ಮಂಗಳೂರು: ಚಿನ್ನಾಭರಣ ಕಳವು ಪ್ರಕರಣ; ಆರೋಪಿ ಸೆರೆ

ಮಂಗಳೂರು: ನಗರದ ರೈಲ್ವೆ ನಿಲ್ದಾಣದ ಪ್ಲಾಟ್‌ಫಾರಂನಲ್ಲಿ ಮಲಗಿದ್ದ ವ್ಯಕ್ತಿಯ ಚಿನ್ನಾಭರಣ ಕಳವು ಮಾಡಿದ್ದ ಆರೋಪಿ ಕೇರಳ ಕೋಝಿಕ್ಕೋಡ್‌ನ ಫಿರೋಸ್ ಪದಾವತ್ (38) ಎಂಬಾತನನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಯಿಂದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಪ್ಲಾಟ್‌ಫಾರಂನಲ್ಲಿ ಮಲಗಿದ್ದ ವ್ಯಕ್ತಿಯ ಬಳಿಯಿದ್ದ 24 ಗ್ರಾಂ ತೂಕದ ಒಂದು ಚಿನ್ನದ ಸರ, 24 ಗ್ರಾಂ ತೂಕದ ಒಂದು ಬ್ರಾಸ್ಲೆಟ್ ಕಳವಾದ ಬಗ್ಗೆ ಪ್ರಕರಣ ದಾಖಲಾಗಿತ್ತು.
ರೈಲ್ವೆ ಪೊಲೀಸ್ ಅಧೀಕ್ಷಕಿ ಡಾ. ಸೌಮ್ಯಲತಾ ಎಸ್.ಕೆ. ಅವರ ನಿರ್ದೇಶನದಂತೆ ಉಪಾಧೀಕ್ಷಕಿ ಗೀತಾ ಸಿ.ಆರ್ ಮಾರ್ಗದರ್ಶನದಂತೆ ಮಂಗಳೂರು ರೈಲ್ವೆ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಮೋಹನ್ ಕೊಟ್ಟಾರಿ ತನಿಖಾ ತಂಡವನ್ನು ರಚಿಸಿ ವಿಶೇಷ ಅಪರಾಧ ಪತ್ತೆ ದಳ ಸಿಬ್ಬಂದಿಯನ್ನು ನಿಯೋಜಿಸಿದ್ದರು.
ಡಿ.16ರಂದು ಕಣ್ಣೂರು-ಮಂಗಳೂರು ನಡುವೆ ಸಂಚರಿಸುತ್ತಿದ್ದ ರೈಲಿನಲ್ಲಿ ಆರೋಪಿಯನ್ನು ಬಂಧಿಸಲಾಗಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.