ಸುಶಿಕ್ಷಿತರ ಕ್ಷೇತ್ರದಲ್ಲಿ ಮತದಾರರ ಒಲವು ಯಾರ ಕಡೆ?

ಡಾ.ಸಿ.ಎನ್. ಅಶ್ವತ್ಥನಾರಾಯಣ
ಡಾ.ಸಿ.ಎನ್. ಅಶ್ವತ್ಥನಾರಾಯಣ. ವಯಸ್ಸು 53. ಬಿಜೆಪಿ ನಾಯಕ. ಪ್ರಸಕ್ತ ಸರಕಾರದಲ್ಲಿ ಮಂತ್ರಿಯಾಗಿರುವ ಅವರು, ಹಿಂದೆ ಡಿಸಿಎಂ ಕೂಡ ಆಗಿದ್ದರು. ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಲ್ಲಿ ಒಬ್ಬರು. ಮಲ್ಲೇಶ್ವರಂ ಕ್ಷೇತ್ರದಲ್ಲಿ ಸತತ ಮೂರು ಚುನಾವಣೆಗಳನ್ನು ಗೆದ್ದಿರುವುದು ಅವರ ಪ್ರಾಶಸ್ತ್ಯವನ್ನು ಹೆಚ್ಚಿಸಿರುವ ಸಂಗತಿ.
► ಅಶ್ವತ್ಥನಾರಾಯಣ ಗೆಲುವನ್ನು ನಿರಾಯಾಸವಾಗಿಸೀತೇ ಹ್ಯಾಟ್ರಿಕ್ ಹುಮ್ಮಸ್ಸು?
► ಮತದಾರರ ಮಾಹಿತಿ ಕದ್ದ ಆರೋಪದ ಚಿಲುಮೆ ಹಗರಣದ ಎಫೆಕ್ಟ್ ಏನು?
► ಸೋಲುಗಳ ಪಾಠದ ಬಳಿಕ ಹೊಸ ರಣತಂತ್ರವನ್ನು ಹೂಡುವುದೇ ಕಾಂಗ್ರೆಸ್?
► ಒಕ್ಕಲಿಗರ ಪ್ರಾಬಲ್ಯವೂ ಇರುವ ಕಣದಲ್ಲಿ ಜೆಡಿಎಸ್ ಪಾಲಿಗೆ ಏಕಿಲ್ಲ ಗಟ್ಟಿ ನೆಲೆ?
► ಸುಶಿಕ್ಷಿತರ ಕ್ಷೇತ್ರ ಮಲ್ಲೇಶ್ವರಂನಲ್ಲಿ ಮತದಾರರ ಒಲವು ಈ ಸಲ ಯಾರ ಕಡೆ?
ಮಲ್ಲೇಶ್ವರಂ. ಬೆಂಗಳೂರಿನ ಈ ಕ್ಷೇತ್ರ ಒಂದೆಡೆ ಪ್ರತಿಷ್ಠಿತ ಕ್ಷೇತ್ರವಾಗಿರುವಂತೆಯೇ, ಇನ್ನೊಂದೆಡೆ ಸುಶಿಕ್ಷಿತ ಮತದಾರರೇ ಹೆಚ್ಚಿರುವ ಕ್ಷೇತ್ರವೆಂದು ಮಹತ್ವ ಪಡೆದಿದೆ. 2004ರ ಚುನಾವಣೆಯಲ್ಲಿ ಸೋತಿದ್ದ ಬಿಜೆಪಿಯ ಡಾ.ಸಿ.ಎನ್.ಅಶ್ವತ್ಥನಾರಾಯಣ, ಕ್ಷೇತ್ರ ಪುನರ್ವಿಂಗಡಣೆ ಬಳಿಕ 2008, 2013 ಹಾಗೂ 2018ರಲ್ಲಿ ಸತತ ಗೆಲುವು ಸಾಧಿಸಿದ್ದಾರೆ. ಈ ಕ್ಷೇತ್ರ ಬಿಜೆಪಿಯ ಭದ್ರ ಕೋಟೆ ಎನ್ನಿಸಿದೆ.
ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರು ಮತ್ತು ಬ್ರಾಹ್ಮಣರದ್ದೇ ಪ್ರಾಬಲ್ಯವಿರುವುದು ಕೂಡ ಮಲ್ಲೇಶ್ವರಂ ಕ್ಷೇತ್ರದಲ್ಲಿ ಬಿಜೆಪಿ ತನ್ನ ನೆಲೆಯನ್ನು ಗಟ್ಟಿಗೊಳಿಸಿಕೊಳ್ಳುವುದಕ್ಕೆ ನೆರವಾಗಿದೆ. ಆರು ವಾರ್ಡ್‌ಗಳನ್ನು ಹೊಂದಿರುವ ಕ್ಷೇತ್ರದಲ್ಲಿ ಸುಬ್ರಮಣ್ಯನಗರದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊರತುಪಡಿಸಿದರೆ ಉಳಿದೆಲ್ಲ ಕಡೆಯೂ ಬಿಜೆಪಿಯದ್ದೇ ಆಟ.
ಹಿಂದಿನ ಮೂರೂ ಚುನಾವಣೆಗಳಲ್ಲಿನ ಗೆಲುವು ಈ ಬಾರಿ ಅಶ್ವತ್ಥನಾರಾಯಣ ಅವರನ್ನು ಇನ್ನಷ್ಟು ಪ್ರಬಲರನ್ನಾಗಿಸಿದೆ ಎಂಬುದು ನಿಜ. ಈ ಹಿಂದಿನ ಚುನಾವಣೆ ಹೊತ್ತಿನಲ್ಲಿಯೂ ಬ್ರಾಹ್ಮಣರಿಗೆ ಇಲ್ಲಿ ಟಿಕೆಟ್ ಕೊಡುವ ಸಾಧ್ಯತೆಯಿದೆ ಎಂಬ ಮಾತು ಕೇಳಿಬಂದಿತ್ತು. ಆದರೆ ಕಡೆಗೆ ಅಶ್ವತ್ಥನಾರಾಯಣ ಅವರಿಗೇ ಟಿಕೆಟ್ ನೀಡಲಾಗಿತ್ತು. ಮೈತ್ರಿ ಸರಕಾರ ಉರುಳಿಸುವಲ್ಲಿಯೂ ಅಶ್ವತ್ಥನಾರಾಯಣ ಪಾತ್ರ ಮಹತ್ವದ್ದಾಗಿತ್ತು. ಕಾಂಗ್ರೆಸ್ ಶಾಸಕರನ್ನು ದಿಲ್ಲಿಗೆ ಕರೆಸಿಕೊಳ್ಳುವ ಮೊದಲು ಮುಂಬೈನಲ್ಲಿ ಅವರ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಅದರ ಉಸ್ತುವಾರಿ ವಹಿಸಿಕೊಂಡಿದ್ದು ಆಗ ಶಾಸಕರಾಗಿದ್ದ ಅಶ್ವತ್ಥನಾರಾಯಣ ಎಂಬುದು ದೊಡ್ಡ ಸುದ್ದಿಯಾಗಿತ್ತು.
ಮಂತ್ರಿಯಾದ ಬಳಿಕವಂತೂ ಅಶ್ವತ್ಥನಾರಾಯಣ ಹೆಚ್ಚು ಸಲ ಕಾಣಿಸಿಕೊಂಡಿದ್ದು ರಾಮನಗರದಲ್ಲಿ. ಡಿಕೆಎಸ್ ಸಹೋದರರ ವಿರುದ್ಧ ಮತ್ತೆ ಮತ್ತೆ ಮಾತಾಡಿ ಸುದ್ದಿಯಾಗುತ್ತಿದ್ದರು. ರಾಮನಗರದ ಅಭಿವೃದ್ಧಿಯ ಬಗ್ಗೆಯೂ ಒತ್ತು ಕೊಟ್ಟು ಮಾತನಾಡುತ್ತ, ಪ್ರಭಾವವನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿ ತೊಡಗಿದ್ದರು. ಒಮ್ಮೆಯಂತೂ ಸಿಎಂ ಎದುರಲ್ಲೇ ಡಿ.ಕೆ. ಸುರೇಶ್ ಅವರಿಗೂ ಅಶ್ವತ್ಥನಾರಾಯಣ ಅವರಿಗೂ ಮಧ್ಯೆ ಜಟಾಪಟಿಯಾದದ್ದೂ ಸುದ್ದಿಯಾಗಿತ್ತು. ರಾಮನಗರವನ್ನು ಕ್ಲೀನ್ ಮಾಡುತ್ತೇನೆ ಎಂದು ಅವರು ಹೇಳುವುದು, ರಾಮನಗರವನ್ನು ಕ್ಲೀನ್ ಮಾಡುತ್ತೇನೆ ಎಂದು ಬಂದವರು ಎಲ್ಲಿ ಎಂದು ಡಿಕೆಎಸ್ ಸೋದರರು ಕೆಣಕುವುದು ನಡೆಯುತ್ತಲೇ ಇರುತ್ತದೆ.
