ಸೈನಿಕರನ್ನು ಎಷ್ಟು ಹೊಗಳಿದರೂ ಸಾಲದು: ರಾಜ್‌ನಾಥ್ ಸಿಂಗ್

ಹೊಸದಿಲ್ಲಿ: ಗಲ್ವಾನ್ ಕಣಿವೆಯಲ್ಲಿ ಮತ್ತು ಇತ್ತೀಚೆಗೆ ಅರುಣಾಚಲಪ್ರದೇಶದ ತವಾಂಗ್ ವಲಯದಲ್ಲಿ ಚೀನಾ ಸೈನಿಕರ ವಿರುದ್ಧ ಭಾರತೀಯ ಸೈನಿಕರು ಪ್ರದರ್ಶಿಸಿದ ಶೌರ್ಯ ಮತ್ತು ಪರಾಕ್ರಮ ಶ್ಲಾಘನಾರ್ಹವಾಗಿದೆ ಹಾಗೂ ಅದಕ್ಕಾಗಿ ಅವರನ್ನು ಎಷ್ಟು ಹೊಗಳಿದರೂ ಸಾಲದು ಎಂದು ರಕ್ಷಣಾ ಸಚಿವ ರಾಜ್ನಾಥ್ ಸಿಂಗ್ ಶನಿವಾರ ಹೇಳಿದ್ದಾರೆ.
ಕೈಗಾರಿಕೆಗಳ ಒಕ್ಕೂಟ ಎಫ್ಐಸಿಸಿಐಯ ಸಮಾರಂಭದಲ್ಲಿ ಮಾತನಾಡಿದ ಸಿಂಗ್, ಚೀನಾದೊಂದಿಗಿನ ಗಡಿ ಸಂಘರ್ಷವನ್ನು ಸರಕಾರ ನಿಭಾಯಿಸುತ್ತಿರುವ ವಿಷಯದಲ್ಲಿ ‘ಅನುಮಾನ’ ವ್ಯಕ್ತಪಡಿಸಿರುವುದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧವೂ ಪರೋಕ್ಷವಾಗಿ ಟೀಕಾಪ್ರಹಾರಗೈದರು.
‘ಗಲ್ವಾನ್ ಆಗಲಿ, ತವಾಂಗ್ ಆಗಲಿ, ಭಾರತೀಯ ಸಶಸ್ತ್ರ ಪಡೆಗಳು ಪ್ರದರ್ಶಿಸಿರುವ ಶೌರ್ಯ ಮತ್ತು ಪರಾಕ್ರಮವನ್ನು ಎಷ್ಟು ಹೊಗಳಿದರೂ ಸಾಲದುʼ ಎಂದು ರಕ್ಷಣಾ ಸಚಿವರು ಹೇಳಿದರು.
‘ಪ್ರತಿಪಕ್ಷದಲ್ಲಿರುವ ಯಾವುದೇ ನಾಯಕನ ಉದ್ದೇಶವನ್ನು ನಾವು ಯಾವತ್ತೂ ಪ್ರಶ್ನಿಸಿಲ್ಲ. ನೀತಿಗಳಿಗೆ ಅನುಗುಣವಾಗಿ ನಾವು ಆ ಬಗ್ಗೆ ಚರ್ಚೆ ಮಾತ್ರ ಮಾಡಿದ್ದೇವೆ. ರಾಜಕೀಯವು ಸತ್ಯದ ಆಧಾರದಲ್ಲಿ ನಡೆಯಬೇಕು. ಸುಳ್ಳುಗಳ ಆಧಾರದಲ್ಲಿ ಸುದೀರ್ಘ ಅವಧಿಯವರೆಗೆ ರಾಜಕೀಯ ಮಾಡಲು ಸಾಧ್ಯವಿಲ್ಲ. ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುವುದನ್ನು ‘ರಾಜನೀತಿ’ (ರಾಜಕೀಯ) ಎನ್ನುತ್ತಾರೆ. ಒಬ್ಬರ ಉದ್ದೇಶವನ್ನು ಯಾವಾಗಲೂ ಸಂದೇಹಿಸುವ ಹಿಂದಿನ ಕಾರಣ ನನಗೆ ಅರ್ಥವಾಗುವುದಿಲ್ಲ’ ಎಂದು ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯ ನಾಯಕತ್ವದಡಿ ಭಾರತದ ಸ್ಥಾನಮಾನವು ಗಣನೀಯವಾಗಿ ಹೆಚ್ಚಿದೆ ಎಂದು ಸಿಂಗ್ ಹೇಳಿದರು. ಈಗ ಭಾರತವು ಜಾಗತಿಕ ರಂಗದಲ್ಲಿ ತನ್ನ ಕಾರ್ಯಸೂಚಿಯನ್ನು ಸಾಧಿಸುವ ಹಂತಕ್ಕೆ ಏರಿದೆ ಎಂದು ಅವರು ಅಭಿಪ್ರಾಯಪಟ್ಟರು.







