ಎರಡನೇ ಬಾರಿ ಐರ್ಲೆಂಡ್ ಪ್ರಧಾನಿಯಾಗಿ ಭಾರತ ಮೂಲದ ಡಾ. ಲಿಯೊ ವರಾಡ್ಕರ್ ಆಯ್ಕೆ

ಡಬ್ಲಿನ್: ಭಾರತ ಮೂಲದ ಡಾ. ಲಿಯೊ ವರಾಡ್ಕರ್ (Leo Varadkar) ಎರಡನೆ ಬಾರಿಗೆ ಐರ್ಲೆಂಡ್ ಪ್ರಧಾನಿಯಾಗಿ ಆಯ್ಕೆಯಾಗಿದ್ದು, ಈ ವಾರಾಂತ್ಯ ಅಧಿಕಾರ ಸ್ವೀಕರಿಸಲಿದ್ದಾರೆ. 2020ರ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಅವರೀಗ ಪುನಃ ಪ್ರಧಾನಿಯಾಗಿದ್ದಾರೆ.
ಕೋವಿಡ್- 19 ಸಾಂಕ್ರಾಮಿಕದ ಆರಂಭದ ದಿನಗಳು, ಬ್ರೆಕ್ಸಿಟ್‌ನಿಂದ ನಿರ್ಗಮನ ಹಾಗೂ ವಸತಿ ವಲಯದ ಬಿಕ್ಕಟ್ಟಿನಂಥ ಚಿರಪರಿಚಿತ ಕಾರಣಗಳಿಂದಾಗಿ ಡಾ. ಲಿಯೊ ವರಾಡ್ಕರ್ 2020ರ ಜೂನ್‌ನಲ್ಲಿ ಅಧಿಕಾರ ತ್ಯಜಿಸಿದ್ದರು. ಅಲ್ಲಿಂದ ಇಲ್ಲಿವರೆಗೆ ಸಾಕಷ್ಟು ಬದಲಾವಣೆಗಳಾಗಿವೆ.
ಫೈನ್ ಗೇಲ್ ಪಕ್ಷದ ಡಾ. ಲಿಯೊ ವರಾಡ್ಕರ್ ಅವರು ಫಿಯನ್ನಾ ಫೈಲ್ ಪಕ್ಷದ ಮೈಕೇಲ್ ಮಾರ್ಟಿನ್ ಅವರಿಂದ ಅಧಿಕಾರ ಮರಳಿ ಪಡೆಯುತ್ತಿದ್ದು, ಸಂಸತ್ತಿನ ಉಳಿದ ಅರ್ಧ ಅವಧಿಗೆ ಪ್ರಧಾನಿಯಾಗಲಿದ್ದಾರೆ. ಚಾರಿತ್ರಿಕ ವಿರೋಧ ಪಕ್ಷಗಳಾದ ಫೈನ್ ಗೇಲ್ ಹಾಗೂ ಫಿಯನ್ನಾ ಪಕ್ಷಗಳ ನಡುವೆ ಅಧಿಕಾರ ಹಂಚಿಕೆಯ ಒಡಂಬಡಿಕೆ ಆಗಿದ್ದು, ಈ ಸಮ್ಮಿಶ್ರ ಸರ್ಕಾರಕ್ಕೆ ಗ್ರೀನ್ಸ್ ಪಕ್ಷ ಬಾಹ್ಯ ಬೆಂಬಲ ನೀಡಿದೆ.
ಮಾರ್ಟಿನ್ ಅಧೀನದಲ್ಲಿ ಉಪ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದ ವರಾಡ್ಕರ್, ರಷ್ಯಾ-ಉಕ್ರೇನ್ ನಡುವೆ ನಡೆಯುತ್ತಿರುವ ಯುದ್ಧದಿಂದ ತೀವ್ರ ಜೀವನ ವೆಚ್ಚ ಏರಿಕೆ, ದುಬಾರಿ ವಿದ್ಯುತ್ ದರಗಳಿಂದ ಐರ್ಲೆಂಡ್ ಜನತೆ ಕಂಗೆಟ್ಟಿರುವ ಸಮಯದಲ್ಲಿ ಪ್ರಧಾನಿಯಾಗಿ ಅಧಿಕಾರಿ ಸ್ವೀಕರಿಸುತ್ತಿದ್ದಾರೆ. ಈ ನಡುವೆ ನಿರಾಶ್ರಿತರು ಐರ್ಲೆಂಡ್‌ಗೆ ವಲಸೆ ಬರುತ್ತಿರುವುದರಿಂದ ವಸತಿ ವ್ಯವಸ್ಥೆ ಕೊರತೆ ಬಿಗಡಾಯಿಸಿದ್ದು, ಈ ಕುರಿತು ತೀವ್ರ ಕಳವಳ ವ್ಯಕ್ತವಾಗುತ್ತಿದೆ.
ಮಾರ್ಚ್ 2025ರಲ್ಲಿ ಐರ್ಲೆಂಡ್ ಸಂಸತ್ತಿಗೆ ಚುನಾವಣೆ ನಡೆಯಲಿದ್ದು, ಆ ಹೊತ್ತಿಗೆ ಪ್ರಗತಿಯನ್ನು ಸಾಧಿಸಲು ವಸತಿ ವಲಯದ ಕುರಿತ ಆದ್ಯತಾ ನೀತಿಯನ್ನು ಮರು ಹೊಂದಾಣಿಕೆ ಮಾಡಿಕೊಳ್ಳಬೇಕಿರುವುದು ಸರ್ಕಾರದ ಮುಂದಿನ ಸವಾಲಾಗಿದೆ. ವಸತಿ ಕೊರತೆಯು ದಶಕಗಳಿಂದ ಮುಂದುವರಿದುಕೊಂಡು ಬಂದಿದ್ದು, ಮುಂದಿನ ವರ್ಷ ಹೊಸ ಕಟ್ಟಡಗಳ ನಿರ್ಮಾಣ ಕಾಮಗಾರಿ ಕುಸಿಯಲಿದೆ ಎಂಬ ಮುನ್ಸೂಚನೆ ಇದೆ. ಹೀಗಾಗಿ ವರದ್ಕರ್ ಸರ್ಕಾರವು ಮೊದಲಿಗೆ ಯೋಜನಾ ಮಸೂದೆಯನ್ನು ಜಾರಿಗೊಳಿಸುವ ಇರಾದೆ ಹೊಂದಿದೆ.