ಹಿಂಸೆ ನೀಡಿ ಕೇರಳದ ಕಾರ್ಮಿಕನ ಆತ್ಮಹತ್ಯೆಗೆ ಪ್ರಚೋದನೆ: ಪ್ರಕರಣ ದಾಖಲು
ಕಾರ್ಕಳ, ಡಿ.17: ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ಕೇರಳ ಮೂಲದ ಕಾರ್ಮಿಕರೊಬ್ಬರಿಗೆ ಮಾಲಕರು ಹಿಂಸೆ ನೀಡಿ ಆತ್ಮಹತ್ಯೆ ಮಾಡಲು ಪ್ರಚೋದಿಸಿರುವುದಾಗಿ ಮೃತರ ಪತ್ನಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿಗಳಾದ ಆರ್.ವಿವೇಕಾನಂದ ಶೆಣೈ ಮತ್ತು ದಿಲೀಪ್ ಜಿ. ಎಂಬವರು ಕೇರಳ ರಾಜ್ಯದ ಮಲ್ಲಪುರಂನ ಟಿ.ಕೆ.ಗೋಪಿನಾಥನ್ ನಾಯರ್ ಎಂಬವರನ್ನು ಸಾಣೂರು ಗ್ರಾಮದ ಶುಂಟಿಗುಡ್ಡೆ ಎಂಬಲ್ಲಿರುವ ರಬ್ಬರ್ ಪ್ಲಾಂಟೇಷನ್‌ನಲ್ಲಿ ಟ್ಯಾಪರ್ ಕೆಲಸಕ್ಕೆ ನೇಮಕ ಮಾಡಿ ಅಲ್ಲಿಯೇ ಗುಡಿಸಲಿನಲ್ಲಿ ಉಳಿದುಕೊಳ್ಳಲು ಬಿಟ್ಟಿದ್ದರು. ಮುಂದೆ ಇವರು ಗೋಪಿನಾಥನ್‌ಗೆ ಸರಿಯಾಗಿ ಸಂಬಳವನ್ನು ನೀಡದೇ ಹಾಗೂ ಅಗತ್ಯವಿದ್ದಾಗ ರಜೆಯನ್ನು ನೀಡದೇ ತೊಂದರೆ ನೀಡುತ್ತಿದ್ದರು ಹಾಗೂ ಕೆಲಸವನ್ನು ಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದರು ಎಂದು ದೂರಲಾಗಿದೆ.
ಅ.17ರಂದು ಗೋಪಿನಾಥನ್ ತನ್ನ ಪತ್ನಿ ಸುಧಾ ಕೆ.ಎಸ್. ಅವರಿಗೆ ವಾಯ್ಸ್ ಮೆಸೇಜ್‌ನಲ್ಲಿ 2-3 ಮೊಬೈಲ್ ನಂಬರ್‌ಗಳನ್ನು ಕಳುಹಿಸಿದ್ದರು. ಇವುಗಳನ್ನು ಮೊಬೈಲ್‌ನಲ್ಲಿ ಸೇವ್ ಮಾಡಿ ಇಟ್ಟುಕೊಂಡು ಸಂಜೆ ನಾನು ಫೋನ್ ಕರೆ ಸ್ವೀಕರಿಸದಿದ್ದರೆ ಈ ನಂಬರ್‌ಗಳನ್ನು ಪೋಲೀಸರಿಗೆ ತಿಳಿಸಿ ದೂರು ನೀಡುವಂತೆ ವಾಯ್ಸ್ ಮೆಸೇಜ್‌ನಲ್ಲಿ ತಿಳಿಸಿದ್ದರು. ಡಿ.19ರಂದು ದಿಲೀಪ್, ಸುಧಾ ಅವರಿಗೆ ಫೋನ್ ಮಾಡಿ ನಿಮ್ಮ ಗಂಡ ನಾಪತ್ತೆಯಾಗಿದ್ದು, ದೂರು ನೀಡಲು ಆಧಾರ್ ಕಾರ್ಡ್ ಕಳುಹಿಸಿ ಎಂದು ಹೇಳಿ, ನಂತರ ನಿಮ್ಮ ಗಂಡ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆಂದು ತಿಳಿಸಿದ್ದರು.
ಸುಧಾ ಮತ್ತು ಅವರ ಮಗ ಬಂದು ನೋಡಿದಾಗ ಗೋಪಿನಾಥನ್ ಸುಟ್ಟ ಸ್ಥಿತಿಯಲ್ಲಿ ಮೃತಪಟ್ಟ ಬಗ್ಗೆ ತಿಳಿಯಿತು. ಗೋಪಿನಾಥನ್‌ಗೆ ಪೆಟ್ರೋಲ್ ಸುರಿದು ಕೊಂಡು ಕ್ರೂರ ರೀತಿಯಲ್ಲಿ ಆತ್ಮಹತ್ಯೆ ಮಾಡುವ ಯಾವುದೇ ಮನಸ್ಥಿತಿ ಇಲ್ಲದಿದ್ದು ಆರೋಪಿಗಳು ತಮ್ಮ ಕ್ರಿಮಿನಲ್ ಹಿನ್ನೆಲೆಯ ಆರೋಪಿಗಳೊಂದಿಗೆ ಗೋಪಿನಾಥನ್‌ಗೆ ಹಿಂಸೆ ನೀಡಿ ಆತ್ಮಹತ್ಯೆ ಮಾಡಲು ಪ್ರಚೋದಿಸಿರುವುದಾಗಿ ಸುಧಾ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.