೂ ಅದು ಹೇಳಿದೆ.
► ನಕರಾ ಪ್ರಕರಣ ಮತ್ತು ನಿವೃತ್ತರ ದಿನ
1982ರ ಡಿಸೆಂಬರ್ 17. ಅವತ್ತು ಸುಪ್ರೀಂ ಕೋರ್ಟ್ ಒಂದು ಮಹತ್ವದ ತೀರ್ಪು ನೀಡಿತ್ತು. ಹಾಗಾಗಿ ಡಿಸೆಂಬರ್ 17 ನಿವೃತ್ತರ ಪಾಲಿಗೆ ಸ್ಮರಣೀಯ ದಿನವಾಗಿ ಉಳಿಯುವಂತಾಯಿತು.
ಆ ಪ್ರಕರಣ ‘ನಕರಾ ಪ್ರಕರಣ’ ಎಂದೇ ಹೆಸರಾಗಿದೆ. ಡಿ.ಎಸ್.ನಕರಾ ರಕ್ಷಣಾ ಸಚಿವಾಲಯದಲ್ಲಿ ಅಧಿಕಾರಿಯಾಗಿದ್ದು, 1972ರಲ್ಲಿ ನಿವೃತ್ತರಾಗಿದ್ದರು. 1979ರ ಮೇ 25ರಂದು ಕೇಂದ್ರ ಸರಕಾರ ಒಂದು ಆದೇಶ ಹೊರಡಿಸಿ, 1979ರ ಮಾರ್ಚ್ 31ರ ನಂತರ ನಿವೃತ್ತರಾದವರಿಗೆ ಉದಾರೀಕೃತ ನಿವೃತ್ತ ಪಿಂಚಣಿ ಯೋಜನೆ ಜಾರಿಗೊಳಿಸಿತ್ತು. ಅದಕ್ಕಿಂತ ಹಿಂದೆ ನಿವೃತ್ತರಾದವರಿಗೆ ಪಿಂಚಣಿ ಪಡೆಯುವ ಅವಕಾಶ ಅದರ ಪ್ರಕಾರ ಇರಲಿಲ್ಲ. ಆಗ ಆ ಆದೇಶದ ವಿರುದ್ಧ ಹೋರಾಟಕ್ಕೆ ನಿಂತವರು ಡಿ.ಎಸ್.ನಕರಾ. ಆದೇಶದ ವಿರುದ್ಧ ನಕರಾ ಅವರು ಸುಪ್ರೀಂ ಕೋರ್ಟ್ ಮೊರೆಹೋದರು.
ಪ್ರಕರಣಕ್ಕೆ ಸಂಬಂಧಿಸಿ ತೀರ್ಪು ನೀಡಿದ್ದವರು ಪ್ರಖ್ಯಾತ ನ್ಯಾಯಾಧೀಶರಾದ ನ್ಯಾ.ವೈ.ವಿ.ಚಂದ್ರಚೂಡ್, ನ್ಯಾ.ಡಿ.ಎ.ದೇಸಾಯಿ, ನ್ಯಾ.ಒ.ಚಿನ್ನಪ್ಪರೆಡ್ಡಿ, ನ್ಯಾ.ವಿ.ಡಿ. ತುಳಸಪುರ್ಕರ್ ಮತ್ತು ನ್ಯಾ.ಬಹ್ರುಲ್ ಇಸ್ಲಾಂ. ತೀರ್ಪು ನಿವೃತ್ತರ ಪರವಾಗಿತ್ತು.
ನಿವೃತ್ತಿ ವೇತನವೆಂಬುದು ಸರಕಾರದ ಔದಾರ್ಯದ ಕೊಡುಗೆಯಲ್ಲ. ಅದು ಸರಕಾರ ನೀಡುವ ದಯಾಭಿಕ್ಷೆಯೂ ಅಲ್ಲ. ನಿವೃತ್ತಿ ಹೊಂದಿದ ಪ್ರತಿಯೊಬ್ಬ ಸರಕಾರಿ ನೌಕರನೂ ಯಾವುದೇ ತಾರತಮ್ಯವಿಲ್ಲದೆ ಪಿಂಚಣಿ ಪಡೆಯಲು ಅರ್ಹ. ನಿವೃತ್ತಿ ವೇತನ ನಿವೃತ್ತ ನೌಕರನ ಹಕ್ಕು ಎಂದು ನ್ಯಾಯಾಧೀಶರು ಪ್ರತಿಪಾದಿಸಿದ್ದರು. 1979ರ ಮಾರ್ಚ್ 31ರ ನಂತರ ನಿವೃತ್ತಿಯಾದವರಿಗೆ ಅಷ್ಟೇ ಅಲ್ಲ, ಹಿಂದೆ ನಿವೃತ್ತರಾದವರಿಗೂ ಉದಾರೀಕೃತ ನಿವೃತ್ತಿ ವೇತನ ಪದ್ಧತಿಯ ಸೌಲಭ್ಯವನ್ನು ನೀಡಬೇಕೆಂದು ನ್ಯಾಯಾಲಯ ಆದೇಶಿಸಿತ್ತು.ಈ ತೀರ್ಪು ಬಂದ ಡಿಸೆಂಬರ್ 17ನ್ನು ನಿವೃತ್ತರ ದಿನವೆಂದು ಆಚರಿಸಲಾಗುತ್ತದೆ.