ಪ್ರಬಲ ಒಕ್ಕಲಿಗ ನಾಯಕನಾಗಿ ಕಾಣಿಸಿಕೊಳ್ಳುವ ಅವರ ಇರಾದೆಗೆ ಇನ್ನಷ್ಟು ಇಂಬು ಕೊಟ್ಟದ್ದು ಬೆಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡರ ಪ್ರತಿಮೆ ಸ್ಥಾಪನೆ ವಿಚಾರ. ಟಿಪ್ಪುವನ್ನು ಬದಿಗೊತ್ತುವ ಮೂಲಕ ಹಿಂದುತ್ವದ ದಾಳ ಉರುಳಿಸಿದ್ದ ಬಿಜೆಪಿಗೆ ಕೆಂಪೇಗೌಡ ಪ್ರತಿಮೆ ವಿಚಾರವನ್ನು ಕೂಡ ಟಿಪ್ಪುವಿಗೆ ಪರ್ಯಾಯವಾಗಿ ಎತ್ತಿಕೊಳ್ಳುವುದು ಆ ಮೂಲಕ ಒಕ್ಕಲಿಗ ಸಮುದಾಯವನ್ನು ಓಲೈಸುವುದು ಕೂಡ ಮುಖ್ಯ ರಾಜಕೀಯ ವಿಚಾರವಾಗಿತ್ತೆನ್ನಲಾಗುತ್ತದೆ. ಚುನಾವಣೆ ಹೊತ್ತಿಗೆ ಒಕ್ಕಲಿಗ ಸಮುದಾಯದ ಗಮನವನ್ನು ಪೂರ್ತಿಯಾಗಿ ತನ್ನತ್ತ ಸೆಳೆಯುವ ತಂತ್ರದ ಭಾಗವಾಗಿ ಕೆಂಪೇಗೌಡ ಪ್ರತಿಮೆ ವಿಚಾರ ಅದಕ್ಕೆ ಮುಖ್ಯವಾಗಿತ್ತೆಂಬ ಮಾತುಗಳಿವೆ. ಹಳೇ ಮೈಸೂರಿನಲ್ಲಿ ಒಕ್ಕಲಿಗ ಸಮುದಾಯ ಅಧಿಕ ಸಂಖ್ಯೆಯಲ್ಲಿದೆ. ಅಲ್ಲದೆ ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಹಾಸನ ಜಿಲ್ಲೆಗಳ ಒಕ್ಕಲಿಗ ಮತಬ್ಯಾಂಕ್ ಮೇಲೆಯೂ ಈ ಮೂಲಕ ಪ್ರಭಾವ ಬೀರಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ.
ಕೆಂಪೇಗೌಡರ ಬೃಹತ್ ಪ್ರತಿಮೆ ನಿಲ್ಲಿಸುವುದಕ್ಕೆ ರಾಜ್ಯದ ವಿವಿಧೆಡೆಯಿಂದ ಮಣ್ಣು ಸಂಗ್ರಹಣೆ ಅಭಿಯಾನ ನಡೆಸುವ ಮೂಲಕವೂ ಅಶ್ವತ್ಥನಾರಾಯಣ ಮಿಂಚಿದ್ದರು. ಕೆಂಪೇಗೌಡ ಪ್ರತಿಮೆ ನಿರ್ಮಾಣ ವಿಚಾರವನ್ನು ಅಶ್ವತ್ಥನಾರಾಯಣ ಅವರ ಕನಸಿನ ಕೂಸು ಎಂದೇ ಬಿಜೆಪಿ ವಲಯದಲ್ಲಿ ಬಣ್ಣಿಸಲಾಗುತ್ತಿದೆ. ಹೀಗೆ ಹಲವು ಬಗೆಯಲ್ಲಿ ಒಕ್ಕಲಿಗ ನಾಯಕನೆಂದು ಬಿಂಬಿಸಿಕೊಳ್ಳುವ ಪ್ರಯತ್ನವನ್ನು ಅಶ್ವತ್ಥನಾರಾಯಣ ಮಾಡುತ್ತಲೇ ಬಂದಿದ್ದಾರೆ.
