ಗೃಹ ರಕ್ಷಕ ದಳಕ್ಕೆ ಸೂಕ್ತ ಸೌಲಭ್ಯಗಳು ಅತಿಅಗತ್ಯ: ವಸಂತ ಕುಮಾರ

ಉಡುಪಿ, ಡಿ.17: ಗೃಹರಕ್ಷಕ ದಳ ಅಗ್ನಿ ಶಾಮಕ ದಳ, ಪೊಲೀಸ್ ವಿಭಾಗವು ಜನರ ಸುರಕ್ಷತೆ, ನಾಗರಿಕ ಸೇವೆಯಲ್ಲಿ ಸರಿಸಮಾನವಾಗಿ ಕೆಲಸ ನಿರ್ವಹಿಸುತ್ತದೆ. ಗೃಹ ರಕ್ಷಕ ದಳಕ್ಕೆ ಸವಲತ್ತು, ಸೌಲಭ್ಯಗಳು ಸೂಕ್ತವಾಗಿ ದೊರೆತಲ್ಲಿ ಇನ್ನಷ್ಟು ನೈಪುಣ್ಯತೆಯಿಂದ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ಉಡುಪಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಎಚ್.ಎಂ.ವಸಂತ್ ಕುಮಾರ ಹೇಳಿದ್ದಾರೆ.
ಉಡುಪಿ ಜಿಲ್ಲಾ ಗೃಹ ರಕ್ಷಕ ದಳ ವತಿಯಿಂದ ಶನಿವಾರ ಕಚೇರಿ ಆವರಣದಲ್ಲಿ ಆಯೋಜಿಸಲಾದ ‘ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ’ಯನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಕಾಪು ನಿವೃತ್ತ ಘಟಕಾಧಿಕಾರಿ ಲಕ್ಷ್ಮೀನಾರಾಯಣ ರಾವ್, ಕುಂದಾಪುರ ಘಟಕದ ನಿವೃತ್ತ ಪ್ಲಟೂನ್ ಸರ್ಜಂಟ್ ಕೆ.ಬಿ.ಶ್ರೀನಿವಾಸ್ ಹಾಗೂ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಜರಗಿದ ರಾಜ್ಯಮಟ್ಟದ ಗೃಹ ರಕ್ಷಕರ ವೃತ್ತಿಪರ ಮತ್ತು ಕ್ರೀಡಾಕೂಟದಲ್ಲಿ ಪ್ರಥಮ ಚಿಕಿತ್ಸೆಯಲ್ಲಿ ಪ್ರಥಮ ಸ್ಥಾನ ಮತ್ತು ಅಗ್ನಿ ಶಾಮನ ತರಬೇತಿಯಲ್ಲಿ ದ್ವಿತೀಯ ಸ್ಥಾನ ವಿಜೇತರಾದ ಪ್ರಸಾದ್, ಶಿವಪ್ರಸಾದ್, ರಾಜೇಶ್ ಪೂಜಾರಿ, ಸದಾನಂದ ಅವರನ್ನು ಮತ್ತಯ ಅಪಘಾತ ಸಂದರ್ಭ ಸಾರ್ವಜನಿಕ ಪ್ರಾಣ ರಕ್ಷಣೆಗಾಗಿ ಪ್ರಶಂಸನಾ ಪತ್ರ ಪಡೆದ ಮಂಜುನಾಥ್ ಅವರನ್ನು ಸನ್ಮಾನಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಮಾಂಡೆಂಟ್ ಡಾ.ಕೆ.ಪ್ರಶಾಂತ್ ಶೆಟ್ಟಿ ವರದಿ ವಾಚಿಸಿದರು. ಕಚೇರಿ ಅಧೀಕ್ಷಕಿ ಕವಿತಾ ಕೆ.ಸಿ. ಉಪಸ್ಥಿತರಿದ್ದರು. ಡೆಪ್ಯೂಟಿ ಕಮಾಂಡೆಂಟ್ ರಮೆಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸೆಕೆಂಡ್ ಇನ್ ಕಮಾಂಡ್ ಕೆ.ಸಿ.ರಾಜೇಶ್ ಸ್ವಾಗತಿಸಿದರು. ಕಮಾಂಡೆಂಟ್ ಕಚೇರಿ ಎಫ್‌ಡಿಎ ಶ್ಯಾಮಲಾ ವಂದಿಸಿ, ಸಾಯಿನಾಥ್ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.







