ನೇಕಾರಿಕೆ ಉದ್ಯಮಗಳಿಗೆ ಶೇ.50ರ ಸಹಾಯಧನ: ಮುಖ್ಯಮಂತ್ರಿ ಬೊಮ್ಮಾಯಿ
'ನೇಕಾರರಿಗೂ ಕಟ್ಟಡ ನಿರ್ಮಾಣ ಕಾರ್ಮಿಕರ ಸೌಲಭ್ಯ ವಿಸ್ತರಣೆ'

ಬೆಂಗಳೂರು, ಡಿ. 17: ‘ನೇಕಾರ ಸಮುದಾಯದವರು, ನೇಕಾರಿಕೆಗೆ ಸಂಬಂಧಿಸಿದ ಉದ್ಯಮಗಳನ್ನು ಆರಂಭಿಸುವವರಿಗೆ ಸರಕಾರದ ವತಿಯಿಂದ ನೀಡುವ ಸಹಾಯಧನವನ್ನು ಶೇ.30ರಿಂದ ಶೇ.50ಕ್ಕೆ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ಶನಿವಾರ ಸಿಎಂ ನಿವಾಸದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ಸಚಿವರು, ಶಾಸಕರು ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ವಿದ್ಯುತ್ ಮಗ್ಗಗಳಲ್ಲಿ ಕಾರ್ಯನಿರ್ವಹಿಸುವ ಕೂಲಿಕಾರರಿಗೆ ‘ನೇಕಾರ ಸಮ್ಮಾನ್ ಯೋಜನೆ’ಯನ್ನು ವಿಸ್ತರಿಸಲಾಗುವುದು. ನೇಕಾರರ ಜನವಸತಿ ಪ್ರದೇಶದಲ್ಲಿರುವ ನೇಕಾರರಿಗೆ ವಾಸ್ತವ್ಯ ಪ್ರಮಾಣ ಪತ್ರವನ್ನು ನೀಡಲಾಗುವುದು ಎಂದು ಘೋಷಿಸಿದರು.
ಮನೆಯಲ್ಲಿಯೇ ಉದ್ಯೋಗ ನಡೆಸುತ್ತಿರುವ ನೇಕಾರರಿಗೆ ‘ಗುಡಿ ಕೈಗಾರಿಕೆ’ಗಳೆಂದು ಪರಿಗಣಿಸಿ, ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿಯಿಂದ ವಿನಾಯಿತಿ ನೀಡಲು ಆದೇಶ ಹೊರಡಿಸಲಾಗುವುದು. ಸರಕಾರದ ನೇಕಾರ(ಕೈಮಗ್ಗ ಮತ್ತು ವಿದ್ಯುತ್ ಚಾಲಿತ) ನಿಗಮಗಳ ಉತ್ಪಾದನಾ ಸಾಮಥ್ರ್ಯದ ಅನುಗುಣವಾಗಿ ವಿದ್ಯಾವಿಕಾಸ ಯೋಜನೆಯಡಿ ಸಮವಸ್ತ್ರ ಪೂರೈಕೆ ಪ್ರಮಾಣ ನಿಗದಿಪಡಿಸಿ, ಉಳಿದ ಪ್ರಮಾಣಕ್ಕೆ ಟೆಂಡರ್ ಕರೆಯಲಾಗುವುದು. ಮಗ್ಗಗಳಿಂದಲೇ ಬಟ್ಟೆ ಖರೀದಿಗೆ ಡಿಸೆಂಬರ್‍ನಲ್ಲೇ ಕಾರ್ಯಾದೇಶ ನೀಡಿ, ಸಕಾಲದಲ್ಲಿ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳ ಸಮವಸ್ತ್ರದ ಅಗತ್ಯತೆಯ ಶೇ.25ರಷ್ಟನ್ನು ಕೈಮಗ್ಗ ನಿಗಮದ ಮೂಲಕ ಖರೀದಿ ಮಾಡಲಾಗುವುದು. ನೇಕಾರರಿಗೆ 2ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಒದಗಿಸಲಾಗುವುದು. ಐದು ಅಶ್ವಶಕ್ತಿ(ಎಚ್‍ಪಿ) ವರೆಗಿನ ವಿದ್ಯುತ್ ಸಂಪರ್ಕ ಹೊಂದಿರುವ ವಿದ್ಯುತ್ ಮಗ್ಗ ಹಾಗೂ ಮಗ್ಗ ಪೂರ್ವ ಘಟಕಗಳಿಗೆ ತಮಿಳುನಾಡು ಮಾದರಿಯಲ್ಲಿ ಉಚಿತ ವಿದ್ಯುತ್ ಒದಗಿಸಲಾಗುವುದು. ವಿದ್ಯುತ್ ನಿಶ್ಚಿತ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಟ್ಟಡ ಕಾರ್ಮಿಕರ ಸೌಲಭ್ಯ: ನೇಕಾರರನ್ನು ಅಸಂಘಟಿತ ವಲಯದಲ್ಲಿ ಸೇರಿಸಿ, ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ವೃತ್ತಿಪರ ಕೂಲಿ ನೇಕಾರರಿಗೂ ವಿಸ್ತರಿಸುವ ಬಗ್ಗೆ ಪರಿಶೀಲಿಸಿ, ಮುಂದಿನ ಆಯವ್ಯಯದ ಮಂಡನೆಯ ಈ ಕುರಿತು ತೀರ್ಮಾನ ಮಾಡಲಾಗುವುದು ಎಂದು ಅವರು ಹೇಳಿದರು.
ಸಭೆಯಲ್ಲಿ ಜವಳಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಕೆಎಚ್‍ಡಿಸಿ ಅಧ್ಯಕ್ಷ ಸಿದ್ದು ಸವದಿ, ಶಾಸಕರಾದ ಅಭಯ್ ಪಾಟೀಲ್, ಮಹದೇವಪ್ಪ ಯಾದವಾಡ, ಮಾಜಿ ಶಾಸಕ ಎಂ.ಡಿ.ಲಕ್ಷ್ಮೀನಾರಾಯಣ, ಅಭಿವೃದ್ಧಿ ಆಯುಕ್ತ ಐಎಸ್‍ಎನ್ ಪ್ರಸಾದ್, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಸಣ್ಣ ಕೈಗಾರಿಕಾ ಇಲಾಖೆ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ ಸೇರಿದಂತೆ ಇನ್ನಿತರ ಅಧಿಕಾರಿಗಳು ಇದ್ದರು.