ಈ ನಡುವೆ ಅಶ್ವತ್ಥನಾರಾಯಣ ಅವರಿಗೆ ‘ಚಿಲುಮೆ’ ಕಂಟಕವೊಂದು ಕಾಡುವ ಸಾಧ್ಯತೆ ಇಲ್ಲದೇ ಇಲ್ಲ. ಚಿಲುಮೆ ಎಂಬ ಎನ್‌ಜಿಒ ಮತದಾರರ ಜಾಗೃತಿ ಹೆಸರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಮತದಾರರ ಮಾಹಿತಿಯನ್ನು ಅಕ್ರಮವಾಗಿ ಸಂಗ್ರಹಿಸಿದೆ ಎಂಬ ಆರೋಪ ಗಂಭೀರ ಸ್ವರೂಪ ಪಡೆದಿದೆ. ಸರಕಾರದ ಕಣ್ಣಳತೆಯಲ್ಲಿಯೇ ನಡೆದ ಈ ಹಗರಣದಲ್ಲಿ ಮತದಾರರ ಮಾಹಿತಿಯನ್ನು ಮಾರಿಕೊಳ್ಳಲಾಗಿರುವ ಆತಂಕವೂ ವ್ಯಕ್ತವಾಗಿದೆ. ಚಿಲುಮೆ ಮುಖ್ಯಸ್ಥ ರವಿಕುಮಾರ್ ಮತ್ತು ಸಚಿವ ಅಶ್ವತ್ಥನಾರಾಯಣ ಮಧ್ಯೆ ಅವಿನಾಭಾವ ಸಂಬಂಧ ಇದೆಯೆಂಬ ಆರೋಪವನ್ನೂ ಕಾಂಗ್ರೆಸ್ ಈಗಾಗಲೇ ಮಾಡಿದೆ. ರವಿಕುಮಾರ್ ಹುಟ್ಟುಹಬ್ಬದಲ್ಲಿ ಅಶ್ವತ್ಥನಾರಾಯಣ ಪಾಲ್ಗೊಂಡಿದ್ದರು ಎಂದೂ ಕಾಂಗ್ರೆಸ್ ಆರೋಪಿಸಿತ್ತು. ಮತದಾರರ ಮಾಹಿತಿ ಕಳವಿಗೆ ಬಿಜೆಪಿಯೇ ಚಿಲುಮೆ ಸಂಸ್ಥೆಯನ್ನು ಬಳಸಿಕೊಂಡಿರುವುದಕ್ಕೆ ಇನ್ನಾವ ಸಾಕ್ಷಿ ಬೇಕು ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಇದೆಲ್ಲದರ ಮಧ್ಯೆ ಚಿಲುಮೆ ಸಂಸ್ಥೆಯ ಕಚೇರಿ ಮೂಡ ಮಲ್ಲೇಶ್ವರಂನಲ್ಲಿಯೇ ಇದೆಯೆಂಬುದು ಕೂಡ ಗಮನಿಸಬೇಕಾದ ಸಂಗತಿ.
ಚಿಲುಮೆ ಹಗರಣವನ್ನೇ ಚುನಾವಣೆ ವೇಳೆಯೂ ಕಾಂಗ್ರೆಸ್ ತನ್ನ ಪ್ರಬಲ ಅಸ್ತ್ರವಾಗಿ ಬಳಸಲಿದೆ ಎಂಬುದರಲ್ಲಿ ಸಂಶಯವಿಲ್ಲ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಂತೂ ಇದನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿರುವುದು ಸ್ಪಷ್ಟ.
ಇನ್ನು ಜೆಡಿಎಸ್ ಇಲ್ಲಿ ಎದುರಾಳಿಯ ಯಾವುದೇ ಪಟ್ಟುಗಳನ್ನು ಉರುಳಿಸುವ ಸಾಧ್ಯತೆ ಕಡಿಮೆ. ಅದರ ಪ್ರಾಬಲ್ಯವೂ ಈ ಕ್ಷೇತ್ರದಲ್ಲಿ ಅಷ್ಟಾಗಿ ಇಲ್ಲ. ಬಿಜೆಪಿ ಎದುರಾಳಿಯಾಗಿ ನಿಲ್ಲುವುದು ಕಾಂಗ್ರೆಸ್ ಮಾತ್ರ. ಈ ಸಲದ ಪೈಪೋಟಿಯಲ್ಲಿ ಈ ಅಖಾಡದಲ್ಲಿ ಆಟ ಯಾರದು ಎಂಬುದನ್ನಷ್ಟೇ ಕಾದುನೋಡಬೇಕು.







