ಮಂಡ್ಯ: ವೇದಿಕೆಯಲ್ಲಿ ಜೆಡಿಎಸ್ ಮುಖಂಡ -ಸಚಿವ ನಾರಾಯಣಗೌಡ ನಡುವೆ ವಾಗ್ವಾದ
ಕರವೇ ನಾರಾಯಣಗೌಡರಿಂದ ರಾಜಕೀಯ ಮುಖಂಡರ ತರಾಟೆ

ಮಂಡ್ಯ, ಡಿ.17: ಕರ್ನಾಟಕ ರಕ್ಷಣಾ ವೇದಿಕೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದ ವೇಳೆ ಜೆಡಿಎಸ್ ಮುಖಂಡ ಬಸ್ ಸಂತೋಷ್ ಹಾಗೂ ಸಚಿವ ನಾರಾಯಣಗೌಡ ವಾಗ್ವಾದ ನಡೆಸಿದ ದೃಶ್ಯದ ವಿಡೀಯೋ ವೈರಲ್ ಆಗಿದೆ.
ಕೆ.ಆರ್.ಪೇಟೆಯಲ್ಲಿ ಮೂರು ದಿನದ ಹಿಂದೆ ನಡೆದ ಕಾರ್ಯಕ್ರಮದ ವೇಳೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ರಾಜಕೀಯ ವಿಚಾರ ತಂದು ವಾಗ್ವಾದ ನಡೆಸಿದ ರಾಜಕೀಯ ಮುಖಂಡರ ನಡೆಗೆ ಕಾರ್ಯಕ್ರಮ ಆಯೋಜಕರು ಬೇಸರ ವ್ಯಕ್ತಪಡಿಸಿದ್ದಾರೆ.
ಬಸ್ ಸಂತೋಷ್ ಮಾತನಾಡುತ್ತಾ, ಹಿಂದೆ ಆಲಿಬಾಬ ತನ್ನ ಜತೆ ನಲ್ವತ್ತು ಕಳ್ಳರನ್ನು ಇಟ್ಟುಕೊಂಡಿದ್ದಂತೆ, ಕೆ.ಆರ್.ಪೇಟೆಯಲ್ಲೊಬ್ಬ ಅಲಿಬಾಬ ನಾಲ್ಕು ಜನ ಇಟ್ಟುಕೊಂಡಿದ್ದಾನೆ ಎಂದು ಪರೋಕ್ಷವಾಗಿ ಸಚಿವ ನಾರಾಯಣಗೌಡ ಅವರನ್ನು ಟೀಕಿಸಿದರು.
ಇದರಿಂದ ಕೆರಳಿದ ಸಚಿವ ನಾರಾಯಣಗೌಡ, ಸಂತೋಷ್ ಮಾತಿಗೆ ಆಕ್ಷೇಪ ವ್ಯಕ್ತಪಡಿಸಿದರು. ಯಾರು ಭ್ರಷ್ಟಾಚಾರಿ? ಯಾರು ಅಲಿಬಾಬ? ಎಂದು ಪ್ರಶ್ನಿಸುತ್ತಾ ಸಂತೋಷ್ ಕಡೆಗೆ ನುಗ್ಗಿದರು. ಇಬ್ಬರೂ ಏರಿದ ದನಿಯಲ್ಲಿ ಪರಸ್ಪರ ವಾಗ್ವಾದ ನಡೆಸಿದರು. ವೇದಿಕೆಯಲ್ಲಿದ್ದ ಮುಖಂಡರು ಇಬ್ಬರನ್ನೂ ಸಮಾಧಾನಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ನಂತರ, ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ಕನ್ನಡ ರಾಜ್ಯೋತ್ಸವದ ವೇದಿಕೆಯಲ್ಲಿ ರಾಜಕೀಯ ವಿಚಾರ ಪ್ರಸ್ತಾಪಿಸಿ ಎರಡು ಪಕ್ಷಗಳ ಮುಖಂಡರು ವಾಗ್ವಾದ ನಡೆಸಿದ್ದನ್ನು ಖಂಡಿಸಿದರು. ಇನ್ನು ಮುಂದೆ ಇಂತಹ ಕಾರ್ಯಕ್ರಮಕ್ಕೆ ರಾಜಕಾರಣಿಗಳನ್ನು ಕರೆಯಬೇಡಿ ಎಂದು ಆಯೋಜಕರಿಗೆ ತಾಕೀತು ಮಾಡಿದರು.
ಕನ್ನಡ ನಾಡು, ನುಡಿ, ಕನ್ನಡಿಗರ ರಕ್ಷಣೆಗಾಗಿ ಜೈಲಿಗೆ ಹೋದವರು ತನ್ನಂತಹ ಕನ್ನಡ ಹೋರಾಟಗಾರರೇ ಹೊರತು ಜೆಡಿಎಸ್, ಕಾಂಗ್ರೆಸ್, ಬಿಜೆಪಿಯ ರಾಜಕಾರಣಿಗಳಲ್ಲ ಎಂದು ವೇದಿಕೆಯಲ್ಲಿದ್ದ ರಾಜಕೀಯ ಮುಖಂಡರ ವಿರುದ್ಧ ಅವರು ವಾಗ್ದಾಳಿ ನಡೆಸಿದರು.
ಮೊನ್ನೆ ಗಡಿ ವಿಚಾರವಾಗಿ ಬೆಳಗಾವಿಯಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯದ ವೇಳೆ ಅಲ್ಲಿಗೆ ಸಾವಿರಾರು ಕನ್ನಡ ಹೋರಾಟಗಾರರು ತೆರಳಿ ಮಹಾರಾಷ್ಟ್ರದ ಶಾಸಕರು, ಮಂತ್ರಿಗಳು ಬೆಳಗಾವಿಗೆ ಬರದಂತೆ ತಡೆದರು. ಯಾವ ರಾಜಕೀಯ ಪಕ್ಷದ ನಾಯಕರೂ ಬರಲಿಲ್ಲ ಎಂದೂ ಅವರು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ಕನ್ನಡ ಭಾಷೆ ಮತ್ತು ಕನ್ನಡಿಗರ ಮೇಲೆ ನಡೆಯುತ್ತಿರುವ ದಾಳಿ ಬಗ್ಗೆ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದರು. ಕನ್ನಡ ಭಾಷೆ ಮತ್ತು ಕನ್ನಡಿಗರಿಗೆ ನ್ಯಾಯ ದೊರಕಿಸುವ ಕೆಲಸವನ್ನು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವ ಸರಕಾರಗಳೂ ಮಾಡುತ್ತಿಲ್ಲ ಎಂದು ಆರೋಪಿಸಿದರು.







